ರಾಜ್ಯಸಭೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಬಿಜೆಪಿಯಲ್ಲಿ ಯಾರಿಗೂ ಬೇಸರವಿಲ್ಲ: ರಮೇಶ್ ಜಾರಕಿಹೊಳಿ

Update: 2020-06-09 10:45 GMT

ಬೆಂಗಳೂರು, ಜೂ.9: ರಾಜ್ಯಸಭೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ರಮೇಶ್ ಕತ್ತಿ, ಉಮೇಶ್ ಕತ್ತಿ, ಪ್ರಭಾಕರ್ ಕೋರೆ ಸೇರಿದಂತೆ ಯಾರಿಗೂ ಅಸಮಾಧಾನವಾಗಿಲ್ಲ. ಕಾರ್ಯಕರ್ತರಿಗೆ ಅವಕಾಶ ಕಲ್ಪಿಸಿರುವುದಕ್ಕೆ ಅವರಿಗೂ ಖುಷಿಯಾಗಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.

ಮಂಗಳವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭ್ಯರ್ಥಿಗಳ ನಾಮಪತ್ರ ಪ್ರಕ್ರಿಯೆ ಮುಗಿದ ಬಳಿಕ ಉಮೇಶ್ ಕತ್ತಿಯನ್ನು ಭೇಟಿ ಮಾಡುತ್ತೇನೆ. ನಾವು ಬೆಳಗಾವಿ ಜಿಲ್ಲೆಯ ನಾಯಕರು ಮತ್ತೆ ಸಭೆ ಸೇರುತ್ತೇವೆ. ನಾವೆಲ್ಲ ಊಟಕ್ಕೆ ಆಗಾಗ ಸೇರೋದು ಮೊದಲಿನಿಂದಲೂ ನಡೆದುಕೊಂಡ ಪದ್ಧತಿ. ಅದರಲ್ಲಿ ಯಾವುದೆ ತಪ್ಪು ಹುಡುಕುವ ಅಗತ್ಯವಿಲ್ಲ ಎಂದರು.

ನಮ್ಮ ಪಕ್ಷ ಶಿಸ್ತಿನ ಪಕ್ಷ. ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಗಳಿಗೆ ನಾವು ಬದ್ಧ. ಈ ಪಕ್ಷದಲ್ಲಿ ಅಪಸ್ವರ ಇರಲು ಸಾಧ್ಯವಿಲ್ಲ. ಕಾರ್ಯಕರ್ತರಿಗೆ ರಾಜ್ಯಸಭೆ ಟಿಕೆಟ್ ಕೊಡುವ ಮೂಲಕ ಬಿಜೆಪಿ ಇತಿಹಾಸ ಸೃಷ್ಟಿಸಿದೆ. ಬೇರೆ ಪಕ್ಷಗಳು ಬಿಜೆಪಿಯನ್ನು ನೋಡಿ ಕಲಿಯುವುದು ತುಂಬಾ ಇದೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.

ಮೆಂಟಲ್‍ಗಳು ಏನೇನೋ ಮಾತನಾಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದ ರಮೇಶ್ ಜಾರಕಿಹೊಳಿ, ಯಾರು ಮೆಂಟಲ್ ಅಂತ ಸೂಕ್ತ ಸಂದರ್ಭದಲ್ಲಿ ಬಹಿರಂಗಪಡಿಸುತ್ತೇನೆ. ಯಾರು ಮೆಂಟಲ್ ಅನ್ನೋದನ್ನ ಅವರ ಬಾಡಿ ಲಾಂಗ್ವೆಜ್ ನೋಡಿ ತಿಳಿದುಕೊಳ್ಳಬಹುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News