ರಾಜ್ಯಸಭೆಗೆ ನನ್ನ ಅವಿರೋಧ ಆಯ್ಕೆಗೆ ಬಿಜೆಪಿಯ ಬೆಂಬಲವೂ ಇದೆ: ದೇವೇಗೌಡ

Update: 2020-06-09 14:22 GMT

ಬೆಂಗಳೂರು, ಜೂ. 8: ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ನನ್ನ ಅವಿರೋಧ ಆಯ್ಕೆಗೆ ಕಾಂಗ್ರೆಸ್ ಹಾಗೂ ಬಿಜೆಪಿಯ ಬೆಂಬಲವೂ ಇದೆ. ಬಿಜೆಪಿಯಲ್ಲಿ ಹಲವು ಮಂದಿ ಆಕಾಂಕ್ಷಿಗಳಿದ್ದರೂ ಮೂರನೆ ಅಭ್ಯರ್ಥಿಯನ್ನು ಕಣಕ್ಕಿಳಿಸಲಿಲ್ಲ ಎಂದು ಜೆಡಿಎಸ್ ವರಿಷ್ಟ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿನ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಮೂರನೆ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂದು ಬಿಜೆಪಿಯ ಶಾಸಕ ಅರವಿಂದ ಲಿಂಬಾವಳಿ ನನಗೆ ತಿಳಿಸಿದ್ದರು. ಆದರೆ, ಆ ಪಕ್ಷದ ಯಾರೊಬ್ಬರೂ ನನ್ನನ್ನು ಭೇಟಿ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.

ನನಗೆ ಸ್ಪರ್ಧಿಸುವ ಇಚ್ಛೆ ಇರಲಿಲ್ಲ. ಜೆಡಿಎಸ್ ಶಾಸಕರ ಒತ್ತಾಯಕ್ಕೆ ಮಣಿದು ಚುನಾವಣೆ ನಾಮಪತ್ರ ಸಲ್ಲಿಸಿದ್ದೇನೆ. ದಿಲ್ಲಿಯಿಂದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು ವಿಡಿಯೋ ಸಂವಾದದಲ್ಲಿ ಮನಸ್ಸು ಬಿಚ್ಚಿ ಮಾತನಾಡಿದ್ದರು. ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರಿಗೂ ನಾನು ಆಭಾರಿಯಾಗಿದ್ದೇನೆ ಎಂದು ದೇವೇಗೌಡ ಇದೇ ವೇಳೆ ಹೇಳಿದರು.

ನಾನು ನನ್ನ ಜೀವನದಲ್ಲಿ ಎಂದೂ ಸಿದ್ಧಾಂತದ ಜೊತೆಗೆ ಯಾವುದೇ ರಾಜಿ ಮಾಡಿಕೊಂಡಿಲ್ಲ. ಜೀವನದುದ್ದಕ್ಕೂ ಜಾತ್ಯತೀತ ನಿಲುವಿಗಾಗಿ ಹೋರಾಟ ಮಾಡಿದ್ದೇನೆ. ಯಾರೊಬ್ಬರೂ ಪ್ರಶ್ನೆ ಮಾಡಲು ಅವಕಾಶವಿಲ್ಲದಂತೆ ನಡೆದುಕೊಂಡಿದ್ದೇನೆ. ರಾಜ್ಯದ ಜನರ ಸಮಸ್ಯೆಗಳಿಗೆ ರಾಜ್ಯಸಭೆಯಲ್ಲಿ ಹೋರಾಟ ನಡೆಸುತ್ತೇನೆ. ನಾನು ಎಂದೂ ಯಾರೊಬ್ಬರ ಮುಲಾಜಿಗೂ ಒಳಗಾಗುವುದಿಲ್ಲ ಎಂದು ದೇವೇಗೌಡ ನುಡಿದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರಚನೆ ಮಾಡುವ ವೇಳೆ ಕುಮಾರಸ್ವಾಮಿ ಸಿಎಂ ಮಾಡಲು ನಾನು ಒಪ್ಪಿರಲಿಲ್ಲ. ರಾಷ್ಟ್ರದ ಪ್ರಮುಖ ಜಾತ್ಯತೀತ ನಾಯಕರನ್ನು ಕರೆಸಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಸಲಾಯಿತು ಎಂದ ದೇವೇಗೌಡ, ಜಾತ್ಯತೀತ ಹೋರಾಟ ಮುಂದುವರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಗೌಡರ ಆಯ್ಕೆ ಹೊಂದಾಣಿಕೆ ರಾಜಕಾರಣವಲ್ಲ: ರಾಜ್ಯಸಭೆಗೆ ದೇವೇಗೌಡರ ಆಯ್ಕೆ ಯಾವುದೇ ಸಂದರ್ಭದಲ್ಲಿಯೂ ಹೊಂದಾಣಿಕೆ ರಾಜಕಾರಣವಲ್ಲ. ಅವರಿಗೆ ಯಾವುದೇ ಅಧಿಕಾರದ ಆಸೆ ಇಲ್ಲ. ನಾಮಪತ್ರ ಸಲ್ಲಿಸುವ ಆಸಕ್ತಿಯೂ ಇರಲಿಲ್ಲ. ಪಕ್ಷದ ಎಲ್ಲ ಶಾಸಕರ ಒತ್ತಾಯಕ್ಕೆ ಮಣಿದು ಉಮೇದುವಾರಿಕೆ ಸಲ್ಲಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.

ಇದು ಅನಿರೀಕ್ಷಿತ ಬೆಳವಣಿಗೆ. ಹೀಗಾಗಿ ರಾಜ್ಯದ ಕಾಂಗ್ರೆಸ್, ಬಿಜೆಪಿ ನಾಯಕರ ಜೊತೆ ಚರ್ಚೆ ಮಾಡಿಲ್ಲ. ರಾಷ್ಟ್ರ ರಾಜಕಾರಣದಲ್ಲಿ ದೇವೇಗೌಡರಂತಹ ಹಿರಿಯರ ಅನುಪಸ್ಥಿತಿ ಕಾಡುತ್ತಿದೆ. ದೇಶದಲ್ಲಿ ಹಲವು ಬೆಳವಣಿಗೆಗಳಾಗುತ್ತಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ಬೆಳವಣಿಗೆಗಳಾಗುತ್ತಿವೆ. ಹೀಗಾಗಿ ಇಂತಹ ಸಂದರ್ಭದಲ್ಲಿ ಹಿರಿಯರ ಮಾರ್ಗದರ್ಶನ ಅಗತ್ಯ ಎಂದರು.

ಜೆಡಿಎಸ್‍ನ 34 ಮಂದಿ ಶಾಸಕರಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ 22 ಹೆಚ್ಚುವರಿ ಮತಗಳಿದ್ದು, ಬಿಜೆಪಿಯ 27 ಮತಗಳು ಉಳಿಯಲಿವೆ. ಹೀಗಾಗಿ ಹೆಚ್ಚುವರಿ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದರೆ ನಮ್ಮ ಪಾತ್ರ ಬಹಳ ಮಹತ್ವದಾಗುತ್ತಿತ್ತು. ಬಿಜೆಪಿ 2, ಕಾಂಗ್ರೆಸ್ ಒಂದು ಸ್ಥಾನ ಮಾತ್ರ ಗೆಲ್ಲಲು ಅನುಕೂಲಕರ ಸಂಖ್ಯಾಬಲವಿದೆ ಎಂದು ಹೇಳಿದರು.

ನನ್ನ ಸರಕಾರವನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅಸ್ಥಿರಗೊಳಿಸಿದವು. ಅದೇ ಈ ಸರಕಾರಕ್ಕೆ ಗಂಡಾಂತರ ತಂದೊಡ್ಡುವ ಸಾಧ್ಯತೆಗಳಿದ್ದು ಬಿಜೆಪಿ ನಾಯಕರು ಎಚ್ಚರಿಕೆಯಿಂದ ಇರಬೇಕು. ಆದರೆ, ನಾವು ಈ ಸರಕಾರವನ್ನು ಅಸ್ಥಿರಗೊಳಿಸಲು ಯಾವುದೇ ಕಾರಣಕ್ಕೂ ಪ್ರಯತ್ನಪಡುವುದಿಲ್ಲ. ಇಂತಹ ಪ್ರಯತ್ನಕ್ಕೆ ನಾನು ಬೆಂಬಲ ನೀಡುವುದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News