ಕೆಎಸ್ಸಾರ್ಟಿಸಿ ಚಾಲಕ-ನಿರ್ವಾಹಕರು ಕೊರೋನ ವಾರಿಯರ್ಸ್: ವ್ಯವಸ್ಥಾಪಕ ನಿರ್ದೇಶಕ ಕಳಸದ

Update: 2020-06-09 18:03 GMT

ಬೆಂಗಳೂರು, ಜೂ.9: ಸಾರಿಗೆ ಸಂಸ್ಥೆಗಳಿಗೆ ಕೊರೋನ ಹೊಸ ಸವಾಲೊಂದನ್ನು ತಂದೊಡ್ಡಿದ್ದು, ಕೆಎಸ್ಸಾರ್ಟಿಸಿ ಚಾಲಕ-ನಿರ್ವಾಹಕರು ಕೊರೋನ ವಾರಿಯರ್ಸ್ ಗಳಂತೆ ಕೆಲಸ ಮಾಡುತ್ತಿದ್ದಾರೆ ಎಂದು ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಹೇಳಿದ್ದಾರೆ.

ಮಂಗಳವಾರ ನಗರದಲ್ಲಿಂದು ನಿಗಮದ ಸಿಬ್ಬಂದಿಗಳು ಕೊವಿಡ್-19 ಎದುರಿಸುವಲ್ಲಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಕಾರ್ಯಗಾರ ಮತ್ತು ರೋಗ ನಿರೋಧಕ ಹೋಮಿಯೋಪತಿ ಔಷಧಿಗಳ ವಿತರಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೆಎಸ್ಸಾರ್ಟಿಸಿ ಸಿಬ್ಬಂದಿಗಳಿಗೂ ಸಾಕಷ್ಟು ಭಯವಿದೆ. ಈ ಸಮಯದಲ್ಲಿ ನಾವು ಎಷ್ಟೇ ಮಾರ್ಗಸೂಚಿಗಳನ್ನು ಹೊರಡಿಸಿದರೂ, ಅದನ್ನು ವೈದ್ಯರು ಹೇಳಿದರೆ ಅದಕ್ಕೆ ಮನ್ನಣೆ ಹೆಚ್ಚು ಮತ್ತು ಸಿಬ್ಬಂದಿಗಳಲ್ಲಿ ಒಂದು ರೀತಿಯ ಆಶಾಭಾವ ಬರುತ್ತದೆಂಬ ಕಾರಣದಿಂದ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಖ್ಯಾತ ಹೋಮಿಯೋಪತಿ ವೈದ್ಯರಾದ ಡಾ.ಬಿ.ಟಿ. ರುದ್ರೇಶ್ ಮಾತನಾಡಿ, ಕೋವಿಡ್ ಭಯ ಬೇಡ ಜಾಗ್ರತೆ ಇರಬೇಕು. ಭಯದಿಂದಲೇ ನಮ್ಮಲ್ಲಿನ ರೋಗ ನಿರೋಧಕ ಶಕ್ತಿಯು ಕುಂದುತ್ತದೆ.  ಹೋಮಿಯೋಪತಿ ಔಷಧವನ್ನು ತೆಗೆದುಕೊಳ್ಳುವುದರಿಂದ ಒಂದು ರೀತಿ ನಿರೋಧಕ ಕವಚದಂತೆ ಅದು ಕೆಲಸ ಮಾಡುತ್ತದೆ. ಆದರೆ ಸುರಕ್ಷಿತ ಅಂತರ, ಮಾಸ್ಕ್ ಧರಿಸುವುದು, ಸ್ವಚ್ವತೆ ಕಾಪಾಡುವುದನ್ನು ಬಿಡಬಾರದು. ಕೊರೋನದಿಂದ ಭಯ ಮುಕ್ತರಾಗಿ ಜಾಗ್ರತೆ ವಹಿಸಿ ಕೆಲಸ ನಿರ್ವಹಿಸಿ ಎಂದು ಸಲಹೆ ನೀಡಿದರು.

ಈ ರೀತಿಯ ಕಾರ್ಯಕ್ರಮಗಳು ಸಿಬ್ಬಂದಿಗಳಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಬಹುಉಪಯುಕ್ತವಾಗುತ್ತವೆ ಹಾಗೂ ಆತ್ಮಸ್ಥೆರ್ಯ ಹೆಚ್ಚಿಸುವ ಉಪಕ್ರಮವಾಗಿದೆಯೆಂದು ತಿಳಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕಿ ಕವಿತಾ ಎಸ್. ಮನ್ನಿಕೇರಿ, ನಿರ್ದೇಶಕರು (ಭದ್ರತಾ-ಜಾಗೃತ) ಡಾ.ರಾಮ್ ನಿವಾಸ್ ಸಪೆಟ್, ಮುಖ್ಯ ವೈದ್ಯಾಧಿಕಾರಿ ಡಾ. ಹರೀಶ್ ಸೇರಿದಂತೆ ಹಿರಿಯ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News