×
Ad

ರಾಜ್ಯದ 14 ಕಡೆಗಳಲ್ಲಿ ಎಸಿಬಿ ತಂಡಗಳಿಂದ ಕಾರ್ಯಾಚರಣೆ

Update: 2020-06-10 12:38 IST

ಬೆಂಗಳೂರು, ಜೂ.10: ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಎಲ್.ಸತೀಶ್ ಕುಮಾರ್ ಹಾಗೂ ರಾಯಚೂರು ಜಿಲ್ಲಾ ನಗರ ಅಭಿವೃದ್ಧಿ ಕೋಶ ಕಾರ್ಯಾನಿರ್ವಾಹಕ ಅಭಿಯಂತರ ಗೋಪ ಶೆಟ್ಟಿ ಮಲ್ಲಿಕಾರ್ಜುನ ಸೇರಿ ನಾಲ್ವರು ಸರಕಾರಿ ಅಧಿಕಾರಿಗಳ ಕಚೇರಿ, ನಿವಾಸ ಸೇರಿ 14 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿರುವ ಎಸಿಬಿ ತನಿಖಾಧಿಕಾರಿಗಳು, ಅಧಿಕಾರಿಯೊರ್ವರ ಪತ್ನಿ ಹೆಸರಿನಲ್ಲಿ ಪೆಟ್ರೋಲ್ ಬಂಕ್, ಟ್ರ್ಯಾಕ್ಟರ್ ಶೋರೂಂ ಒಳಗೊಂಡತೆ ಕೋಟ್ಯಾಂತರ ಮೌಲ್ಯದ ಅಕ್ರಮ ಆಸ್ತಿ ದಾಖಲೆ ಪತ್ರಗಳನ್ನು ಪತ್ತೆ ಹಚ್ಚಿದ್ದಾರೆ.

ಬುಧವಾರ ಬೆಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಎಲ್.ಸತೀಶ್ ಕುಮಾರ್, ಕೋಲಾರ ಜಿಲ್ಲೆಯ ಶ್ರೀನಿವಾಸಪುರ ವಲಯ ಅರಣ್ಯಾಧಿಕಾರಿ ಎನ್. ರಾಮಕೃಷ್ಣ, ರಾಯಚೂರು ಜಿಲ್ಲಾ ನಗರ ಅಭಿವೃದ್ಧಿ ಕೋಶ ಕಾರ್ಯಾನಿರ್ವಾಹಕ ಅಭಿಯಂತರ ಗೋಪ ಶೆಟ್ಟಿ ಮಲ್ಲಿಕಾರ್ಜುನ, ಬಾಗಲಕೋಟೆ ಆಲಮಟ್ಟಿ ಕ್ಯಾಂಪ್‍ನ ಸಹಾಯಕ ಅಭಿಯಂತರ, ರಾಘಪ್ಪ ಲಾಲಪ್ಪ ಲಮಾಣಿ ಸೇರಿ ನಾಲ್ವರು ಅಧಿಕಾರಿಗಳ ಕಚೇರಿ ಮನೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಎಸಿಬಿ ಅಧಿಕೃತ ಮೂಲಗಳು ತಿಳಿಸಿವೆ.

ಇಲ್ಲಿನ ಗಾಂಧಿನಗರದಲ್ಲಿರುವ ಸತೀಶ್ ಕುಮಾರ್ ಅವರ ವಾಣಿಜ್ಯ ತೆರಿಗೆ ಕಚೇರಿ, ಮೈಸೂರಿನ ಟಿ.ಕೆ.ಲೇಔಟ್ ನ ಮನೆ, ಡಾಲರ್ಸ್ಸ್ ಕಾಲೋನಿಯ ಬಾಡಿಗೆ ಮನೆ, ಮೇಲೆ ದಾಳಿ ನಡೆಸಿ ಅಕ್ರಮ ಆಸ್ತಿ ಪಾಸ್ತಿಯನ್ನು ಪತ್ತೆ ಮಾಡಲಾಗಿದೆ. ಅದೇ ರೀತಿ, ವಲಯ ಅರಣ್ಯಾಧಿಕಾರಿ ರಾಮಕೃಷ್ಣ ಅವರ ಶ್ರೀನಿವಾಸಪುರ ವಲಯ ಅರಣ್ಯ ಅಧಿಕಾರಿಗಳ ಕಚೇರಿ, ಬಂಗಾರ ಪೇಟೆಯ ಮನೆ, ಕೋಲಾರ ನಗರದಲ್ಲಿರುವ ಮನೆ, ಮಿಟ್ಟಳ್ಳಿ ಗ್ರಾಮದ ಮನೆ, ಬೆಂಗಳೂರಿನ ಮನೆ, ಸ್ನೇಹಿತರ ಮನೆಗಳ ಮೇಲೂ ದಾಳಿ ನಡೆಸಲಾಗಿದೆ.

ಪತ್ನಿ ಹೆಸರಿನಲ್ಲಿ ಪೆಟ್ರೋಲ್ ಬಂಕ್: ಗೋಪ ಶೆಟ್ಟಿ ಮಲ್ಲಿಕಾರ್ಜುನ ಅವರ ರಾಯಚೂರಿನ ನಗರಭಿವೃದ್ಧಿ ಕೋಶದ ಕಚೇರಿ ರಾಯಚೂರಿನ 2 ಮನೆ, ಲಿಂಗಾಸಗೂರು ರಸ್ತೆಯ ಪತ್ನಿ ಹೆಸರಿನಲ್ಲಿನ ಪೆಟ್ರೋಲ್ ಬಂಕ್, ಟ್ರ್ಯಾಕ್ಟರ್ ಶೋರೂಂ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.

ರಾಗಪ್ಪ ಲಾಲಪ್ಪ ಲಮಾಣಿ ಅವರ ಆಲಮಟ್ಟಿ ಕ್ಯಾಂಪ್‍ನ ಕಚೇರಿ, ಬಾಗಲಕೋಟೆಯ ವಿದ್ಯಾನಗರದ ವಿದ್ಯಾಗಿರಿ 8ನೆ ಕ್ರಾಸ್‍ನ ಮನೆ, ಸಿರಗುಪ್ಪಿಯಲ್ಲಿನ ಸಹೋದರನ ವಾಸದ ಮನೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಎಸಿಬಿಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News