ಡಿ.ಕೆ.ಶಿವಕುಮಾರ್ ಪದಗ್ರಹಣ ದೇಶಕ್ಕೆ ಬಹಳ ಮುಖ್ಯ: ಸಚಿವ ಆರ್.ಅಶೋಕ್ ಲೇವಡಿ

Update: 2020-06-10 11:47 GMT

ಬೆಂಗಳೂರು, ಜೂ. 10: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮ ಕರ್ನಾಟಕ ರಾಜ್ಯ ಹಾಗೂ ದೇಶಕ್ಕೆ ಬಹಳ ಮುಖ್ಯ. ಕೊರೋನ ಸೋಂಕಿನ ಸಂದರ್ಭದಲ್ಲಿ ಪದಗ್ರಹಣದ ಅದ್ದೂರಿ ಸಮಾರಂಭಕ್ಕೆ ಅವರಿಗಾಗಿಯೇ ಕಾನೂನು ತಿದ್ದುಪಡಿ ಮಾಡುವ ಅಗತ್ಯವಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಲೇವಡಿ ಮಾಡಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ರಾಜ್ಯ ಸರಕಾರ ಅಡ್ಡಿಪಡಿಸುವ ಪ್ರಶ್ನೆಯೇ ಇಲ್ಲ. ಕೊರೋನ ಸೋಂಕು ನಿಯಂತ್ರಣಕ್ಕಾಗಿ ದೇಶದ 130 ಜನರ ಹಿತದೃಷ್ಟಿಯಿಂದ ಲಾಕ್‍ಡೌನ್ ಮಾಡಲಾಗಿದ್ದು, ಈ ಸಂಬಂಧ ಕಠಿಣ ಕಾನೂನು ರೂಪಿಸಲಾಗಿದೆ. ಶಿವಕುಮಾರ್ ಅವರೊಬ್ಬರಿಗೆ ಪ್ರತ್ಯೇಕ ಕಾನೂನು ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ಅವಕಾಶ ನಿರಾಕರಿಸಲಾಗಿದೆ ಎಂದು ಆರೋಪ ಮಾಡಲಾಗುತ್ತಿದೆ. ಕೊರೋನ ಸೋಂಕಿನ ನೆಪದಲ್ಲಿ ನಾವು ಅಡ್ಡಿಪಡಿಸುವ ಪ್ರಶ್ನೆಯೇ ಇಲ್ಲ. ಸೋಂಕು ಹಬ್ಬುವ ದೃಷ್ಟಿಯಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕಿದೆ. ಹೀಗಾಗಿ ಅದ್ದೂರಿ ಸಭೆ, ಸಮಾರಂಭಗಳಿಗೆ ಅವಕಾಶವಿಲ್ಲ. ಹೀಗಿರುವಾಗಿ ಸರಕಾರ ಅಡ್ಡಿಪಡಿಸುತ್ತಿದೆ ಎಂಬ ಆರೋಪದಲ್ಲಿ ಹುರುಳಿಲ್ಲ ಎಂದು ಅಶೋಕ್ ಹೇಳಿದರು.

ಆರಂಭದಿಂದಲೂ ರಾಜ್ಯ ಸರಕಾರಕ್ಕೂ ಮತ್ತು ಕಾಂಗ್ರೆಸ್ ಪಕ್ಷಕ್ಕೂ ಅಷ್ಟಕಷ್ಟೇ. ಹೀಗಾಗಿ ಸರಕಾರ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ಕಾಂಗ್ರೆಸ್ ಮುಖಂಡರು ಅನಗತ್ಯ ಆಪಾದನೆ ಮಾಡುತ್ತಿದ್ದಾರೆ. ಜನಸಂದಣಿ ಇಲ್ಲದೆ ಸುರಕ್ಷಿತ ಅಂತರ ಕಾಯ್ದುಕೊಂಡು ಸರಳ ಸಭೆಗೆ ಯಾರೂ ಅಡ್ಡಿಪಡಿಸುವುದಿಲ್ಲ ಎಂದರು.

ವಂಶಪಾರಂಪರ್ಯ: ರಾಜ್ಯಸಭೆ ಚುನಾವಣೆ ಅಭ್ಯರ್ಥಿ ಆಯ್ಕೆಯಲ್ಲಿ ಕಾಂಗ್ರೆಸ್ ವಂಶ ಪಾರಂಪರ್ಯ ರಾಜಕಾರಣಕ್ಕೆ ಮಣೆಹಾಕಿದ್ದು, ಚುನಾವಣೆಯಲ್ಲಿ ಸೋತ ಮತ್ತು ನಿವೃತ್ತರಾದವರನ್ನು ಆಯ್ಕೆ ಮಾಡಿದೆ. ಆದರೆ, ಬಿಜೆಪಿ ತನ್ನ ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ನೀಡುವ ಮೂಲಕ ಎಲ್ಲ ಪಕ್ಷಗಳಿಗೆ ಮಾದರಿಯಾಗಿದೆ ಎಂದು ಅಶೋಕ್ ಹೇಳಿದರು.

ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ನಾನು ಪಾಲ್ಗೊಂಡಿದ್ದೆ. ರಾಜ್ಯಸಭೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಹಿನ್ನಡೆಯಾಗಿದೆ ಎಂಬುದು ಸುಳ್ಳು. ಹೈಕಮಾಂಡ್ ಪ್ರಮುಖ ಕಾರ್ಯಕರ್ತರ ಹೆಸರು ನೀಡುವಂತೆ ಸಿಎಂ ಮತ್ತು ಪಕ್ಷದ ಅಧ್ಯಕ್ಷರಿಗೆ ಕೋರಿತ್ತು. ಆ ಬಳಿಕ ರಾಜ್ಯದ ಮುಖಂಡರೊಂದಿಗೆ ಸಮಾಲೋಚನೆ ನಡೆಸಿಯೇ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.

ಚರ್ಚಿಸಿಯೇ ಆಯ್ಕೆ: ವಿಧಾನ ಪರಿಷತ್ತಿನ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿಯೂ ಚರ್ಚಿಸಿ ಅಂತಿಮಗೊಳಿಸಲಾಗುತ್ತದೆ. ಬಿಜೆಪಿ ಸರಕಾರ ರಚನೆ ಸಂದರ್ಭದಲ್ಲಿ ಯಡಿಯೂರಪ್ಪ ಮತ್ತು ವರಿಷ್ಟರು ನೀಡಿದ ಭರವಸೆಗಳನ್ನು ಪರಿಗಣಿಸಬೇಕಾಗುತ್ತದೆ. ಹೀಗಾಗಿ ಶೀಘ್ರವೇ ಅಭ್ಯರ್ಥಿಗಳನ್ನು ವರಿಷ್ಟರೊಂದಿಗೆ ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News