×
Ad

ಬೆಂಗಳೂರು: 42 ಹೊಸ ಕೊರೋನ ಪ್ರಕರಣಗಳು ದೃಢ, ಇಬ್ಬರು ಸಾವು

Update: 2020-06-10 21:23 IST

ಬೆಂಗಳೂರು, ಜೂ.10: ನಗರದಲ್ಲಿ ಬುಧವಾರ 42 ಹೊಸ ಕೊರೋನ ಪ್ರಕರಣ ದೃಢಪಟ್ಟಿದೆ. ಇಬ್ಬರು ಮೃತಪಟ್ಟಿದ್ದಾರೆ. ಇದುವರೆಗೆ 298 ಸೋಂಕಿತರು ಗುಣಮುಖರಾಗಿದ್ದಾರೆ.

ಓರ್ವ ಪೊಲೀಸ್ ಕಾನ್‍ಸ್ಟೇಬಲ್‍ಗೂ ಕೊರೋನ ಸೋಂಕು ತಗುಲಿದ್ದರಿಂದ ಠಾಣೆಯನ್ನು ಸೀಲ್‍ಡೌನ್ ಮಾಡಿ, ಆತನ ಸಂಪರ್ಕದಲ್ಲಿದ್ದ 8 ಮಂದಿ ಪೊಲೀಸರನ್ನು ಕ್ವಾರಂಟೈನ್‍ಗೆ ಮಾಡಲಾಗಿದ್ದು, ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತಿದ್ದ ನಾಲ್ವರಿಗೆ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಹೆಣ್ಣೂರು ಪೊಲೀಸ್ ಠಾಣೆ ಸೀಲ್‍ಡೌನ್: ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಹೆಣ್ಣೂರು ಪೊಲೀಸ್ ಠಾಣೆಯ ಹೆಡ್ ಕಾನ್‍ಸ್ಟೇಬಲ್‍ಗೆ ಕೊರೋನ ಸೋಂಕು ಕಾಣಿಸಿಕೊಂಡಿದ್ದರಿಂದ ಠಾಣೆಯನ್ನು ಸೀಲ್‍ಡೌನ್ ಮಾಡಲಾಗಿದೆ. ಬುಧವಾರ ಬಿಡುಗಡೆಯಾದ ಹೆಲ್ತ್ ಬುಲಿಟಿನ್‍ನಲ್ಲಿ ರೋಗಿ ಸಂಖ್ಯೆ 6005ರ 32 ವರ್ಷದ ಕೋರ್ಟ್ ಬೀಟ್ ಮಾಡುತ್ತಿದ್ದ ಹೆಡ್ ಕಾನ್‍ಸ್ಟೇಬಲ್‍ಗೆ ವಿಷಮ ಜ್ವರ(ಐಎಲ್‍ಐ) ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ನಿಗದಿತ ಆಸ್ಪತೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರು ಪತ್ನಿ ಹಾಗೂ ಮಗುವಿನ ಜತೆ ವಾಸವಾಗಿದ್ದರು. ಹಾಗೇ ಠಾಣೆಯ 8 ಜನ ಪೊಲೀಸ್ ಸಿಬ್ಬಂದಿ ಸೇರಿದಂತೆ 10 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.

ಇಬ್ಬರು ಸೋಂಕಿತರ ಸಾವು

ಬೆಂಗಳೂರು ಮೂಲದ ಇಬ್ಬರು ಕೊರೋನ ಸೋಂಕಿತರು ಮೃಪಟ್ಟಿದ್ದಾರೆ. ಬೆಂಗಳೂರು ಮೂಲದ ರೋಗಿ ಸಂಖ್ಯೆ 6006ರ 32 ವರ್ಷದ ವ್ಯಕ್ತಿಗೆ ಕೊರೋನ ಕಾಣಿಸಿಕೊಂಡಿದ್ದರಿಂದ ನಿಗದಿತ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಬೆಂಗಳೂರು ಮೂಲದ 57 ವರ್ಷದ ವ್ಯಕ್ತಿ ಐಎಲ್‍ಐ ನಿಂದ ಬಳಲುತಿದ್ದು, ವಿಪರೀತ ಜ್ವರ ಹಾಗೂ ಕೆಮ್ಮಿನ ಹಿನ್ನೆಲೆಯಲ್ಲಿ ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಮಾಸ್ಕ್ ಧರಿಸದವರಿಂದ 69,400 ರೂ.ಸಂಗ್ರಹ

ಮಾರ್ಷಲ್‍ಗಳು ಪಾಲಿಕೆ ವ್ಯಾಪ್ತಿಯಲ್ಲಿ ನಗರದಲ್ಲಿ ಮಾಸ್ಕ್ ಧರಿಸದೆ ಹಾಗೂ ಸುರಕ್ಷಿತ ಅಂತರ ಕಾಯ್ದುಕೊಳ್ಳದೇ ಇರುವ ಒಟ್ಟು 347 ಮಂದಿಯಿಂದ 69,400 ರೂ. ದಂಡ ಸಂಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News