ಬನ್ನೇರುಘಟ್ಟ ಉದ್ಯಾನವನ ಸಾರ್ವಜನಿಕ ಪ್ರವೇಶಕ್ಕೆ ಮುಕ್ತ

Update: 2020-06-10 17:11 GMT

ಬೆಂಗಳೂರು, ಜೂ.10: ಕೊರೋನ ಸೋಂಕು ಹರುಡುವಿಕೆ ತಡೆಯುವ ಹಿನ್ನಲೆಯಲ್ಲಿ ಕಳೆದ 86 ದಿನಗಳಿಂದ ಬಂದ್ ಆಗಿದ್ದ ಬನ್ನೇರುಘಟ್ಟ ಜೈವಿಕ ಉದ್ಯಾನವನ ಇದೀಗ ಪುನಾರಂಭವಾಗಿದೆ. ಸರಕಾರದ ಅನುಮತಿ ದೊರೆತಿರುವ ಹಿನ್ನೆಲೆಯಲ್ಲಿ ಉದ್ಯಾನವನದ ಸಫಾರಿ, ಮೃಗಾಲಯ ಮತ್ತು ಚಿಟ್ಟೆ ಉದ್ಯಾನವನ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿದ್ದು, ವೀಕ್ಷಕರ ಸಂಖ್ಯೆಯನ್ನು ಪರಿಶೀಲಿಸಿ, ಅವಕಾಶ ನೀಡಲಾಗುತ್ತಿದೆ. ಉದ್ಯಾನವನದಲ್ಲಿ ಪ್ರವಾಸಿಗರ  ಗುಂಪು ಸೇರದಂತೆ ಸುರಕ್ಷಿತ ಅಂತರವನ್ನು ಕಾಪಾಡಿಕೊಂಡು ವೀಕ್ಷಣೆ ಮಾಡಲು ಸೂಚಿಸಲಾಗಿದೆ.

ಕುಟುಂಬವನ್ನು ಒಂದು ಗುಂಪಾಗಿ ಪರಿಗಣಿಸಲಾಗುತ್ತದೆ. ಸಫಾರಿಗೆ ಹವಾನಿಯಂತ್ರಿತವಲ್ಲದ ಬಸ್ಸುಗಳು ಶೇ. 50 ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲಿವೆ ಹಾಗೂ ಪ್ರತಿಸಂದರ್ಶಕರಿಗೆ ಕಿಟಕಿ ಬದಿಯ ಸೀಟು ಮಾತ್ರ ನೀಡಲಾಗುತ್ತಿದೆ. ಚಾಲಕ ಮತ್ತು ಪ್ರಯಾಣಿಕರ ನಡುವೆ ರಕ್ಷಣಾತ್ಮಕ ಪರದೆಯೊಂದನ್ನು ಅಳವಡಿಸಿ ಸಫಾರಿ ನಡೆಸಲಾಗಿದೆ.

ಆನ್‍ಲೈನ್‍ನಲ್ಲಿ ಟಿಕೆಟ್ ಬುಕ್ಕಿಂಗ್: ಈ ಹಿಂದೆ ಬನ್ನೇರುಘಟ್ಟ ಉದ್ಯಾನವನಕ್ಕೆ ಪ್ರವಾಸ ಕೈಗೊಳ್ಳುತ್ತಿದ್ದ ಪ್ರವಾಸಿಗರು ನೇರವಾಗಿ ಸರದಿ ಸಾಲಿನಲ್ಲಿ ನಿಂತು ಟಿಕೆಟ್ ಕಾಯ್ದಿರಿಸಿಕೊಳ್ಳಬೇಕಿತ್ತು, ಆದರೆ ಇದೀಗ ಕೊರೋನ ಆತಂಕದಿಂದಾಗಿ ಆನ್‍ಲೈನ್‍ನಲ್ಲಿ ಟಿಕೆಟ್ ಕಾಯ್ದಿರಿಸಲು ಸೂಚಿಸಲಾಗಿದೆ.

ಯಾವುದೇ ಗೊಂದಲಗಳಿಲ್ಲದೇ ಆನ್‍ಲೈನ್ ಮೂಲಕ ಇತ್ಯರ್ಥ ಮಾಡಿಕೊಳ್ಳಲು ಆಡಳಿತ ಮಂಡಳಿ ತಿಳಿಸಿದೆ. ಅಂತರವನ್ನು ಕಾಯ್ದುಗೊಳ್ಳುವ ನಿಟ್ಟಿನಲ್ಲಿ ಸೀಮಿತ ಸಂಖ್ಯೆಯ ಸಮಯದ ಟಿಕೇಟ್‍ಗಳು ಮಾತ್ರ ಆನ್‍ಲೈನ್‍ನಲ್ಲಿ ಲಭ್ಯವಾಗಲಿದೆ. ಒಂದು ಕುಟುಂಬವನ್ನು ಗರಿಷ್ಠ 7 ವ್ಯಕ್ತಿಗಳನ್ನು ಒಳಗೊಂಡಿರುವ ಗುಂಪಾಗಿ ಪರಿಗಣನೆ ಮಾಡಲಾಗಿದ್ದು, ಪ್ರತಿ ಗುಂಪಿಗೆ ಒಂದು ಸಾವಿರ ನಿಗದಿ ಮಾಡಲಾಗಿದೆ. ಸ್ವಂತ ಮತ್ತು ಬಾಡಿಗೆ ವಾಹನಗಳ ಮೂಲಕ ಬರುವವರಿಗೆ ಆನ್‍ಲೈನ್ ಮೂಲಕ ಪಾರ್ಕಿಂಗ್ ಟಿಕೇಟ್ ಖರೀದಿಸುವುದು ಕಡ್ಡಾಯ ಮಾಡಲಾಗಿದೆ. ಪ್ರವೇಶದ ಮೊದಲು ಪ್ರವೇಶದ್ವಾರದಲ್ಲಿ ಡಿಜಿಟಲ್ ಥರ್ಮೋಮೀಟರ್ ಮುಲಕ ದೇಹದ ಉಷ್ಣಾಂಶ ಪರಿಶೀಲನೆ ಹಾಗೂ ಫೇಸ್ ಮಾಸ್ಟ್ ಕಡ್ಡಾಯಗೊಳಿಸಲಾಗಿದೆ.

ಪ್ರಾಣಿ ಪಕ್ಷಿಗಳ ಕಂಡು ಸಂತಸ: ಲಾಕ್‍ಡೌನ್ ಹಿನ್ನೆಲೆ ಮೃಗಾಲಯಗಳು ಬಂದ್ ನಿಂದಾಗಿ ಪ್ರಾಣಿಪ್ರಿಯರು ತಮ್ಮ ನೆಚ್ಚಿನ ಪ್ರಾಣಿ ಪಕ್ಷಿಗಳನ್ನು ನೋಡದೆ ನಿರಾಸೆ ಅನುಭವಿಸಿದ್ದರು. ಲಾಕ್‍ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಬೆಂಗಳೂರಿನ ಕೂಗಳತೆ ದೂರದಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನ ಪುನರಾರಂಭವಾಗಿದ್ದು. ಪ್ರಾಣಿಪ್ರಿಯರು ಆಗಮಿಸಿ ತಮ್ಮ ನೆಚ್ಚಿನ ಪ್ರಾಣಿ ಪಕ್ಷಿಗಳನ್ನು ನೋಡಿ ಖುಷಿ ಪಟ್ಟಿದ್ದಾರೆ.

ರಾಜ್ಯ ಸರಕಾರದ ಅನುಮೋದನೆಯಂತೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು ಪ್ರವೇಶ ದ್ವಾರಗಳ ಬಳಿ ಸ್ಯಾನಿಟೈಸರ್, ಹಾಗು ಬಂದಂತಹ ವಾಹನಗಳಿಗೆ ಔಷಧಿ ಸಿಂಪಡಣೆ ಮಾಡಿದ ನಂತರವೇ ಪ್ರವಾಸಿಗರನ್ನು ಉದ್ಯಾನವನಕ್ಕೆ ಬರಮಾಡಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News