ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ ಪದಗ್ರಹಣ ಸಮಾರಂಭಕ್ಕೆ ಸರಕಾರ ಹಸಿರು ನಿಶಾನೆ

Update: 2020-06-11 11:26 GMT

ಬೆಂಗಳೂರು, ಜೂ.11: ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಪದಗ್ರಹಣ ಮಾಡುತ್ತಿರುವ ‘ಪ್ರತಿಜ್ಞಾ’ ಕಾರ್ಯಕ್ರಮಕ್ಕೆ ರಾಜ್ಯ ಸರಕಾರ ಯಾವುದೆ ಅಡ್ಡಿಪಡಿಸುವುದಿಲ್ಲ. ಲಾಕ್‍ಡೌನ್ ಮಾರ್ಗಸೂಚಿಯಂತೆ ಹೆಚ್ಚು ಜನರನ್ನು ಸೇರಿಸದೆ ಕಾರ್ಯಕ್ರಮ ಮಾಡುವುದಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಪದಗ್ರಹಣ ಕಾರ್ಯಕ್ರಮಕ್ಕೆ ನಮ್ಮ ಅಭ್ಯಂತರವಿಲ್ಲ. ಈ ಸಂಬಂಧ ನಿನ್ನೆ (ಬುಧವಾರ) ರಾತ್ರಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದೇನೆ ಎಂದರು.

ಡಿ.ಕೆ.ಶಿವಕುಮಾರ್ ಪದಗ್ರಹಣ ಸಮಾರಂಭಕ್ಕೆ ಹೆಚ್ಚು ಜನರು ಸೇರಬಹುದೆಂಬ ಕಾರಣಕ್ಕೆ ಅನುಮತಿ ನೀಡಿರಲಿಲ್ಲ. ಜನಸಂದಣಿಯಾಗದಂತೆ ಎಚ್ಚರಿಕೆ ವಹಿಸಿ ಅವರು ಕಾರ್ಯಕ್ರಮ ಆಯೋಜನೆ ಮಾಡಿದರೆ ಅದಕ್ಕೆ ನಮ್ಮ ಅಡ್ಡಿಯಿಲ್ಲ. ಈ ವಿಚಾರದ ಕುರಿತು ಅವರ ಜೊತೆ ಮಾತನಾಡಿದ್ದು, ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಕೋವಿಡ್-19 ಲಾಕ್‍ಡೌನ್ ಮಾರ್ಗಸೂಚಿಯ ಹಿನ್ನೆಲೆಯಲ್ಲಿ ರಾಜಕೀಯ ಸಭೆ, ಸಮಾರಂಭಗಳಿಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಜೂ.14ರಂದು ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡುವ ಸಮಾರಂಭಕ್ಕೆ ಸರಕಾರ ಅನುಮತಿ ನಿರಾಕರಿಸಿತ್ತು. ಇದರಿಂದಾಗಿ, ವಿರೋಧ ಪಕ್ಷದ ನಾಯಕ ಸಿದ್ದರಾಂಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಇನ್ನಿತರ ಕಾಂಗ್ರೆಸ್ ನಾಯಕರು ಸರಕಾರದ ವಿರುದ್ಧ ಕಿಡಿಗಾರಿದ್ದರು.

ಮುಖ್ಯಮಂತ್ರಿಗೆ ಧನ್ಯವಾದ

ಪ್ರತಿಜ್ಞಾ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಧನ್ಯವಾದಗಳು. ಪಕ್ಷದ ನಾಯಕರೊಂದಿಗೆ ಈ ವಿಚಾರದ ಬಗ್ಗೆ ಚರ್ಚಿಸಿ ಶೀಘ್ರವೆ ಹೊಸ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟ್ವಿಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News