×
Ad

ಪಾಕಿಸ್ತಾನ ಝಿಂದಾಬಾದ್ ಘೋಷಣೆ ಪ್ರಕರಣ: ಅಮೂಲ್ಯ ಲಿಯೋನ್‍ಗೆ ಜಾಮೀನು ಮಂಜೂರು

Update: 2020-06-11 18:38 IST
File Photo

ಬೆಂಗಳೂರು, ಜೂ.11: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಸಿದ್ದ ಪ್ರತಿಭಟನೆ ವೇಳೆ ಪಾಕಿಸ್ತಾನ ಝಿಂದಾಬಾದ್ ಎಂದು ಘೋಷಣೆ ಕೂಗಿ ಕಾರಾಗೃಹ ಸೇರಿದ್ದ ಅಮೂಲ್ಯ ಲಿಯೋನ್‍ಗೆ ನಗರದ ಸಿಟಿ ಸಿವಿಲ್ ಕೋರ್ಟ್ ಜಾಮೀನು ಮಂಜೂರು ಮಾಡಿದೆ. 

ಅಮೂಲ್ಯ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠವು, ಜಾಮೀನು ಮಂಜೂರು ಮಾಡಿತು. 

ಅರ್ಜಿದಾರರ ಪರ ವಾದಿಸಿದ ವಕೀಲರು, ಅರ್ಜಿದಾರರಾದ ಅಮೂಲ್ಯ ಇನ್ನೂ 19 ವರ್ಷ ವಯಸ್ಸಿನ ಯುವತಿ. ನಗರದ ಖಾಸಗಿ ಕಾಲೇಜ್ ಒಂದರಲ್ಲಿ ಓದುತ್ತಿದ್ದಾರೆ. ಅವರು ಪಾಕಿಸ್ತಾನ ಝಿಂದಾಬಾದ್ ಎಂದಷ್ಟೇ ಕೂಗಿದ್ದಾರೆ. ಪಾಕಿಸ್ತಾನವನ್ನು ನಮ್ಮ ದೇಶ ಎಂದು ಎಲ್ಲಿಯೂ ಉಲ್ಲೇಖಿಸಿಲ್ಲ ಮತ್ತು ಘೋಷಣೆ ಮಾಡಿಲ್ಲ. ಹೀಗಾಗಿ, ಜಾಮೀನು ನೀಡಬೇಕೆಂದು ಮನವಿ ಮಾಡಿದರು. 

ಪ್ರಕರಣವೇನು: ಫೆ.20ರಂದು ಕೆಲ ಸಂಘಟನೆಗಳು ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಗರದ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಅಮೂಲ್ಯ ಲಿಯೋನ್ ವೇದಿಕೆಯಲ್ಲಿ ಪಾಕಿಸ್ತಾನ ಝಿಂದಾಬಾದ್ ಎಂದು ಘೋಷಣೆ ಕೂಗಿದ್ದಳು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಆಕೆಯನ್ನು ವಶಕ್ಕೆ ತೆಗೆದುಕೊಂಡಿದ್ದರು. 

ನಂತರ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಅಮೂಲ್ಯ ವಿರುದ್ಧ ಐಪಿಸಿ ಸೆಕ್ಷನ್ 124(ಎ), 153(ಎ)(ಬಿ), 505(2) ಅಡಿ ದೇಶದ್ರೋಹ, ಸಾಮಾಜಿಕ ಶಾಂತಿ ಕದಡಿದ ಆರೋಪದಡಿ ಪ್ರಕರಣ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಅಂದಿನಿಂದ ಈವರೆಗೂ ಕಾರಾಗೃಹದಲ್ಲಿರುವ ಅಮೂಲ್ಯ ಜಾಮೀನಿಗಾಗಿ ನಿರಂತರ ಪ್ರಯತ್ನ ನಡೆಸಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News