ವಾಯುಭಾರ ಕುಸಿತ: ರಾಜ್ಯದಲ್ಲಿ ಇನ್ನೂ 3 ದಿನ ಮಳೆ ಸಾಧ್ಯತೆ

Update: 2020-06-11 14:36 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.11: ವಾಯುಭಾರ ಕುಸಿತ ಹಾಗೂ ಮೇಲ್ಮೈ ಸುಳಿಗಾಳಿಯಿಂದಾಗಿ ರಾಜ್ಯದಲ್ಲಿ ಮೋಡ ಕವಿದ ವಾತಾವರಣ ಕಂಡುಬಂದಿದ್ದು, ಇನ್ನೂ ಮೂರು ದಿನ ಮಳೆ ಮುಂದುವರಿಯುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ರಾಜ್ಯದ ಒಳನಾಡಿನಲ್ಲಿ ಚದುರಿದಂತೆ ಅಲ್ಲಲ್ಲಿ ಸಾಧಾರಣ ಮಳೆಯಾಗುತ್ತಿದೆ. ಹವಾಮಾನ ಮುನ್ಸೂಚನೆ ಪ್ರಕಾರ ರಾಜ್ಯದ ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಲಿದ್ದು, ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ. ಜಿ.ಎಸ್.ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ.

ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ರಾಜ್ಯದಲ್ಲಿ ಮೋಡ ಕವಿದ ವಾತಾವರಣವಿದ್ದು, ಆಗಾಗ್ಗೆ ಹಗುರ ಇಲ್ಲವೆ ಸಾಧಾರಣ ಮಳೆಯಾಗಲಿದೆ. ಇನ್ನೂ ಮೂರು ದಿನ ಭಾಗಶಃ ಮೋಡ ಕವಿದ ವಾತಾವರಣ ಒಳನಾಡಿನಲ್ಲಿ ಕಂಡುಬರಲಿದ್ದು, ಸಾಧಾರಣ ಮಳೆಯಾಗುವ ಸೂಚನೆಗಳಿವೆ. ಆದರೆ, ಕರಾವಳಿ ಭಾಗದಲ್ಲಿ ಭಾರೀ ಮಳೆ ಮುಂದುವರಿಯಲಿದೆ. ರಾಜ್ಯದ ಒಳನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ವಿರಳ ಎಂದು ಹೇಳಿದ್ದಾರೆ.

ನೈರುತ್ಯ ಮುಂಗಾರು ಈಗಾಗಲೇ ರಾಜ್ಯದ ಒಳನಾಡು ಪ್ರವೇಶ ಮಾಡಿದ್ದು, ಜೂ.15ರವೇಳೆಗೆ ಇಡೀ ರಾಜ್ಯವನ್ನು ಆವರಿಸಲಿದೆ. ಕಳೆದ ಎರಡು ದಿನಗಳಿಂದಲೂ ಕಲ್ಯಾಣ ಕರ್ನಾಟಕ ಸೇರಿದಂತೆ ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಮಳೆಯಾಗುತ್ತಿದೆ. ಇದರಿಂದ ರೈತರು ಮುಂಗಾರು ಹಂಗಾಮಿನ ಬಿತ್ತನೆಯ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News