ನನ್ನ ಬೆಂಬಲದಿಂದ ದೇವೇಗೌಡರು ರಾಜ್ಯಸಭೆಗೆ ಹೋಗುತ್ತಿದ್ದಾರೆ ಎಂದು ಹೇಳಲು ನಾನು ಮುಟ್ಟಾಳನಲ್ಲ: ಡಿಕೆಶಿ

Update: 2020-06-11 16:09 GMT

ಬೆಂಗಳೂರು, ಜೂ.11: ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯಲಿರುವ ಚುನಾವಣೆಯಲ್ಲಿ ನಾನು ಯಾರಿಗೂ ಟಿಕೆಟ್ ಕೊಡುವುದಿಲ್ಲ. ಅದೇನಿದ್ದರೂ ಪಕ್ಷದ ಹೈಕಮಾಂಡ್ ನಿರ್ಧಾರ. ಅವರು ತೆಗೆದುಕೊಂಡ ನಿರ್ಧಾರವನ್ನು ತಿಳಿಸುವುದು ನನ್ನ ಕೆಲಸ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನನ್ನ ಬೆಂಬಲದಿಂದ ರಾಜ್ಯಸಭೆಗೆ ಹೋಗುತ್ತಿದ್ದಾರೆ ಎಂದು ಹೇಳಲು ನಾನು ಮುಟ್ಟಾಳನಲ್ಲ. ಅವರಿಗೆ ಅವರದೇ ಆದ ವ್ಯಕ್ತಿತ್ವ, ಹಿರಿತನವಿದೆ ಎಂದರು.

ರಾಜ್ಯಸಭೆಗೆ ದೇವೇಗೌಡರನ್ನು ಬೆಂಬಲಿಸುವುದು ಪಕ್ಷದ ವರಿಷ್ಠರ ತೀರ್ಮಾನ. ಅವರು ರಾಷ್ಟ್ರದ ಆಸ್ತಿ. ಅವರ ಆಯ್ಕೆ ವಿಚಾರದಲ್ಲಿ ಚೌಕಾಸಿ ಮಾಡುತ್ತಾ ಕೂರುವುದಿಲ್ಲ. ನನಗೂ 40 ವರ್ಷದ ರಾಜಕೀಯ ಅನುಭವವಿದೆ ಎಂದು ಶಿವಕುಮಾರ್ ಹೇಳಿದರು.

ನನ್ನ ಪದಗ್ರಹಣ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅನುಮತಿ ನೀಡಿದ್ದಾರೆ ಎಂದು ಮಾಧ್ಯಮಗಳ ಮೂಲಕ ತಿಳಿದಿದೆ. ಅನುಮತಿ ನೀಡಿದ್ದಕ್ಕಾಗಿ ಮುಖ್ಯಮಂತ್ರಿಗೆ ಧನ್ಯವಾದಗಳು. ನನ್ನ ಪದಗ್ರಹಣ ಕಾರ್ಯಕ್ರಮದ ದಿನಾಂಕವನ್ನು ಪಕ್ಷದ ನಾಯಕರೊಂದಿಗೆ ಚರ್ಚಿಸಿ ಶೀಘ್ರದಲ್ಲೆ ಘೋಷಣೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ನಾನು ಮುಖ್ಯಮಂತ್ರಿಗೆ ಪತ್ರ ಬರೆದಿದ್ದೆ. ಅದಕ್ಕೆ ಮುಖ್ಯಮಂತ್ರಿಯ ಅನುಮೋದನೆ ಪಡೆದು ಅಧಿಕಾರಿಗಳು ಪತ್ರ ಬರೆದಿದ್ದರು. ಇಂದು ಬೆಳಗ್ಗೆ ಅವರು ಅನುಮತಿ ನೀಡಿರುವುದು ಮಾಧ್ಯಮಗಳಿಂದ ತಿಳಿದು ಬಂದಿದೆ. ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷಗಳು ಇರಬೇಕು. ವಿರೋಧ ಪಕ್ಷ ಇಲ್ಲವಾದರೆ ಪ್ರಜಾಪ್ರಭುತ್ವ ಇರುವುದಿಲ್ಲ ಎಂದು ಶಿವಕುಮಾರ್ ಹೇಳಿದರು.

ಜೂ.14ರಂದು ಕಾರ್ಯಕ್ರಮ ನಡೆಯುವುದಿಲ್ಲ ಎಂದು ನಾನು ನಿನ್ನೆ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಅಂದು ಆ ಕಾರ್ಯಕ್ರಮ ಮಾಡಲು ಸಾಧ್ಯವಿಲ್ಲ. ಈ ವಿಚಾರವಾಗಿ ಪಕ್ಷದ ನಾಯಕರೊಂದಿಗೆ ಚರ್ಚೆ ಮಾಡಬೇಕಿದೆ. ಅವರೊಟ್ಟಿಗೆ ಚರ್ಚೆ ಮಾಡಿದ ಕೆಲವೇ ತಾಸುಗಳಲ್ಲಿ ದಿನಾಂಕ ಪ್ರಕಟಿಸುತ್ತೇನೆ. ಪರಿಷತ್ ಚುನಾವಣೆಯೂ ಎದುರಾಗಲಿದ್ದು, ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ನಾಯಕರ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಅವರು ತಿಳಿಸಿದರು.

ನಾವು ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲ ರಾಜ್ಯದ ಮೂಲೆ ಮೂಲೆಯಲ್ಲೂ ಈ ಕಾರ್ಯಕ್ರಮ ನಡೆಸುತ್ತಿದ್ದು ಅವರ ಜತೆ ಚರ್ಚಿಸಬೇಕಿದೆ. ಮಾಧ್ಯಮಗಳ ಮೂಲಕ ನಾನು ಕಾರ್ಯಕರ್ತರು ಹಾಗೂ ವೀಕ್ಷಕರಿಗೆ ಮನವಿ ಮಾಡಿಕೊಳ್ಳುವುದೇನೆಂದರೆ ಈಗಾಗಲೇ ಪ್ರತಿ ಪಂಚಾಯತ್ ಗಳಿಗೆ ತೆರಳಿರುವವರು ತಮ್ಮ ಕೆಲಸ ಮುಂದುವರಿಸಿಕೊಳ್ಳಲಿ ಜತೆಗೆ ಈ ವಿಚಾರವಾಗಿ ಮಾಹಿತಿ ರವಾನಿಸಿ ಎಂದು ಶಿವಕುಮಾರ್ ಹೇಳಿದರು.

ಆಶಾಡ ಬಂತು ಅಂತಾ ಕಾರ್ಯಕ್ರಮ ಮುಂದೂಡುವುದಿಲ್ಲ. ನಾನು ನನ್ನದೇ ಆದ ನಂಬಿಕೆಗಳನ್ನು ಇಟ್ಟುಕೊಂಡಿದ್ದೇನೆ ನಿಜ. ನಾನು ಮೊದಲ ದಿನದಿಂದಲೇ ನನ್ನ ಕಾರ್ಯ ಮಾಡಿಕೊಂಡು ಬಂದಿದ್ದೇನೆ. ಜನರಿಗೆ ಅನುಕೂಲವಾಗುವ ದಿನ ಕಾರ್ಯಕ್ರಮ ಮಾಡುತ್ತೇನೆ ಎಂದು ಅವರು ತಿಳಿಸಿದರು.

ಈ ಕಾರ್ಯಕ್ರಮ ನನ್ನದಲ್ಲ. ಕಾರ್ಯಕರ್ತರದ್ದು. ನನ್ನ ಪ್ರತಿಜ್ಞಾ ಕಾರ್ಯಕ್ರಮ ಅಲ್ಲ, ಕಾರ್ಯಕರ್ತರ ಪ್ರತಿಜ್ಞಾ ಕಾರ್ಯಕ್ರಮ. ಅವರ ಜತೆ ನಾನು ಒಬ್ಬ ಕಾರ್ಯಕರ್ತನಂತೆ ನಿಮ್ಮೆಲ್ಲರ ಸಮ್ಮುಖದಲ್ಲಿ ಪ್ರತಿಜ್ಞೆ ಸ್ವೀಕರಿಸುತ್ತೇನೆ. ಮುಖ್ಯಮಂತ್ರಿ ರಾಜ್ಯ ಹಾಗೂ ದೇಶದ ಮುಂದೆ ಅವರ ಅನುಮತಿ ನೀಡಿದ್ದಾರೆ. ವೈಯಕ್ತಿಕವಾಗಿ ಮಾತು ಕೊಟ್ಟರೆ ಬೇರೆ ವಿಚಾರ. ಆದರೆ ಅವರು ಮಾಧ್ಯಮಗಳ ಮೂಲಕ ಇಡೀ ದೇಶದ ಜನರ ಮುಂದೆ ಅನುಮತಿ ಕೊಟ್ಟಿದ್ದಾರಲ್ಲ. ಇನ್ನೇನು ಬೇಕು? ಎಂದು ಅವರು ಪ್ರಶ್ನಿಸಿದರು.

ಅವರು ಅನುಮತಿ ಕೊಟ್ಟಿದ್ದು ನನಗೆ ತಿಳಿಯುವ ಮುನ್ನವೇ ಅಮೆರಿಕ, ಆಸ್ಟ್ರೇಲಿಯಾದಲ್ಲಿರುವ ನನ್ನ ಸ್ನೇಹಿತರಿಗೆ ಮಾಹಿತಿ ಹೋಗಿದ್ದು ಅವರು ನನಗೆ ಸಂದೇಶ ಕಳುಹಿಸಿದ್ದಾರೆ. ಇದಕ್ಕಿಂತ ಇನ್ನೇನು ಬೇಕು? ಈ ವಿಚಾರದಲ್ಲಿ ಅವರನ್ನು ಸತ್ಯ ಪರೀಕ್ಷೆ ಮಾಡಲು ಹೋಗುವುದಿಲ್ಲ ಎಂದು ಶಿವಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News