×
Ad

ನಿಯಮ ಉಲ್ಲಂಘಿಸಿ ಮೆರವಣಿಗೆ ಆರೋಪ: ಇಮ್ರಾನ್ ಪಾಷ ಸಹೋದರ, ಬೆಂಬಲಿಗರ ಬಂಧನ

Update: 2020-06-11 21:53 IST

ಬೆಂಗಳೂರು, ಜೂ.11: ಕೋವಿಡ್-19 ಸಂಬಂಧ ನಿಯಮ ಉಲ್ಲಂಘಿಸಿ ಮೆರವಣಿಗೆ ನಡೆಸಿದ್ದ ಆರೋಪ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಬಿಬಿಎಂಪಿ ಜೆಡಿಎಸ್ ಸದಸ್ಯ ಇಮ್ರಾನ್ ಪಾಷ ಸಹೋದರ ಇರ್ಫಾನ್ ಪಾಷ ಸೇರಿ ಮೂವರನ್ನು ಜೆಜೆ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಇಮ್ರಾನ್ ಪಾಷ ಸಹೋದರ ಇರ್ಫಾನ್ ಪಾಷ ಹಾಗೂ ಬೆಂಬಲಿಗರಾದ ಸುಲ್ತಾನ್ ಮತ್ತು ಮೊಹ್ಸಿನ್ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಕೊರೋನ ಸೋಂಕು ದೃಢಪಟ್ಟಿದ್ದರಿಂದಾಗಿ ಇಮ್ರಾನ್ ಪಾಷ ಅವರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಗುಣಮುಖವಾಗಿ ಜೂ.7ರಂದು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದರು. ಇದೇ ವೇಳೆಯೇ ಅವರನ್ನು ತೆರೆದ ವಾಹನದಲ್ಲಿ ಆಸ್ಪತ್ರೆಯಿಂದ ಮನೆಯವರೆಗೂ ಮೆರವಣಿಗೆ ಮಾಡಲಾಗಿತ್ತು.

ಮೆರವಣಿಗೆಯಲ್ಲಿ ಒಂದೇ ಬೈಕ್‍ನಲ್ಲಿ ಮೂವರು ಸಂಚರಿಸುತ್ತಿದ್ದರು. ಹಲವರು ಮಾಸ್ಕ್ ಧರಿಸಿರಲಿಲ್ಲ. ಅಂತರವನ್ನು ಕಾಯ್ದುಕೊಂಡಿರಲಿಲ್ಲ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಜೆಜೆ ನಗರ ಠಾಣೆ ಪೊಲೀಸರು, ಬಿಬಿಎಂಪಿ ಸದಸ್ಯ ಇಮ್ರಾನ್ ಪಾಷಾ ಸೇರಿ ಹಲವರನ್ನು ಬಂಧಿಸಿದ್ದರು. ಇದೀಗ ಅವರ ಸಹೋದರರನ್ನು ಬಂಧಿಸಿದ್ದು, ಈ ಮೂಲಕ ಬಂಧಿತರ ಸಂಖ್ಯೆ 27 ಆಗಿದೆ.

ಜೂ.23ರವರೆಗೂ ನ್ಯಾಯಾಂಗ ಬಂಧನ

ಕೋವಿಡ್-19 ನಿಯಮ ಉಲ್ಲಂಘಿಸಿ ಮೆರವಣಿಗೆ ಮಾಡಿದ ಪ್ರಕರಣ ಸಂಬಂಧ ಬಿಬಿಎಂಪಿ ಸದಸ್ಯ ಇಮ್ರಾನ್ ಪಾಷ ಸೇರಿ 23 ಮಂದಿಗೆ ನ್ಯಾಯಾಂಗ ಬಂಧನವಾಗಿದೆ ಎಂದು ವರದಿಯಾಗಿದೆ.

5ನೆ ಎಸಿಎಂಎಂ ಕೋರ್ಟ್ ನ್ಯಾಯಾಧೀಶರು ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿ ನ್ಯಾಯಧೀಶರು ಆರೋಪಿಗಳಿಗೆ ಜೂ.23ರವರೆಗೂ ನ್ಯಾಯಾಂಗ ಬಂಧನ ವಿಧಿಸಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News