ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ಸಂಪುಟ ತೀರ್ಮಾನ: ಸಚಿವ ಆರ್.ಅಶೋಕ್

Update: 2020-06-11 17:11 GMT

ಬೆಂಗಳೂರು, ಜೂ.11: ಕೃಷಿ ಚಟುವಟಿಕೆ ಉತ್ತೇಜನಕ್ಕಾಗಿ 1974ರ ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದ ಸಮ್ಮೇಳನದಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ಬಳಿಕ ಮಾಧ್ಯಮ ಗೋಷ್ಟಿಯಲ್ಲಿ ಮಾತನಾಡಿದ ಅವರು, ಕೃಷಿ ಭೂಮಿ ಖರೀದಿಸಲು ಇದ್ದ ನಿರ್ಬಂಧ ತೆರವುಗೊಳಿಸಿ ರಾಜ್ಯದಲ್ಲಿ ಯಾರೂ ಬೇಕಾದರೂ ಭೂಮಿ ಖರೀದಿಸಲು ಹೊಸ ಕಾನೂನಿನ ಮೂಲಕ ಅವಕಾಶ ನೀಡಲಾಗಿದೆ ಎಂದರು.

ಭೂ ಸುಧಾರಣಾ ಕಾಯ್ದೆಯಲ್ಲಿನ 63 ಎ, 79 ಎ, ಬಿ ಕಾನೂನು ರದ್ದುಗೊಳಿಸಿ ಹೊಸ ಕಾನೂನು ಜಾರಿಗೊಳಿಸಲಾಗುವುದು. ಇತ್ತೀಚಿನ ದಿನಗಳಲ್ಲಿ ಐಟಿ-ಬಿಟಿಯಲ್ಲಿ ಕೆಲಸ ಮಾಡುವ ಸಾಫ್ಟ್ ವೇರ್ ಕಂಪೆನಿಯ ಉದ್ಯೋಗಿಗಳು ಸೇರಿದಂತೆ ಇನ್ನಿತರ ಕ್ಷೇತ್ರಗಳ ಜನರು ಕೃಷಿ ಕ್ಷೇತ್ರದತ್ತ ಮುಖ ಮಾಡಿದ್ದಾರೆ. ಮೇಲ್ಕಂಡ ಕಾಯ್ದೆ ಹಿನ್ನೆಲೆಯಲ್ಲಿ ಕೃಷಿ ಆಸಕ್ತರಿಗೆ ಕೃಷಿ ಭೂಮಿ ಖರೀದಿಗೆ ಸಮಸ್ಯೆಯಾಗುತ್ತಿತ್ತು. ಹೀಗಾಗಿ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ ಎಂದು ಅವರು ವಿವರಿಸಿದರು.

ಇನ್ನು ಮುಂದೆ ಒಂದೇ ಕುಟುಂಬದಲ್ಲಿ ಐವರು ಸದಸ್ಯರು ಇದ್ದರೆ 108 ಎಕರೆ ಗಿಂತ ಹೆಚ್ಚು ಭೂಮಿ ಖರೀದಿಸುವಂತಿಲ್ಲ 79 ಎ, ಬಿನಲ್ಲಿ ಅನಗತ್ಯವಾಗಿ 83 ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದು, ಆಪೈಕಿ ಶೇ.1ರಷ್ಟು ಸರಕಾರದಿಂದ ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಅಶೋಕ್ ಇದೇ ವೇಳೆ ಕಾಯ್ದೆಯಲ್ಲಿ ಲೋಪಗಳನ್ನು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News