×
Ad

ಬೆಂಗಳೂರು: ಕೊರೋನಗೆ ಮತ್ತೆ ಇಬ್ಬರು ಬಲಿ, 17 ಹೊಸ ಪ್ರಕರಣಗಳು ದೃಢ

Update: 2020-06-11 22:55 IST

ಬೆಂಗಳೂರು, ಜೂ.11: ಬಿಎಂಟಿಸಿ ಚಾಲಕ, ನಿರ್ವಾಹಕ, ಗರ್ಭಿಣಿ, ಓರ್ವ ಆರೋಪಿ ಸೇರಿದಂತೆ ನಗರದಲ್ಲಿ ಗುರುವಾರ 17 ಜನರಿಗೆ ಕೊರೋನ ಸೋಂಕು ಪತ್ತೆಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ.

ಅಲ್ಲದೇ ಇನ್ನು ನಾಲ್ವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರದಲ್ಲಿ ಹೊಸದಾಗಿ ಕಾಣಿಸಿಕೊಂಡ ರೋಗಿಗಳ ಸಂಪರ್ಕಿತರನ್ನು ಪತ್ತೆ ಹಚ್ಚಿ ಕ್ವಾರಂಟೈನ್‍ಗೆ ಹಾಕಲಾಗಿದೆ.

ಚಿತ್ರದುರ್ಗದಿಂದ ಬಂದು ನೆಲೆಸಿದ್ದ ಗರ್ಭಿಣಿಯೊಬ್ಬರು ಗುರುವಾರ ಚಿಕಿತ್ಸೆಗೆಂದು ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆಗೆ ಹೋಗಿದ್ದಾಗ, ಚಿಕಿತ್ಸೆಗೆ ಒಳಗಾಗುವ ಮೊದಲು ಕೊರೋನ ಪರೀಕ್ಷೆ ನಡೆಸಿದಾಗ ಅವರಲ್ಲಿ ಲಕ್ಷಣ ಕಂಡುಬಂದಿದೆ. ತಕ್ಷಣವೇ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಪರಿಶೀಲಿಸಿದಾಗ ಕೊರೋನ ಸೋಂಕು ತಗುಲಿರುವುದು ಪತ್ತೆಯಾಗಿದೆ. ಈ ಪ್ರಕರಣದಿಂದಾಗಿ ಗರ್ಭಿಣಿಯ ಜತೆಗೆ ಸಂಪರ್ಕಿತರಾಗಿದ್ದ ಕೆ.ಸಿ.ಜನರಲ್ ಆಸ್ಪತ್ರೆಯ 8 ಜನ ವೈದ್ಯರು, 8 ಜನ ಸಿಬ್ಬಂದಿ ಕ್ವಾರಂಟೈನ್ ಮಾಡಲಾಗಿದೆ.

ಕಾರ್ಪೋರೇಟರ್ ಇಮ್ರಾನ್ ಪಾಷ ಹಾಗೂ ಅವರ ತಂಡದ 24 ಆರೋಪಿಗಳನ್ನು ಬಂಧಿಸಲಾಗಿದ್ದು, ಗುರುವಾರ ಆರೋಪಿಗಳ ಪೈಕಿ ಒಬ್ಬರಲ್ಲಿ ಕೊರೋನ ಸೋಂಕು ಕಾಣಿಸಿಕೊಂಡಿದೆ. ಇದರಿಂದಾಗಿ ಜತೆಗಿದ್ದವರು ಹಾಗೂ ಪೊಲೀಸರಿಗೆ ಆತಂಕ ಹೆಚ್ಚಾಗಿದೆ.

ಕೆಂಗೇರಿಯಲ್ಲೊಬ್ಬನಿಗೆ ಸೋಂಕು: ಕೆಂಗೇರಿಯ ರಾಜಕುಮಾರ್ ರಸ್ತೆಯಲ್ಲಿರುವ ಮೆಡಿಕಲ್ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನ ಆಪ್ತನಿಗೆ ಕೊರೋನ ಸೋಂಕು ಕಾಣಿಸಿಕೊಂಡಿದ್ದರಿಂದ ಆತನನ್ನು ನಗರದ ನಿಗದಿತ ಆಸ್ಪತ್ರೆಗೆ ರವಾನಿಸಿ, ಆತ ಕೆಲಸ ಮಾಡುತ್ತಿದ್ದ ಮಳಿಗೆ ಸೇರಿದಂತೆ ಸುತ್ತಮುತ್ತ ಬಿಬಿಎಂಪಿ ಅಧಿಕಾರಿಗಳು ಸ್ಯಾನಿಟೈಸ್ ಮಾಡಿದ್ದಾರೆ. ಈತನ ಜತೆ ಸಂಪರ್ಕ ಹೊಂದಿದವರನ್ನು ಪತ್ತೆಹಚ್ಚಿ ಕ್ವಾರಂಟೈನ್ ಮಾಡಲಾಗಿದೆ.

ಬಿಎಂಟಿಸಿ ಉದ್ಯೋಗಿಯೊಬ್ಬರಿಗೆ ಕೊರೋನ ಸೋಂಕು ತಗುಲಿರುವುದು ಖಚಿತವಾಗುತ್ತಿದ್ದಂತೆಯೇ ನೌಕರನನ್ನು ಚಿಕಿತ್ಸೆಗಾಗಿ ನಗರದ ನಿಗದಿತ ಕೊರೋನ ಆಸ್ಪತ್ರೆಗೆ ದಾಖಲಿಸಲಾಗಿದೆ.

ದೈನಂದಿನ ಕರ್ತವ್ಯದಲ್ಲಿದ್ದ ನೌಕರನಿಗೆ ಜ್ವರ, ಕೆಮ್ಮು ಮತ್ತು ಶೀತದಂತಹ ರೋಗಲಕ್ಷಣಗಳು ಅಥವಾ ಆರೋಗ್ಯ ಸಮಸ್ಯೆಗಳು ಕಾಣಿಸಿರಲಿಲ್ಲ. ಮೂರು ದಿನ ರಜೆಯಲ್ಲಿ ತೆರಳಿದ್ದ ನೌಕರ ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳಿಗೆ ಹೋಗಿದ್ದರು ಎಂದು ತಿಳಿದು ಬಂದಿದೆ. ಪ್ರವಾಸದ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗುತ್ತಲೇ ಸ್ವಯಂಪ್ರೇರಿತವಾಗಿ ಕೊರೋನ ತಪಾಸಣೆಗೆ ಒಳಪಟ್ಟಿದ್ದರು. ಜೂ.10 ರಂದು ವರದಿ ಕೈಸೇರಿದ್ದು ಸೋಂಕು ದೃಢಪಟ್ಟಿದೆ. ಕೂಡಲೇ ಅವರ ಸಂಪರ್ಕದಲ್ಲಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚುವ ಕೆಲಸ ಆರಂಭವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News