×
Ad

ಮೆಟ್ರೊ ರೈಲು ಯೋಜನೆಗೆ ಮರ ಕಡಿಯುವುದಕ್ಕೆ ಹೈಕೋರ್ಟ್ ತಡೆ

Update: 2020-06-11 23:40 IST

ಬೆಂಗಳೂರು, ಜೂ.11: ಸಿಲಿಕಾನ್ ಸಿಟಿಯಲ್ಲಿ ಮೆಟ್ರೊ ರೈಲು ಯೋಜನೆಗೆ ಮರಗಳನ್ನು ಕಡಿಯುವುದು ಮತ್ತು ಸ್ಥಳಾಂತರಿಸುವುದಕ್ಕೆ ಹೈಕೋರ್ಟ್ ತಡೆ ನೀಡಿ ಮಧ್ಯಂತರ ಆದೇಶ ನೀಡಿದೆ.

ಈ ಕುರಿತು ದತ್ತಾತ್ರೇಯ ಟಿ. ದೇವರೆ ಮತ್ತು ಬೆಂಗಳೂರು ಪರಿಸರ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಹಾಗೂ ನ್ಯಾಯಮೂರ್ತಿ ಇ.ಎಸ್.ಇದ್ರೇಶ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಸ್ಥಳಾಂತರ ಮಾಡಿರುವ ಮರಗಳ ಬಗ್ಗೆ 3 ವರ್ಷಗಳ ಕಾಲ ಬಿಎಂಆರ್‍ಸಿಎಲ್ ಜಾಗ್ರತೆ ವಹಿಸಬೇಕು ಎಂದು ಹೇಳಿತು. 

ಕಳೆದ ಮಂಗಳವಾರ ಬೆಂಗಳೂರು ಮೆಟ್ರೊ ರೈಲು ನಿಗಮ ಬನ್ನೇರುಘಟ್ಟ ರಸ್ತೆಯ ಅಗ್ನಿಶಾಮಕ ಸ್ಟೇಷನ್ ಹತ್ತಿರ ರಾತ್ರೋ ರಾತ್ರಿ 10 ಮರಗಳನ್ನು ಕಡಿದು ಧರೆಗೆ ಉರುಳಿಸಿದೆ. ಕಳೆದ ರವಿವಾರ ಸಹ ಅದೇ ದಾರಿಯಲ್ಲಿ 30 ಮರಗಳನ್ನು ಕಡಿದುರುಳಿದ್ದು, ಪರಿಸರ ಪ್ರೇಮಿಗಳಿಗೆ ಮತ್ತು ನಿವಾಸಿಗಳಿಗೆ ಆಘಾತವಾಗಿದೆ. ಈ ಹಾದಿಯ ಮೂಲಕ ವಾಹನದಲ್ಲಿ ಹಾದು ಹೋಗುತ್ತಿದ್ದಾಗ ಪರಿಸರ ಕಾರ್ಯಕರ್ತ ಅರುಣ್ ಪ್ರಸಾದ್ ಅವರಿಗೆ ಮರಗಳನ್ನು ಕಡಿಯುವ ಶಬ್ದ ಕೇಳಿದೆ. ಅವರು ತಕ್ಷಣ ಮೈಕೊ ಲೇಔಟ್ ಪೊಲೀಸ್ ಠಾಣೆಗೆ ತಿಳಿಸಿದರು. ಅಧಿಕಾರಿಗಳು ಬಂದು ಮರ ಕಡಿಯುವುದನ್ನು ನಿಲ್ಲಿಸಿದರು.

ನಿನ್ನೆ ಹೈಕೋರ್ಟ್ ಮರ ಕಡಿಯುವುದಕ್ಕೆ ತಡೆ ನೀಡಿ ಆದೇಶ ಹೊರಡಿಸುವುದಕ್ಕೆ ಹಿಂದಿನ ದಿನ ಈ ಘಟನೆ ನಡೆದಿದೆ. ಗೊಟ್ಟಿಗೆರೆ-ನಾಗವಾರ ಮಾರ್ಗದಲ್ಲಿ ಎರಡನೆ ಹಂತದ ಮೆಟ್ರೊ ಕಾಮಗಾರಿಗೆ 165 ಮರಗಳನ್ನು ಕಡಿಯಲು ಅವಕಾಶ ನೀಡಿದ ಬಿಬಿಎಂಪಿ ವಿರುದ್ಧ ಪರಿಸರವಾದಿಗಳು ಕೋರ್ಟ್ ಮೊರೆ ಹೋಗಿದ್ದರು. ಜನರ ಅಭಿಪ್ರಾಯ ಕೇಳದೆ ಬಿಬಿಎಂಪಿ ಮೆಟ್ರೊ ನಿಗಮಕ್ಕೆ ಈ ರೀತಿ ಅನುಮತಿ ನೀಡಲು ಹೇಗೆ ಸಾಧ್ಯ? ಇಂಥ ಮರಗಳನ್ನು ನೂರಾರು ವರ್ಷಗಳಿಂದ ಕಾಪಾಡಿಕೊಂಡು ಬರಲಾಗಿದೆ ಎಂದು ತಜ್ಞರ ಸಮಿತಿಯ ಸದಸ್ಯರು ಹೇಳುತ್ತಾರೆ.

ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳನ್ನು ಕೇಳಿದರೆ ನಾವು ಇತ್ತೀಚೆಗೆ ಮೇ ಕೊನೆ ವಾರದಲ್ಲಿ ನೋಟಿಸ್ ನೀಡಿ ಜನರಿಂದ ಅಭಿಪ್ರಾಯ ಕೇಳಿದ್ದೆವು ಎಂದು ಬಿಬಿಎಂಪಿಯ ಉಪ ಅರಣ್ಯ ಸಂರಕ್ಷಾಧಿಕಾರಿ ರಂಗನಾಥ್ ಸ್ವಾಮಿ ಹೇಳುತ್ತಾರೆ. ನಾವು 15 ದಿನ ಕಾದೆವು, ಯಾರೂ ಪ್ರತಿಕ್ರಿಯೆ, ಆಕ್ಷೇಪ ನೀಡದಿದ್ದರಿಂದ 15 ದಿನಗಳೊಳಗೆ ಯಾರೂ ದೂರು ಸಲ್ಲಿಸದಿದ್ದರೆ ಕರ್ನಾಟಕ ಮರ ಸಂರಕ್ಷಣೆ ಕಾಯ್ದೆ ಪ್ರಕಾರ ಕಡಿಯಬಹುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News