ರಫಿಯ ಅರ್ಷದ್: ಬ್ರಿಟನ್ ನ ಪ್ರಪ್ರಥಮ ಹಿಜಾಬ್ ಧಾರಿಣಿ ನ್ಯಾಯಾಧೀಶೆ

Update: 2020-06-12 18:31 GMT
ರಫಿಯ ಅರ್ಷದ್ (Photo: Twitter)

ಮೇ ತಿಂಗಳಲ್ಲಿ ಬ್ರಿಟಿಷ್ ಮುಸ್ಲಿಂ ರಫಿಯ ಅರ್ಷದ್ ಬ್ರಿಟನ್ ನ ಮಿಡ್ಲ್ಯಾಂಡ್ಸ್ ಸರ್ಕ್ಯೂಟ್ ನ ಪ್ರಪ್ರಥಮ ಹಿಜಾಬ್ ಧಾರಿಣಿ ಮಹಿಳಾ ನ್ಯಾಯಾಧೀಶೆಯಾಗಿ ನೇಮಕಗೊಂಡಿದ್ದಾರೆ. ಈ ವಿಶಿಷ್ಟ ದಾಖಲೆ ಬರೆದಿರುವ ಸಾಧಕಿ ರಫಿಯ ಯುವ ಮುಸ್ಲಿಮರು ತಮ್ಮ ಗುರಿಯೆಡೆಗೆ ಏಕಾಗ್ರತೆಯೊಂದಿಗೆ ಸಾಗಿದರೆ ಏನನ್ನು ಬೇಕಾದರೂ ಸಾಧಿಸಬಹುದು ಮತ್ತು ಯಾವುದೇ ಧಾರ್ಮಿಕ, ಸಾಂಸ್ಕೃತಿಕ ಹಿನ್ನೆಲೆಗಳಿಂದ ಬಂದವರು ಉನ್ನತ ಸ್ಥಾನಕ್ಕೆ ತಲುಪಬಹುದು ಎಂಬುದನ್ನು ನಾನು ಸಾಬೀತುಪಡಿಸಬಯಸುತ್ತೇನೆ ಎಂದು ಹೇಳಿದ್ದಾರೆ. 

ಯಾವುದೇ ಇತರ ದೇಶಗಳಂತೆ ಬ್ರಿಟನ್ ನಲ್ಲೂ ನ್ಯಾಯಾಂಗದಲ್ಲಿ ಮಹಿಳೆಯರು ಕಡಿಮೆ. ಅದರಲ್ಲೂ ಕರಿಯರು, ಏಷ್ಯನ್ನರು, ಅಲ್ಪಸಂಖ್ಯಾತರ ಪ್ರಾತಿನಿಧ್ಯ ಹೇಳುವುದೇ ಬೇಡ. ಅಧಿಕೃತ ಅಂಕಿ ಅಂಶಗಳ ಪ್ರಕಾರ ಎಪ್ರಿಲ್ 1, 2019  ರಂದು ಇಂಗ್ಲೆಂಡ್ ನ ಒಟ್ಟು 3210 ಕೋರ್ಟುಗಳಲ್ಲಿ  ಕೇವಲ 205(6%) ನ್ಯಾಯಾಧೀಶರು ಮಾತ್ರ ಕರಿಯರು, ಏಷ್ಯನ್ ಮೂಲದವರು ಮತ್ತು ಅಲ್ಪಸಂಖ್ಯಾತರು. ಯಾವುದೇ ಹಿನ್ನೆಲೆಯ ಒಟ್ಟು ಮಹಿಳಾ ನ್ಯಾಯಾಧೀಶರು 1013 (31%).

ಈ ಬಗ್ಗೆ ಮಾತನಾಡಿರುವ ನ್ಯಾ. ರಫಿಯ "ನ್ಯಾಯಾಂಗ ಇಲಾಖೆ ಎಲ್ಲ  ಹಿನ್ನೆಲೆಯವರಿಗೆ ಪ್ರಾತಿನಿಧ್ಯ ನೀಡಲು ಗರಿಷ್ಟ ಪ್ರಯತ್ನ ಮಾಡುತ್ತದೆ. ನನ್ನನ್ನು ನೇಮಕ ಮಾಡುವಾಗ ನಾನು ಹಿಜಾಬ್ ಧರಿಸುವ ಕೆಲವೇ ಕೆಲವು ನ್ಯಾಯಾಧೀಶರಲ್ಲಿ ಒಬ್ಬಳಾಗುತ್ತೇನೆ ಎಂದು ಅವರಿಗೆ ಗೊತ್ತಿರಲಿಲ್ಲ. ನನ್ನನ್ನು ನನ್ನ ಅರ್ಹತೆ ಮೇಲೆ ನೇಮಕ ಮಾಡಲಾಗಿದೆ. ನನ್ನ ಹಿಜಾಬ್ ಗಾಗಿ ಅಲ್ಲ. ಈಗ ನನ್ನ ಸಮುದಾಯದ ಧ್ವನಿಯಾಗುವ ಅವಕಾಶ ನನಗೆ ಸಿಕ್ಕಿದೆ. ನ್ಯಾಯಾಂಗದಲ್ಲೂ ದೇಶದ ಎಲ್ಲ ಸಮುದಾಯಗಳಿಗೆ ಪ್ರಾತಿನಿಧ್ಯ ಸಿಗುವಂತಾಗುವುದು ಈಗ ಅಗತ್ಯವಾಗಿದೆ".  

ಈ ಸ್ಥಾನಕ್ಕೆ ತಲುಪುವಾಗ ಸಾಕಷ್ಟು ಭೇದಭಾವದ ಅನುಭವ ಎದುರಿಸಿಯೇ ಬಂದಿದ್ದಾರೆ. ನ್ಯಾಯಾಂಗದೊಳಗೂ ಇದನ್ನು ಅವರು ನೋಡಿದ್ದಾರೆ. ನ್ಯಾಯವಾದಿಯಾಗಿದ್ದಾಗ ವ್ಯಕ್ತಿಯೊಬ್ಬ ಇವರನ್ನು "ನೀವಿಲ್ಲಿ ಭಾಷಾಂತರ ಮಾಡುವವರೇ? ಎಂದು ಕೇಳಿದ್ದರು. ಅಲ್ಲ ಎಂದು ಉತ್ತರಿಸಿದಾಗ" ಇಲ್ಲಿ ಕೆಲಸದ ಅನುಭವಕ್ಕಾಗಿ ಬಂದಿದ್ದೀರಾ?" ಎಂದು ಮತ್ತೆ ಕೇಳಿದ್ದರು. ಅದಕ್ಕೆ " ಇಲ್ಲ, ನಾನಿಲ್ಲಿ ನ್ಯಾಯವಾದಿ " ಎಂದು ರಫಿಯ ಹೇಳಿದಾಗ ಆ ವ್ಯಕ್ತಿ ತಬ್ಬಿಬ್ಬುಗೊಂಡ ಘಟನೆಯನ್ನು ರಫಿಯ ನೆನಪಿಸುತ್ತಾರೆ. "ನನಗೆ ಆ ವ್ಯಕ್ತಿಯ ಬಗ್ಗೆ ಯಾವುದೇ ದ್ವೇಷವಿಲ್ಲ. ಆದರೆ ನಮ್ಮ ವ್ಯವಸ್ಥೆಯೊಳಗೆ ಮನಸ್ಥಿತಿ ಹೇಗಿದೆ ಎಂಬುದಕ್ಕೆ ಇದು ನಿದರ್ಶನ. ಉನ್ನತ ಸ್ಥಾನದಲ್ಲಿರುವ ವೃತ್ತಿಪರರು ನನ್ನಂತೆ ಕಾಣುವುದಿಲ್ಲ ಎಂಬ ಪೂರ್ವಗ್ರಹ ಇಲ್ಲಿದೆ " ಎಂದು ಹೇಳುತ್ತಾರೆ.  

ಕಾನೂನು ವಿದ್ಯಾಭ್ಯಾಸ ಮಾಡುವಾಗಲೇ ರಫಿಯ ಅವರಿಗೆ ಈ ಅನುಭವ ಆಗಿತ್ತು. 2001 ರಲ್ಲಿ ಅವರು ಇನ್ಸ್ ಆಫ್ ಕೋರ್ಟ್ ಸ್ಕೂಲ್ ಆಫ್ ಲಾ ಗೆ ವಿದ್ಯಾರ್ಥಿವೇತನದ ಸಂದರ್ಶನಕ್ಕೆ ಹೋಗುವಾಗ ಹಿಜಾಬ್ ಧರಿಸದೇ ಹೋಗುವಂತೆ ಆಕೆಗೆ ಕುಟುಂಬ ಸದಸ್ಯರು ಸಲಹೆ ನೀಡಿದ್ದರು. ಆದರೆ ಆಕೆ ಅದನ್ನು ಸ್ವೀಕರಿಸಲಿಲ್ಲ.  ಹಿಜಾಬ್ ಧರಿಸಿಯೇ ಸಂದರ್ಶನ ಎದುರಿಸಿದರು ಹಾಗು ಆಯ್ಕೆಯೂ ಆದರು. 

"ನಾನು ಅಂದು ನಿರ್ಧರಿಸಿದೆ. ನಾನು ಶಿರವಸ್ತ್ರ ಧರಿಸಿಯೇ ಹೋಗುವೆ. ನಾನು ಏನಾಗಿದ್ದೇನೆಯೋ ಹಾಗೆಯೇ ಜನರು ನನ್ನನ್ನು ಸ್ವೀಕರಿಸಬೇಕು. ನನ್ನ ವೃತ್ತಿಗಾಗಿ ನಾನು ಬದಲಾಗಬೇಕು ಎಂದಾದರೆ ನನಗೆ ಆ ವೃತ್ತಿ ಬೇಡ. ಅಂದು ನಾನು ನಾನಾಗಿಯೇ ಹೋದೆ. ಆಯ್ಕೆಯಾಗಿ ವಿದ್ಯಾರ್ಥಿವೇತನವನ್ನೂ ಪಡೆದೆ. ಅದು ನನ್ನ ವೃತ್ತಿ ಜೀವನದ ಅತ್ಯಂತ ಮಹತ್ವದ ಹೆಜ್ಜೆ ಅದು. ಹೌದು, ನಾನು ಖಂಡಿತ ಸಾಧಿಸಬಲ್ಲೆ ಎಂಬುದರ ಗಟ್ಟಿ ನಿದರ್ಶನವಾಗಿತ್ತದು" ಎಂದು ಹೇಳುತ್ತಾರೆ ನ್ಯಾ. ರಫಿಯ. 

ರಫಿಯ ಈವರೆಗೆ ಸೇವೆ ಸಲ್ಲಿಸುತ್ತಿದ್ದ ಸೇಂಟ್ ಮೇರೀಸ್ ಲಾ ಚೇಂಬರ್ಸ್ ನ ಮುಖ್ಯಸ್ಥರಾದ ವಿಕಿ ಹೋಜ್ ಹಾಗು ಜೂಡಿ ಕ್ಲಾಕ್ಸ್ಟನ್ ಅವರು "ರಫಿಯಾಗೆ ಅರ್ಹವಾಗಿಯೇ ಈ ಹುದ್ದೆ ಸಿಕ್ಕಿದೆ. ನಿಜಕ್ಕೂ ಖುಷಿಯಾಗಿದೆ. ನ್ಯಾಯವಾದಿಯಾಗಿ ಯಶಸ್ವಿಯಾಗಬಹುದು ಎಂದು ರಫಿಯ ಮುಸ್ಲಿಂ ಮಹಿಳೆಯರಿಗೆ ದಾರಿ ತೋರಿಸಿದ್ದಾರೆ. ವೃತ್ತಿಯಲ್ಲಿ ಸಮಾನತೆ ಹಾಗು ವೈವಿಧ್ಯತೆಯನ್ನು ತರಲು ಅವರು ಶ್ರಮಿಸಿದ್ದಾರೆ. ಅವರ ಅರ್ಹತೆ ಮೇಲೆಯೇ ಈ ಹುದ್ದೆಯನ್ನು ಅವರು ಪಡೆದಿದ್ದಾರೆ. ಅವರ ಬಗ್ಗೆ ನಮಗೆ ಹೆಮ್ಮೆ ಇದೆ " ಎಂದು ಹೇಳಿದ್ದಾರೆ.   

"ನೀವು ಒಂದು ವ್ಯವಸ್ಥೆಗೆ ಒಗ್ಗುತ್ತೀರಾ ಎಂದು ಭಯಪಡಬೇಡಿ, ಅದನ್ನು ಮೀರಿ ನೀವು ಬಯಸಿದ್ದನ್ನು ಸಾಧಿಸಲು ಮುನ್ನುಗ್ಗಿ" ಎನ್ನುವುದು ಯುವಜನರಿಗೆ  ರಫಿಯ ಅವರ ಸಲಹೆ. ಮೂರು ಮಕ್ಕಳ ತಾಯಿ ರಫಿಯ ತನಗೆ ವೃತ್ತಿ ಜೀವನದುದ್ದಕ್ಕೂ ಪತಿ ನೀಡಿದ ಸಹಕಾರವನ್ನು ಸ್ಮರಿಸುತ್ತಾರೆ. 17 ವರ್ಷ ಕಾನೂನು ವೃತ್ತಿಜೀವನ ನಡೆಸಿರುವ  ರಫಿಯ ಇಸ್ಲಾಮಿಕ್ ಕಾನೂನಿನಲ್ಲಿ ಪರಿಣತೆಯಾಗಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News