ಕಳವಳ ಹೆಚ್ಚಿಸುವ ಕೈಗಾರಿಕಾ ಅಪಘಾತಗಳು

Update: 2020-06-12 17:29 GMT

ಕೋವಿಡ್ ನಿರ್ಬಂಧದ ಬಳಿಕ ತಮ್ಮ ತಮ್ಮ ಹುಟ್ಟೂರಿಗೆ ವಲಸೆ ಹೊರಟ ಕಾರ್ಮಿಕರ ಮೇಲೆ ಡಿಎಂಎ ಕಾಯ್ದೆಯ ಅನ್ವಯ ಕ್ರಿಮಿನಲ್ ಕೇಸುಗಳನ್ನು ದಾಖಲಿಸಿ ಅವರನ್ನು ಬಂಧಿಸಿದ ಘಟನೆಗಳು ವರದಿಯಾಗಿವೆ. ನಿಜವಾಗಿ ಕೈಗಾರಿಕಾ ಸ್ಥಾವರದ ಮಾಲಕರ/ಹಿರಿಯ ಅಧಿಕಾರಿಗಳ ನಿರ್ಲಕ್ಷದಿಂದ ದುರಂತಗಳು ಸಂಭವಿಸಿ ಜೀವ ಹಾನಿ ಹಾಗೂ ಸಂಪತ್ತಿಗೆ ಹಾನಿಯಾದರೆ ಅವರಿಗೆ ಆ ಕಾನೂನು ಅನ್ವಯವಾಗಬೇಡವೇ ಎಂಬ ಪ್ರಶ್ನೆಯನ್ನೂ ಕೇಳಬೇಕಾಗುತ್ತದೆ.


ಈ ವರ್ಷ ಮೇ ಹಾಗೂ ಜೂನ್ ತಿಂಗಳಿನ 10ರ ಅವಧಿಯಲ್ಲಿಯೇ ದೇಶದಾದ್ಯಂತ ಐದು ಕೈಗಾರಿಕಾ ಸ್ಥಾವರಗಳಲ್ಲಿ ಅಪಘಾತಗಳು ಸಂಭವಿಸಿವೆ. ಕೋವಿಡ್-19 ಮಹಾಮಾರಿಯ ನಿರ್ವಹಣೆಯಲ್ಲಿ ಗಮನ ಹರಿಸುತ್ತಿದ್ದ ಇಡೀ ದೇಶದ ಆಡಳಿತ ಸೂತ್ರವನ್ನು ಹೊತ್ತವರು ಸಾಮಾಜಿಕ ಮಾಧ್ಯಮದ ಮೂಲಕ ತಮ್ಮ ಸಂತಾಪವನ್ನು ಸಾರ್ವಜನಿಕವಾಗಿ ಸೂಚಿಸಿ ಕೈತೊಳೆದುಕೊಂಡಿದ್ದಾರೆ. ಇನ್ನೂ ಎಷ್ಟು ಹಾನಿಗಳು ಸಂಭವಿಸಲಿವೆಯೋ ಎಂಬುದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಉದ್ದಿಮೆ ಸ್ನೇಹಿ ಪರಿಸರವನ್ನು ಬೆಳೆಸುವ ಆತುರದಲ್ಲಿ ಅಗತ್ಯದ ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕೆಂಬ ನಿಯಮಗಳನ್ನು ಸಡಿಲಿಸಲಾಗುತ್ತಿದೆ.

ಈ ಘಟನೆಗಳ ಬಗ್ಗೆ ಒಂದು ಸ್ಥೂಲ ನೋಟವನ್ನು ಬೀರಿ ಅವುಗಳಿಂದ ಕಲಿಯಬೇಕಾದ ಪಾಠಗಳ ಕಡೆಗೆ ಮತ್ತೊಮ್ಮೆ ಗಮನ ಹರಿಸುವ ತುರ್ತು ಇಂದಿದೆ.
ಮೇ ತಿಂಗಳಿನ ಮೂರು ಘಟನೆಗಳು:

ವಿಶಾಖಪಟ್ಟಣದ ಹೊರವಲಯದಲ್ಲಿರುವ ದಕ್ಷಿಣ ಕೊರಿಯ ಮೂಲದ ಎಲ್. ಜಿ. ಪಾಲಿಮರ್ಸ್‌ ರಾಸಾಯನಿಕ ಕಾರ್ಖಾನೆಯಲ್ಲಿ ವಿಷಾನಿಲ ಸೋರಿ 12 ಮಂದಿ ನಾಗರಿಕರು ಮೃತರಾದರು.

ತಮಿಳುನಾಡಿನ ಕಡಲೂರಿನ ಸರಕಾರಿ ಸ್ವಾಮ್ಯದ ನೈವೇಲಿ ಲಿಗ್ನೈಟ್ ಕಾರ್ಪೊರೇಶನ್ ನ ಕಲ್ಲಿದ್ದಲು ಸ್ಥಾವರದ ಬಾಯ್ಲರ್ ಸ್ಫೋಟಿಸಿ ಕನಿಷ್ಠ 7 ಮಂದಿ ಗಾಯಗೊಂಡರು.

ಛತ್ತೀಸಗಡದ ರಾಯಗಡದ ಶಕ್ತಿ ಪೇಪರ್ ಮಿಲ್ ನಲ್ಲಿ ಅನಿಲ ಸೋರಿ 7 ಮಂದಿ ಕಾರ್ಮಿಕರು ಗಾಯಗೊಂಡರು. ಜೂನ್ ನಲ್ಲಿ ಮತ್ತೆರಡು ಅವಘಡಗಳು:

ಈ ತಿಂಗಳ ಆರಂಭದಲ್ಲಿಯೇ ಗುಜರಾತಿನ ದಹೇಜದ ವಿಶೇಷ ಆರ್ಥಿಕ ವಲಯದಲ್ಲಿರುವ ಯಶಸ್ವಿ ರಾಸಾಯನಿಕ ಸ್ಥಾವರದಲ್ಲಿ ಬಾಯ್ಲರ್ ಸ್ಫೋಟದಿಂದ ಬೆಂಕಿ ಅನಾಹುತ ಸಂಭವಿಸಿ 8 ಮಂದಿ ಅಸು ನೀಗಿ 50 ಮಂದಿ ಗಾಯಗೊಂಡರು. ಸಮೀಪದಲ್ಲಿಯೇ ಇನ್ನೂ ಕೆಲವು ರಾಸಾಯನಿಕ ಕಾರ್ಖಾನೆಗಳಿದ್ದು ಆ ಪ್ರದೇಶದಿಂದ ಮುನ್ನೆಚ್ಚರಿಕೆಯ ಕ್ರಮವಾಗಿ ಸುಮಾರು 4,800 ಮಂದಿಯನ್ನು ಸ್ಥಳಾಂತರಿಸಲಾಗಿದೆ. ಈ ಮಧ್ಯೆ, ಮೇ 27ರಿಂದ ಅಸ್ಸಾಮಿನ ತಿನ್ಸುಖಿಯದಲ್ಲಿ ಸರಕಾರಿ ಸ್ವಾಮ್ಯದ ಆಯಿಲ್ ಇಂಡಿಯಾದ ತೈಲ ಬಾವಿಯಿಂದ ಅನಿಲ ಸೋರಿಕೆ ಆರಂಭವಾಗಿ ಸಮೀಪದ ಅನೇಕ ಭತ್ತದ ಗದ್ದೆಗಳು, ಕೃಷಿ ಭೂಮಿ, ವನ್ಯಜೀವಿಗಳು, ಕೆರೆ ಮತ್ತು ಜಲಮೂಲಗಳಿಗೆ ಹಾನಿಯಾಗಿದೆ. ಸುಮಾರು 6000 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಅಸ್ಸಾಮಿನ ಅಗ್ನಿ ಶಾಮಕ ದಳದವರು ಬೆಂಕಿಯನ್ನು ಆರಿಸಲು ಹೆಣಗಾಡುತ್ತಿದ್ದಂತೆ ದಳದ ಇಬ್ಬರು ಉದ್ಯೋಗಿಗಳು ಕಾಣೆಯಾಗಿ ಎರಡು ದಿನದ ಬಳಿಕ ಮೃತರಾದ ಸುದ್ದಿ ಬಂದಿದೆ. ಸಿಂಗಾಪುರದ ವಿಶೇಷ ತಂಡವೊಂದು ಅನಿಲ ಸೋರುವ ಬಾವಿಯನ್ನು ಹತೋಟಿಗೆ ತರಲು ಆಗಮಿಸಿದೆ.

ಈ ನಡುವೆ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (National Green Tribunal ಎನ್ ಜಿ ಟಿ) ಎರಡು ಪ್ರತ್ಯೇಕ ನಿರ್ದೇಶನಗಳಲ್ಲಿ ಗುಜರಾತಿನ ಮತ್ತು ಆಂಧ್ರದ ಅಪಘಾತಗಳಿಗೆ ಆಯಾಯ ಕಂಪೆನಿಗಳನ್ನು ಹೊಣೆಗಾರರನ್ನಾಗಿ ಘೋಷಿಸಿದೆ. ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಲ್ಲಿ ಅವುಗಳ ವೈಫಲ್ಯವನ್ನು ಉಲ್ಲೇಖಿಸಿ ಸೂಕ್ತಕ್ರಮಗಳನ್ನು ಕೈಗೊಳ್ಳಲು ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ಆದೇಶ ನೀಡಿದೆ.

ಸುರಕ್ಷತೆಯನ್ನು ಪರಿಪಾಲಿಸಲು ಇರುವ ಸಂಸ್ಥೆಗಳು ಮತ್ತು ನಿಯಂತ್ರಣ:
2005ರಲ್ಲಿ ಜಾರಿಗೆ ಬಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯ (Disaster Management Act ಡಿಎಂಎ) ಪ್ರಕಾರ ರಾಸಾಯನಿಕ ಕಾರ್ಖಾನೆಗಳ ಕುರಿತಂತೆ ಮೂರು ಮಟ್ಟದಲ್ಲಿ ಮೇಲ್ವಿಚಾರಣಾ ಮಂಡಳಿಗಳಿವೆ: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (National Disaster Management Authority-ಎನ್ ಡಿಎಂಎ), ರಾಜ್ಯ ವಿಪತ್ತು ಪ್ರಾಧಿಕಾರ ಮತ್ತು ಜಿಲ್ಲಾ ಪ್ರಾಧಿಕಾರ. ಇವುಗಳ ಜವಾಬ್ದಾರಿ ವಿಪತ್ತು ಸಂಭವಿಸಿದಾಗ ಕಾರ್ಯೋನ್ಮುಖವಾಗುವುದು ಒಂದೇ ಅಲ್ಲ. ಒಂದು ಸ್ಥಾವರದ ಆರಂಭದಿಂದಲೇ ಯಾವ ಮುನ್ನೆಚ್ಚರಿಕೆಗಳನ್ನು ಆ ಕಂಪೆನಿ ಕೈಗೊಂಡಿದೆ ಮತ್ತು ಸದಾ ಕಾಲ ಎಚ್ಚರ ವಹಿಸುತ್ತಾ ಇದೆಯೇ ಎಂಬುದನ್ನು ನಿಯಮಿತವಾಗಿ ಪರಿಶೀಲಿಸುವುದೂ ಅವುಗಳ ಕಾರ್ಯವ್ಯಾಪ್ತಿಯಲ್ಲಿ ಇದೆ. ಇದಲ್ಲದೆ ಪೆಟ್ರೋಲಿಯಂ ಆ್ಯಂಡ್ ಎಕ್ಸ್ ಪ್ಲೋಸಿವ್ಸ್ ಸೇಫ್ಟಿ ಆರ್ಗನೈಸೇಶನ್ (Petroleum and Explosives Safety Organisation-PESO) ಎಂಬ ಸಂಸ್ಥೆಗೆ ರಾಸಾಯನಿಕ ಹಾಗೂ ಸ್ಫೋಟವಾಗುವ ಸಾಧ್ಯತೆ ಇರುವ ಸ್ಥಾವರಗಳನ್ನು ಕಾಲಕಾಲಕ್ಕೆ ಪರಿಶೀಲನೆಗೆ ಒಳಪಡಿಸುವ ಮತ್ತು ಉದ್ದಿಮೆಗಳಿಗೆ ಸುರಕ್ಷತಾ ಕ್ರಮಗಳ ಬಗ್ಗೆ ಸಲಹೆ ನೀಡುವ ಅಧಿಕಾರವಿದೆ. ನಮ್ಮ ದೇಶದಲ್ಲಿ ಔದ್ಯೋಗಿಕ ಸ್ಥಾವರಗಳ ನಿಯಂತ್ರಣ, ಅಲ್ಲಿನ ಕಾರ್ಮಿಕರ ಹಾಗೂ ಪರಿಸರದಲ್ಲಿ ವಾಸಿಸುವರ ಹಿತರಕ್ಷಣೆಯನ್ನು ಕಾಯಲೆಂದೇ ಕಾನೂನುಗಳಿವೆ ಮತ್ತು ನಿಯಂತ್ರಣ ಮಂಡಳಿಗಳಿವೆ. ನಿರ್ಲಕ್ಷದಿಂದ ಹಾನಿಯಾದಾಗ ಪರಿಹಾರ ಕೊಡಲು ಕೋರ್ಟುಗಳಿವೆ. 1984ರ ಭೋಪಾಲದ ಭೀಕರ ದುರಂತದ ಬಳಿಕ ರಾಸಾಯನಿಕ ಕಾರ್ಖಾನೆಗಳ ಸ್ಥಾಪನೆಯ ಬಗೆಗೂ ಹೊಸ ನೀತಿಗಳನ್ನು ಮಾಡಲಾಗಿದೆ. ಅವಘಡಗಳಿಗೆ ಕಾರಣಗಳೇನು?

 ಶಾಸನಾತ್ಮಕ ವ್ಯವಸ್ಥೆ ಇದ್ದೂ ಪದೇ ಪದೇ ಈ ತರದ ವಿಪತ್ತುಗಳು ನಮ್ಮೆದುರು ನಡೆಯುತ್ತಲೇ ಇವೆ. ಈ ಪರಿಸ್ಥಿತಿಗೆ ಎರಡು ಮುಖ್ಯ ಕಾರಣಗಳನ್ನು ಗುರುತಿಸಬಹುದು:

1.ಮುಂಜಾಗರೂಕತಾ ಕ್ರಮಗಳ ನಿರ್ಲಕ್ಷ

2.ನಿಯಂತ್ರಕರ ವೈಫಲ್ಯಗಳು

ಅಸ್ಸಾಮಿನ ತೈಲಬಾವಿಯಿಂದ ಆಗುತ್ತಿರುವ ಅನಿಲ ಸೋರಿಕೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ವಿಚಿತ್ರವೆಂದರೆ ಅಲ್ಲಿನ ಹಿರಿಯ ಅಧಿಕಾರಿಗಳು ಕಾರಣವನ್ನು ಗುರುತಿಸುವುದರಲ್ಲಿ ತಮ್ಮ ಅಸಹಾಯಕತೆಯನ್ನು ಮಾಧ್ಯಮಗಳ ಮುಂದೆ ಹೇಳಿಕೊಂಡಿರುವುದು! ಉಳಿದ ನಾಲ್ಕೂ ಘಟನೆಗಳಿಗೆ ಪ್ರಮುಖ ಕಾರಣ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ವ್ಯವಸ್ಥಾಪಕ ವರ್ಗದ ನಿರ್ಲಕ್ಷವೇ ಎಂಬ ವರದಿಗಳು ಬಂದಿವೆ. ಕೋವಿಡ್ ಪ್ರೇರಿತ ನಿರ್ಬಂಧದಿಂದಾಗಿ ಕೈಗಾರಿಕಾ ಸ್ಥಾವರಗಳನ್ನು ಮಾರ್ಚ್ ತಿಂಗಳ ಕೊನೆಯ ವಾರದಿಂದ ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಆದರೆ ಅವುಗಳ ಪುನರಾರಂಭದ ಕಾಲದಲ್ಲಿ ಅಪಾಯವನ್ನು ಉಂಟುಮಾಡಬಲ್ಲ ವಿಭಾಗಗಳ ಸೂಕ್ತವಾದ ಪರಿಶೀಲನೆ ಮಾಡದೆ ಕೆಲಸವನ್ನು ಆರಂಭಿಸಲಾಯಿತು. ಒಂದು ಸ್ಥಾವರದಲ್ಲಿ ಆಂತರಿಕವಾದ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಿದರೆ ಅಪಘಾತಗಳ ಸಂಭವ ಕಡಿಮೆ ಯಾಗುತ್ತದೆ. ದೈನಂದಿನ ನಿರ್ವಹಣೆಯ (Routine maintenance) ನೀತಿಯನ್ನು ಯಾವುದೇ ರಾಜಿಯಿಲ್ಲದೆ ನಡೆಸಿಕೊಂಡು ಬಂದಾಗ ಕುಂದು ಕೊರತೆಗಳು ಗಮನಕ್ಕೆ ಬಂದು ಅವುಗಳನ್ನು ತಕ್ಷಣವೇ ಪರಿಹರಿಸಿಕೊಳ್ಳಲು ಸಾಧ್ಯ. ತಾಂತ್ರಿಕ ಲೋಪದೋಷಗಳನ್ನು ಸರಿಪಡಿಸಲು ವೆಚ್ಚವಾಗುತ್ತದೆ. ಆ ವೆಚ್ಚವನ್ನು ಕಂಪೆನಿಯು ಭರಿಸಿಕೊಂಡು ಮುಂದುವರಿಯಬೇಕಾಗುತ್ತದೆ. ಆದರೆ, ಲಾಭವೇ ಮುಖ್ಯಗುರಿಯಾದಾಗ ನಿರ್ವಹಣಾ ವೆಚ್ಚವನ್ನು ಕಡಿತಗೊಳಿಸುವ ನೆಪದಲ್ಲಿ ಅಗತ್ಯದ ‘ರಿಪೇರಿ’ಗಳನ್ನು ಕೈಬಿಡುವ ಉದಾಹರಣೆಗಳೂ ಇವೆ. ಭೋಪಾಲದ ದುರಂತಕ್ಕೆ ಈ ನಿರ್ಲಕ್ಷವು ಪ್ರಧಾನ ಕಾರಣವಾಗಿತ್ತು.

ಹೆಚ್ಚುತ್ತಿರುವ ಅಪಾಯದ ಸೂಚನೆಗಳು ಮತ್ತು ತುರ್ತು ಕ್ರಮಗಳು:
ಅಭಿವೃದ್ಧಿಯ ನೆಪದಲ್ಲಿ, ಹೊಸ ಹೊಸ ರಾಸಾಯನಿಕ ಅಥವಾ ಇನ್ನಿತರ ಕೈಗಾರಿಕೋದ್ಯಮಗಳನ್ನು ಆರಂಭಿಸಲು ಸರಕಾರ ಉದ್ದಿಮೆ ಸ್ನೇಹಿ ವಾತಾವರಣವನ್ನು ಕಲ್ಪಿಸಿಕೊಡುವ ಉದ್ದೇಶದಿಂದ ಅಗತ್ಯದ ಮುಂಜಾಗರೂಕತಾ ನೀತಿಗಳನ್ನು ಸಡಿಲಗೊಳಿಸುವ ಪರಿಪಾಠ ಬೆಳೆಯುತ್ತಿದೆ. ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಸ್ಥಾವರಗಳಲ್ಲಿಯೂ ಕಾಲಾನುಕಾಲಕ್ಕೆ ಅಗತ್ಯವಾದ ಪರಿಶೀಲನೆ, ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಬೇಕಾದ ತರಬೇತಿ, ನಿರ್ವಹಣೆಯ ಲೋಪಗಳ ನಿವಾರಣೆ ಮುಂತಾದ ವಿಚಾರಗಳ ಬಗೆಗೂ ಸರಕಾರದ ಅಂಗಸಂಸ್ಥೆಗಳು ನಿರ್ಲಿಪ್ತ ಧೋರಣೆ ವಹಿಸುವ ಸಾಧ್ಯತೆ ಹೆಚ್ಚುತ್ತಿದೆ. ಎನ್ ಡಿ ಎಂ ಎಯ ಅಧಿಕಾರವ್ಯಾಪ್ತಿಯಲ್ಲಿಯೇ ಬರುವ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳುವ ತುರ್ತು ಇಂದು ದೇಶದ ಮುಂದಿದೆ. ನಿಯಂತ್ರಕರ ವೈಫಲ್ಯಗಳಿಗೆ ಅವರನ್ನು ಉತ್ತರದಾಯಿಗಳಾಗಿಸಬೇಕಾಗಿದೆ.

ಈ ನಿಟ್ಟಿನಲ್ಲಿ ಸರಕಾರದ ನಿಯಂತ್ರಣ ಮಂಡಳಿಗಳು ಹೆಚ್ಚಿನ ದಕ್ಷತೆಯಿಂದ ಕಾರ್ಯೋನ್ಮುಖವಾಗಬೇಕು. ನಿಯಮಿತ ಅವಧಿಗನುಗುಣವಾಗಿ ಸುರಕ್ಷತಾ ಕ್ರಮಗಳನ್ನು ಕಂಪೆನಿಗಳು ಅನುಸರಿಸುತ್ತಿವೆಯೇ ಎಂದು ಮಂಡಳಿಗಳು ಸ್ಥಳಕ್ಕೆ ಭೇಟಿ ನೀಡಿ ಅಗತ್ಯದ ಮುನ್ನೆಚ್ಚರಿಕೆಯನ್ನು ವಹಿಸಬೇಕು. ವಿಶಾಖಪಟ್ಟಣದ ದುರಂತದ ಹಿನ್ನೆಲೆಯಲ್ಲಿ ಜನನಿಬಿಡ ಪ್ರದೇಶಗಳಿಗೆ ಸಮೀಪವಿರುವ ರಾಸಾಯನಿಕ ಸ್ಥಾವರಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗುತ್ತದೆ.

ಕೋವಿಡ್ ನಿರ್ಬಂಧದ ಬಳಿಕ ತಮ್ಮ ತಮ್ಮ ಹುಟ್ಟೂರಿಗೆ ವಲಸೆ ಹೊರಟ ಕಾರ್ಮಿಕರ ಮೇಲೆ ಡಿಎಂಎ ಕಾಯ್ದೆಯ ಅನ್ವಯ ಕ್ರಿಮಿನಲ್ ಕೇಸುಗಳನ್ನು ದಾಖಲಿಸಿ ಅವರನ್ನು ಬಂಧಿಸಿದ ಘಟನೆಗಳು ವರದಿಯಾಗಿವೆ. ನಿಜವಾಗಿ ಕೈಗಾರಿಕಾ ಸ್ಥಾವರದ ಮಾಲಕರ/ಹಿರಿಯ ಅಧಿಕಾರಿಗಳ ನಿರ್ಲಕ್ಷದಿಂದ ದುರಂತಗಳು ಸಂಭವಿಸಿ ಜೀವ ಹಾನಿ ಹಾಗೂ ಸಂಪತ್ತಿಗೆ ಹಾನಿಯಾದರೆ ಅವರಿಗೆ ಆ ಕಾನೂನು ಅನ್ವಯವಾಗಬೇಡವೇ ಎಂಬ ಪ್ರಶ್ನೆಯನ್ನೂ ಕೇಳಬೇಕಾಗುತ್ತದೆ.

ಅಭಿವೃದ್ಧಿ ಪರ ನೀತಿಗಳು ದೇಶದ ಪ್ರಗತಿಗೆ ಅಗತ್ಯ ಎಂಬುದರ ಬಗ್ಗೆ ಎರಡು ಮಾತಿಲ್ಲ. ಆದರೆ, ಹೊಸ ಸ್ಥಾವರಗಳಲ್ಲಿ ದುಡಿಯುವ ನೌಕರರ, ಅವುಗಳ ಸಮೀಪದಲ್ಲಿ ನೆಲೆಸಿರುವ ನಾಗರಿಕರ ಹಾಗೂ ಅಲ್ಲಿನ ಪರಿಸರದ ರಕ್ಷಣೆಗೆ ಆದ್ಯತೆ ನೀಡಬೇಕು. ಮಾತ್ರವಲ್ಲ, ಈಗಾಗಲೇ ಉತ್ಪಾದನೆಯಲ್ಲಿ ತೊಡಗಿರುವ ಉದ್ದಿಮೆಗಳಲ್ಲಿ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರುವ ಪ್ರವೃತ್ತಿ ಬೆಳೆಯಬೇಕು. ನಿರ್ಲಕ್ಷ ತೋರಿದ ಉದ್ದಿಮೆಗಳ ಮೇಲೆ ಹಾಗೂ ತಮ್ಮ ಜವಾಬ್ದಾರಿಯಿಂದ ವಿಮುಖರಾದ ಸರಕಾರಿ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾದ ಕ್ರಮಗಳನ್ನು ಕೈಗೊಳ್ಳಬೇಕು. ಹಾಗಾದರೆ ಮಾತ್ರ ಈ ತರದ ವಿಪತ್ತುಗಳನ್ನು ತಡೆಯಬಹುದು ಅಥವಾ ಅವುಗಳಿಂದಾಗಬಹುದಾದ ಹಾನಿಯ ತೀವ್ರತೆಯನ್ನು ಕಡಿಮೆ ಮಾಡಲು ಸಾಧ್ಯ. 

Writer - ಟಿ.ಆರ್.ಭಟ್

contributor

Editor - ಟಿ.ಆರ್.ಭಟ್

contributor

Similar News