ಸರಕಾರದ ಕೃಪಾಕಟಾಕ್ಷದಲ್ಲಿ ಕ್ರಿಮಿನಲ್ ಆರೋಪಿಗಳು!

Update: 2020-06-12 19:30 GMT

ಭಾಗ-2

6.ಸಾಧ್ವಿ ಪ್ರಜ್ಞಾ ಠಾಕೂರ್
ಮಧ್ಯಪ್ರದೇಶ ನಿವಾಸಿ ಪ್ರಜ್ಞಾ ಸಿಂಗ್ ಠಾಕೂರ್ ಅಥವಾ ಸಾಧ್ವಿ ಪ್ರಜ್ಞಾಗೆ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಎನ್‌ಐಎ ಕ್ಲೀನ್‌ಚಿಟ್ ನೀಡಿದ ಬಳಿಕ 2015ರಲ್ಲಿ ಜಾಮೀನು ಮಂಜೂರು ಮಾಡಲಾಯಿತು. ಮಹಾರಾಷ್ಟ್ರದ ಮಾಲೆಗಾಂವ್ ನಲ್ಲಿ 2008ರಲ್ಲಿ ನಡೆದ ಈ ಘಟನೆಯಲ್ಲಿ 10 ಮಂದಿ ಮೃತಪಟ್ಟು, 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

ಕೇಂದ್ರ ಸರಕಾರದ ಅಧೀನದಲ್ಲಿರುವ ತನಿಖಾ ಸಂಸ್ಥೆ ಪ್ರಕರಣದಲ್ಲಿ ನಿಧಾನ ಪ್ರವೃತ್ತಿ ತೋರುವಂತೆ ಒತ್ತಡ ತರುತ್ತಿದೆ ಎಂದು ವಿಶೇಷ ಸಾರ್ವಜನಿಕ ಅಭಿಯೋಜಕಿ ರೋಹಿಣಿ ಸಾಲ್ಯಾನ್ ಇಂಡಿಯನ್ ಎಕ್ಸ್‌ಪ್ರೆಸ್ ಜತೆ ಮಾತನಾಡಿ ಬಹಿರಂಗಪಡಿಸಿದ ಬೆನ್ನಲ್ಲೇ, ಪ್ರಜ್ಞಾ ಸಿಂಗ್ ಗೆ ಎನ್‌ಐಎ ಕ್ಲೀನ್‌ಚಿಟ್ ನೀಡಿತ್ತು. ಆದರೆ ಎನ್‌ಐಎ ಅಭಿಪ್ರಾಯವನ್ನು ನ್ಯಾಯಾಲಯ ತಿರಸ್ಕರಿಸಿ, ಯುಎಪಿಎ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅನ್ವಯ ಭಯೋತ್ಪಾದನೆ ಆರೋಪವನ್ನು ಮುಂದುವರಿಸಿದೆ.
2018ರ ಅಕ್ಟೋಬರ್‌ನಲ್ಲಿ ಅಂದರೆ ಸ್ಫೋಟ ನಡೆದ 10 ವರ್ಷಗಳ ಬಳಿಕ ಮತ್ತು ಬಂಧನದ ಒಂಭತ್ತು ವರ್ಷಗಳ ಬಳಿಕ ಎನ್‌ಐಎ ಸಾಧ್ವಿ ವಿರುದ್ಧ ಆರೋಪ ಫ್ರೇಮ್ ಮಾಡಿತ್ತು.
2017ರಲ್ಲಿ ವಿಶೇಷ ಎನ್‌ಐಎ ನ್ಯಾಯಾಲಯ ಕರಾಳ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯಡಿ, ಪ್ರಜ್ಞಾ ಹಾಗೂ ಇತರರ ವಿರುದ್ಧ ಇದ್ದ ಎಲ್ಲ ಆರೋಪಗಳನ್ನು ಕೈಬಿಟ್ಟಿತು. ಅದೇ ವರ್ಷ ಬಾಂಬೆ ಹೈಕೋರ್ಟ್, ಅನಾರೋಗ್ಯದ ಕಾರಣದಿಂದ ಪ್ರಜ್ಞಾಗೆ ಜಾಮೀನು ನೀಡಿತು. ಆದಾಗ್ಯೂ ಯುಎಪಿಎ ಅಡಿಯಲ್ಲಿ ಭಯೋತ್ಪಾದನೆ ಆರೋಪವನ್ನು ಎದುರಿಸಬೇಕಾಗಿದೆ.
2019ರಲ್ಲಿ ಬಿಜೆಪಿಗೆ ಸೇರ್ಪಡೆಯಾದ ಪ್ರಜ್ಞಾ ಇದೀಗ ಭೋಪಾಲ್ ಸಂಸದೆ. ಪ್ರಜ್ಞಾ ತಮ್ಮ ಕಾಲೇಜು ದಿನಗಳಲ್ಲಿ ಎಬಿವಿಪಿ ಸದಸ್ಯೆಯಾಗಿದ್ದವರು.

2019ರ ಜೂನ್‌ನಲ್ಲಿ ಅವರ ವಕೀಲ, ಮುಂಬೈನ ವಿಶೇಷ ಎನ್‌ಐಎ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ, ಮುಂದಿನ ಆದೇಶದವರೆಗೆ ವಿನಾಯಿತಿ ನೀಡುವಂತೆ ಕೋರಿದರು. ಆದರೆ ನ್ಯಾಯಾಲಯ ಅದನ್ನು ತಿರಸ್ಕರಿಸಿದ್ದರಿಂದ ಪ್ರಜ್ಞಾ ಅನಿವಾರ್ಯವಾಗಿ ಹಾಜರಾಗಬೇಕಾಯಿತು. 2018ರಲ್ಲಿ ಆರೋಪ ಫ್ರೇಮ್ ಆದ ಬಳಿಕ ನ್ಯಾಯಾಲಯದಲ್ಲಿ ಅವರು ಹಾಜರಾದದ್ದು ಇದೇ ಮೊದಲು.

7.ಮಾಯಾ ಕೊಡ್ನಾನಿ

ಗುಜರಾತ್‌ನಲ್ಲಿ ಮೋದಿ ಸರಕಾರದಲ್ಲಿ ಸಚಿವೆಯಾಗಿದ್ದ ಮಾಯಾ ಸುರೇಂದ್ರ ಕುಮಾರ್ ಕೊಡ್ನಾನಿಯವರನ್ನು 2018ರಲ್ಲಿ ಗುಜರಾತ್ ಹೈಕೋರ್ಟ್, 2002ರ ನರೋಡಾ ಪಾಟಿಯಾ ಪ್ರಕರಣದಿಂದ ಆರೋಪಮುಕ್ತಗೊಳಿಸಿತು. ಒಂಭತ್ತು ವರ್ಷಗಳ ಬಳಿಕ ಜೈಲಿನಿಂದ ಹೊರಬಂದರು. ಇದಾಗಿ ಎರಡು ವರ್ಷ ಕಳೆದರೂ, ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ.
ಆರೆಸ್ಸೆಸ್ ಪ್ರಚಾರಕರ ಪುತ್ರಿಯಾದ ಕೊಡ್ನಾನಿಗೆ ವಿಚಾರಣಾ ನ್ಯಾಯಾಲಯ ಈ ಪ್ರಕರಣದಲ್ಲಿ 28 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. 2013ರ ಎಪ್ರಿಲ್‌ನಲ್ಲಿ ಮೋದಿ ನೇತೃತ್ವದ ಗುಜರಾತ್ ಸರಕಾರ, ಅವರಿಗೆ ಮರಣ ದಂಡನೆ ವಿಧಿಸುವಂತೆ ಕೋರಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತು. ಆದರೆ ಮೂರು ವಾರ ಬಳಿಕ ಅದನ್ನು ವಾಪಸ್ ಪಡೆಯಿತು.
ಸುಪ್ರೀಂಕೋರ್ಟ್ ನೇಮಕ ಮಾಡಿದ್ದ ವಿಶೇಷ ತನಿಖಾ ತಂಡ, ಕೊಡ್ನಾನಿ ಹಾಗೂ ಬಾಬು ಬಜರಂಗಿ ಸೇರಿದಂತೆ ಎಂಟು ಮಂದಿಗೆ ಮರಣದಂಡನೆ ವಿಧಿಸುವಂತೆ ಶಿಫಾರಸು ಮಾಡಿದ್ದನ್ನು ದೃಢೀಕರಿಸಿದ ಮೋದಿ ಸರಕಾರದ ಕ್ರಮಕ್ಕೆ ಸಂಘಪರಿವಾರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮೋದಿ ಸರಕಾರ ರಾಜ್ಯದ ಅಡ್ವೊಕೇಟ್ ಜನರಲ್ ಅವರ ಸಲಹೆ ಪಡೆದಿತ್ತು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಆ ವೇಳೆಗಾಗಲೇ ಕೊಡ್ನಾನಿಗೆ ಅದೃಷ್ಟ ಖುಲಾಯಿಸಿತ್ತು. 2014ರ ಜುಲೈನಲ್ಲಿ ಅವರಿಗೆ ಅನಾರೋಗ್ಯ ಸ್ಥಿತಿ ಹಿನ್ನೆಲೆಯಲ್ಲಿ ಹೈಕೋರ್ಟ್, ಜಾಮೀನು ಮಂಜೂರು ಮಾಡಿತು. 2018ರ ಎಪ್ರಿಲ್‌ನಲ್ಲಿ ರಾಜ್ಯ ಹೈಕೋರ್ಟ್ ವಿಚಾರಣಾ ನ್ಯಾಯಾಲಯದ ತೀರ್ಪನ್ನು ತಳ್ಳಿಹಾಕಿ, ಪ್ರಕರಣದಲ್ಲಿ ಅವರನ್ನು ಆರೋಪಮುಕ್ತಗೊಳಿಸಿತು. ನರೋಡಾಪಾಟಿಯಾ ಹತ್ಯಾಕಾಂಡದಲ್ಲಿ 36 ಮಕ್ಕಳು ಸೇರಿದಂತೆ 97 ಮಂದಿಯನ್ನು ಅಮಾನುಷವಾಗಿ ಹತ್ಯೆ ಮಾಡಲಾಗಿತ್ತು.

8.ಡಿ.ಜಿ.ವಂಝಾರಾ
ಗುಜರಾತ್ ಪೊಲೀಸ್ ಇಲಾಖೆಯ ಮಾಜಿ ಡಿಐಜಿ ಡಿ.ಜಿ.ವಂಝಾರಾ ವಿರುದ್ಧ ಇಶ್ರತ್ ಜಹಾನ್ ಹಾಗೂ ಸೊಹ್ರಾಬುದ್ದೀನ್ ಶೇಖ್ ಅವರನ್ನು ಕಾನೂನುಬಾಹಿರವಾಗಿ ಹತ್ಯೆ ಮಾಡಿದ ಆರೋಪವಿತ್ತು. ಎಂಟು ವರ್ಷಗಳ ಸೆರೆಮನೆ ವಾಸದ ಬಳಿಕ 2015ರ ಫೆಬ್ರವರಿಯಲ್ಲಿ ವಂಝಾರಾ ಸಾಬರಮತಿ ಜೈಲಿನಿಂದ ಹೊರಬಂದರು.
2018ರಲ್ಲಿ ವಂಝಾರಾ ಮತ್ತು ಇತರ ಆರೋಪಿಗಳನ್ನು ಸೊಹ್ರಾಬುದ್ದೀನ್ ಮತ್ತು ಕೌಸರ್ ಬಿ ಹತ್ಯೆ ಪ್ರಕರಣದಿಂದ ಆರೋಪಮುಕ್ತಗೊಳಿಸಲಾಯಿತು. 2019ರ ಮೇ ತಿಂಗಳಲ್ಲಿ ಈ ವಿವಾದಾತ್ಮಕ ಪೊಲೀಸ್ ಅಧಿಕಾರಿಯನ್ನು ಇಶ್ರತ್ ಜಹಾನ್ ಹತ್ಯೆ ಪ್ರಕರಣದಿಂದಲೂ ಕೈಬಿಡಲಾಯಿತು. ಇದು ನ್ಯಾಯಾಲಯದ ನಿರ್ಧಾರವಾದರೂ, ಅಧಿಕಾರಸ್ಥ ರಾಜಕಾರಣಿಗಳು ಇದಕ್ಕೆ ಪೂರಕ ವೇದಿಕೆಯನ್ನು ನಿರ್ಮಿಸಿಕೊಟ್ಟಿರುವುದು ನಿಸ್ಸಂದೇಹ.
ಈ ಎನ್‌ಕೌಂಟರ್‌ಗಳು ನಕಲಿ ಎಂದು ವಂಝಾರಾ ಹೇಳಿದ್ದರೂ, 2013ರಲ್ಲಿ ರಾಜ್ಯದ ಗೃಹ ಸಚಿವ ‘ಅಮಿತ್ ಶಾ ಅವರು ತನ್ನ ದಾರಿ ತಪ್ಪಿಸಿದರು’ ಎಂದು ಬರೆದ ಪತ್ರದ ವಿಚಾರದಲ್ಲಿ ಮಾಧ್ಯಮದಿಂದ ಪ್ರಶ್ನೆಗಳ ಸುರಿಮಳೆ ಎದುರಿಸಬೇಕಾಯಿತು.
ರಾಜ್ಯ ಸರಕಾರ ಅವರನ್ನು ಬಂಧಿಸಿದ ಹಿನ್ನೆಲೆಯಲ್ಲಿ ನಿಯಮಾವಳಿಯಂತೆ ಅವರನ್ನು ಕೆಲಸದಿಂದ ಅಮಾನತು ಮಾಡಲಾಯಿತು. ವಂಝಾರಾ ಜೈಲಿನಿಂದ ಹೊರಬರುವ ವೇಳೆಗೆ ಅವರ ಸೇವಾವಧಿ ಮುಗಿದಿತ್ತು. 2014ರ ಮೇ 31ರಂದು ಅವರು ನಿವೃತ್ತರಾಗಿದ್ದರು. ಆದಾಗ್ಯೂ ಜೈಲಿನಿಂದ ಬಿಡುಗಡೆಯಾದ ಬಳಿಕ ಗುಜರಾತ್ ಬಿಜೆಪಿ ಸರಕಾರ ಅವರಿಗೆ ಭಡ್ತಿ ನೀಡಿತು.
ಏತನ್ಮಧ್ಯೆ, ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ಅಫಿಡಾವಿತ್ ಸಲ್ಲಿಸಿದ ಮತ್ತೊಬ್ಬ ರಾಜ್ಯ ಪೊಲೀಸ್ ಅಧಿಕಾರಿ ಸಂಜೀವ್ ಭಟ್ ಮತ್ತು ಇತರ 6 ಮಂದಿ ಪೊಲೀಸರು 1990ರ ಲಾಕಪ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿದ್ದಾರೆ. ಹಿಂದೂಗಳು ಮುಸ್ಲಿಮರ ವಿರುದ್ಧದ ತಮ್ಮ ಆಕ್ರೋಶ ವ್ಯಕ್ತಪಡಿಸಲು ಅವಕಾಶ ಮಾಡಿಕೊಡಿ ಎಂದು ಅಂದು ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿಯವರು ಉನ್ನತ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೆನ್ನಲಾದ ಸಭೆಯಲ್ಲಿ ತಾವು ಭಾಗವಹಿಸಿದ್ದಾಗಿ ಸಂಜೀವ್ ಭಟ್ ಹೇಳಿದ್ದರು. (ಆದರೆ ಸುಪ್ರೀಂಕೋರ್ಟ್ ನೇಮಕ ಮಾಡಿದ ವಿಶೇಷ ತನಿಖಾ ತಂಡ, ಸಂಜೀವ್ ಭಟ್ ಸಭೆಯಲ್ಲಿ ಭಾಗವಹಿಸಿರಲಿಲ್ಲ ಎಂದು ಹೇಳಿದೆ). 2019ರ ಜೂನ್‌ನಲ್ಲಿ ಸಂಜೀವ್ ಭಟ್‌ಗೆ ಜಾಮ್‌ನಗರ ಸೆಷನ್ಸ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.

ಸಂಭಾವ್ಯ ಪ್ರಕರಣಗಳು
1.ಸುರೇಶ್ ತಿವಾರಿ ಮತ್ತು ಬ್ರಿಜ್‌ಭೂಷಣ್ ರಜಪೂತ್
ದೇಶ ಕೋವಿಡ್-19 ಸೋಂಕಿನ ವಿರುದ್ಧ ಲಾಕ್‌ಡೌನ್ ಆಚರಿಸುತ್ತಿರುವ ನಡುವೆಯೇ ಮುಸ್ಲಿಮರ ವಿರುದ್ಧ ಕೋಮುಪ್ರಚೋದಕ ಹೇಳಿಕೆ ನೀಡುವ ಮೂಲಕ ಉತ್ತರ ಪ್ರದೇಶದ ಈ ಇಬ್ಬರು ಶಾಸಕರು ಸುದ್ದಿಯಾಗಿದ್ದರು.
ಬರ್ಹಾಜ್ ಕ್ಷೇತ್ರದ ಶಾಸಕರಾಗಿರುವ ತಿವಾರಿ, ಮುಸ್ಲಿಮ್ ವ್ಯಾಪಾರಿಗಳು ವೈರಸ್‌ನ ಮೂಲವಾಗಿದ್ದು, ಅವರಿಂದ ತರಕಾರಿ ಖರೀದಿಸಬೇಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡುವ ವೀಡಿಯೊ ತುಣುಕು ಪ್ರಸಾರ ಮಾಡಿದ ಆರೋಪ ಎದುರಿಸುತ್ತಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಈ ಸಂಬಂಧ ಶೋಕಾಸ್ ನೋಟಿಸ್ ನೀಡಿದ್ದು, ಶಾಸಕನ ನಡತೆ ಪಕ್ಷದ ನೀತಿಗೆ ವಿರುದ್ಧವಾದದ್ದು ಎಂದು ಹೇಳಿದ್ದಾರೆ. ಆದರೂ ರಾಜ್ಯ ಪೊಲೀಸರು ಈ ಪ್ರಚೋದನಕಾರಿ ಹೇಳಿಕೆಯನ್ನು ಪರಿಗಣಿಸಿಲ್ಲ.
ಇದರ ಬದಲಾಗಿ, ರಾಜ್ಯದಲ್ಲಿ ವಲಸೆ ಕಾರ್ಮಿಕರ ಸಂಚಾರಕ್ಕಾಗಿ ತಮ್ಮ ಪಕ್ಷ ಬಸ್‌ಗಳನ್ನು ವ್ಯವಸ್ಥೆ ಮಾಡಲು ಅವಕಾಶ ನೀಡದ್ದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಅಜಯ್ ಕುಮಾರ್ ಲಾಲೂ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕಾನೂನು ಬಾಹಿರವಾಗಿ ಗುಂಪು ಸೇರಿದ ಕಾರಣಕ್ಕೆ ಮತ್ತು ಕೆಲವರು ಮಾಸ್ಕ್ ಧರಿಸಿಲ್ಲ ಅಥವಾ ಸೂಕ್ತ ಅಂತರ ಕಾಯ್ದುಕೊಂಡಿಲ್ಲ ಎಂಬ ಕಾರಣಕ್ಕೆ ಬಂಧಿಸಲಾಗಿದೆ. ಲಾಲೂ ಜಾಮೀನು ಪಡೆದರೂ, ತಕ್ಷಣ ಮತ್ತೊಂದು ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿದೆ.
ಸರಕಾರಿ ಆಸ್ಪತ್ರೆಯಿಂದ ಅಮಾನತುಗೊಂಡ ವೈದ್ಯ ಕಫೀಲ್ ಖಾನ್ ಅವರನ್ನು ಕಳೆದ ಡಿಸೆಂಬರ್‌ನಲ್ಲಿ ಅಲೀಗಢ ಮುಸ್ಲಿಂ ವಿವಿಯಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಮಾಡಿದ ಭಾಷಣದ ಹಿನ್ನೆಲೆಯಲ್ಲಿ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ವಿಚಾರಣೆಗೆ ಒಳಪಡಿಸಿ ಜೈಲಿಗೆ ತಳ್ಳಲಾಗಿದೆ. ‘‘ನೀವು ನಮ್ಮನ್ನು ಹೊರಗಟ್ಟಲು ಸಾಧ್ಯವಿಲ್ಲ; ನಾವು ಮುಸ್ಲಿಮರು 25 ಕೋಟಿ ಇದ್ದೇವೆ’’ ಎಂದು ಖಾನ್ ಹೇಳಿದ್ದರು ಎಂದು ಆಪಾದಿಸಲಾಗಿದೆ.

2.ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರ
ಕಲ್ಲಡ್ಕದಲ್ಲಿ ಆರೆಸ್ಸೆಸ್ ನಡೆಸುವ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಕಳೆದ ಡಿಸೆಂಬರ್‌ನಲ್ಲಿ ನಡೆದ ಕ್ರೀಡಾ ದಿನಾಚರಣೆ ಸಂದರ್ಭದಲ್ಲಿ ಎಲ್.ಕೆ.ಅಡ್ವಾಣಿಯವರ ರಥಯಾತ್ರೆ, 1992ರ ಬಾಬರಿ ಮಸೀದಿ ಧ್ವಂಸ ಹಾಗೂ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮಮಂದಿರ ಬಗ್ಗೆ ಪ್ರಹಸನವನ್ನು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಹಾಗೂ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಸಮ್ಮುಖದಲ್ಲಿ ಪ್ರದರ್ಶಿಸಲಾಗಿತ್ತು. ಬೇಡಿ ಇದರ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು.

ಈ ಕೋಮು ವಿಚಾರಗಳುಳ್ಳ ಪ್ರಹಸನಕ್ಕೆ ಟೀಕೆಗಳು ವ್ಯಕ್ತವಾದರೂ, ಶಾಲೆಯ ಮಾಲಕ ಮತ್ತು ಆರೆಸ್ಸೆಸ್‌ನ ದಕ್ಷಿಣ-ಕೇಂದ್ರ ಪ್ರದೇಶದ ಆಡಳಿತ ಮಂಡಳಿ ಸದಸ್ಯ ಕಲ್ಲಡ್ಕ ಪ್ರಭಾಕರ ಭಟ್ ‘ನ್ಯೂಸ್ ಮಿನಿಟ್’ ಜತೆ ಮಾತನಾಡಿ, ‘‘ಬಾಬರಿಯಲ್ಲಿ ನಡೆದದ್ದು ತಪ್ಪು ಎಂದು ಸುಪ್ರೀಂಕೋರ್ಟ್ ಹೇಳಿದ್ದರೂ, ತೀರ್ಪಿನ ಆ ಭಾಗವನ್ನು ನಾವು ಪ್ರಶ್ನಿಸಿದ್ದೇವೆ. ತೀರ್ಪಿನಲ್ಲಿ ಹೇಳಿರುವ ಎಲ್ಲವನ್ನೂ ನಾವು ಒಪ್ಪಿಕೊಳ್ಳುವುದಿಲ್ಲ. ಅದನ್ನು ನಾನು ಒಪ್ಪುವುದಿಲ್ಲ’’ ಎಂದು ಸ್ಪಷ್ಟಪಡಿಸಿದ್ದರು.

ಒಂದು ತಿಂಗಳ ಬಳಿಕ ಕರ್ನಾಟಕದ ಬೀದರ್‌ನ ಒಂದು ಶಾಲೆ, ಸಿಎಎ ಪ್ರತಿಭಟನೆಯ ಅಂಶವಿರುವಒಂದು ಪ್ರಹಸನವನ್ನು ಪ್ರದರ್ಶಿಸಿತು. ಸುದ್ದಿ ಹರಡುತ್ತಿದ್ದಂತೆಯೇ, ಬೀದರ್ ಪೊಲೀಸರು ಅದನ್ನು ಗಮನಿಸಿ, ಶಾಲೆ, ಮುಖ್ಯ ಶಿಕ್ಷಕರು, ಶಿಕ್ಷಕಿ ಮತ್ತು ವಿದ್ಯಾರ್ಥಿಯೊಬ್ಬನ ತಾಯಿಯ ವಿರುದ್ಧ ದೇಶದ್ರೋಹ ಮತ್ತು ದ್ವೇಷ ಹರಡುವ ಆರೋಪದಲ್ಲಿ ಪ್ರಕರಣ ದಾಖಲಿಸಿದರು. ಜನವರಿ 21ರಂದು ಪ್ರದರ್ಶನಗೊಂಡ ಪ್ರಹಸನದಲ್ಲಿ ಬಾಲಕಿ, ಮೋದಿ ವಿರೋಧಿ ಘೋಷಣೆ ಕೂಗಿದ್ದಾಳೆ ಎಂಬ ಆರೋಪದಲ್ಲಿ ಆಕೆಯ ತಾಯಿಯನ್ನು ಬಂಧಿಸಲಾಗಿತ್ತು. ಶಾಹೀನ್ ಸಮೂಹ ಈ ಶಾಲೆಯನ್ನು ನಡೆಸುತ್ತಿದೆ. ಪೊಲೀಸರು ಫೆಬ್ರವರಿ ಮೊದಲ ವಾರ ಹಲವು ಮಕ್ಕಳನ್ನು ವಿಚಾರಣೆಗೆ ಗುರಿಪಡಿಸಿದರು. ಬಂಧನದ 15 ದಿನಗಳ ಬಳಿಕ ಶಾಲೆಯ ಶಿಕ್ಷಕರು ಮತ್ತು ಬಾಲಕಿಯ ತಾಯಿಗೆ ಜಾಮೀನು ಮಂಜೂರಾಯಿತು.

3.ಅನುರಾಗ್ ಠಾಕೂರ್, ಪರ್ವೇಶ್ ವರ್ಮಾ ಮತ್ತು ಕಪಿಲ್ ಮಿಶ್ರಾ
ದಿಲ್ಲಿ ಹಿಂಸಾಚಾರಕ್ಕೆ ಮುನ್ನ ಕೇಂದ್ರ ಸಚಿವ ಅನುರಾಗ್ ಠಾಕೂರ್ ಮತ್ತು ದಿಲ್ಲಿ ಬಿಜೆಪಿ ಮುಖಂಡರಾದ ಪರ್ವೇಶ್ ವರ್ಮಾ ಹಾಗೂ ಕಪಿಲ್ ಮಿಶ್ರಾ ಅವರು, ಕೋಮುಪ್ರಚೋದಕ ಭಾಷಣ ಮಾಡಿದ್ದಾರೆ ಎನ್ನುವುದು ಮಾಧ್ಯಮ ವರದಿಗಳಿಂದ ತಿಳಿದುಬರುತ್ತದೆ. ಇವರ ವಿರುದ್ಧ ಎಫ್‌ಐಆರ್ ದಾಖಲಿಸುವ ಸಂಬಂಧ ತಕ್ಷಣ ನಿರ್ಧಾರ ಕೈಗೊಳ್ಳುವಂತೆ ದಿಲ್ಲಿ ಪೊಲೀಸರಿಗೆ ದಿಲ್ಲಿ ಹೈಕೋರ್ಟ್ ಸೂಚಿಸಿದ್ದರೂ, ನ್ಯಾಯಮೂರ್ತಿ ಎಸ್.ಮುರಳೀಧರ್ ಅವರು ಅಸಹಜ ಎಂಬ ರೀತಿಯಲ್ಲಿ ತಕ್ಷಣವೇ ರಾಜ್ಯದಿಂದ ವರ್ಗಾವಣೆಯಾಗಿ, ಪ್ರಕರಣ ಮುಖ್ಯ ನ್ಯಾಯಮೂರ್ತಿ ಡಿ.ಎನ್.ಪಾಟೀಲ್ ಅವರಿಗೆ ವರ್ಗಾವಣೆಯಾಗಿದೆ.

ಈ ವೀಡಿಯೊ ತುಣುಕುಗಳ ಬಗ್ಗೆ ಕೇಳಿದಾಗ ದಿಲ್ಲಿ ಅಪರಾಧ ವಿಭಾಗದ ಡಿಸಿಪಿ ರಾಜೇಶ್ ದೇವ್, ಇವನ್ನು ತಾವು ನೋಡಿಲ್ಲ ಎಂದು ನ್ಯಾಯಮೂರ್ತಿ ಮುರಳೀಧರ್ ಬಳಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳು, ದಿಲ್ಲಿ ಪೊಲೀಸ್ ಇಲಾಖೆಯ ಸ್ಥಿತಿಗತಿ ಅಚ್ಚರಿ ತರುತ್ತದೆ ಎಂದು ಪ್ರತಿಕ್ರಿಯಿಸಿ, ಆಯುಕ್ತರ ಕಚೇರಿಯಲ್ಲಿ ಹಲವು ಟಿವಿಗಳಿರಬೇಕು ಎಂದು ಭಾವಿಸುತ್ತೇನೆ ಎಂದಿದ್ದರು. ಮಿಶ್ರಾ ಭಾಷಣ ಮಾಡಿದಾಗ ಪೊಲೀಸರೂ ಅಲ್ಲಿ ಹಾಜರಿದ್ದರು.
ದಿಲ್ಲಿ ಪೊಲೀಸರು ಸಲ್ಲಿಸಿದ ಆರೋಪಪಟ್ಟಿಯಲ್ಲಿ ದಿಲ್ಲಿ ಗಲಭೆಯ ಘಟನಾವಳಿಗಳ ಅನುಕ್ರಮಣಿಕೆಯಿಂದ ಮಿಶ್ರಾ ಭಾಷಣದ ಅಂಶವನ್ನು ಕೈಬಿಡಲಾಗಿದೆ. ಫೇಸ್‌ಬುಕ್ ಸಿಇಒ ಮಾರ್ಕ್ ಝುಕರ್ ಬರ್ಗ್ ಈ ಭಾಷಣವನ್ನು ದ್ವೇಷಭಾಷಣದ ಮಾನದಂಡ ಎಂದು ಪರಿಗಣಿಸಿ, ಸಾಮಾಜಿಕ ಜಾಲತಾಣ ವೆಬ್‌ಸೈಟ್‌ನಲ್ಲಿ ಇಂತಹ ದ್ವೇಷಭಾಷಣಕ್ಕೆ ಅವಕಾಶ ಇಲ್ಲ ಎಂದು ಹೇಳಿದ್ದು ಸುದ್ದಿಯಾಗಿತ್ತು.

(ಮುಗಿಯಿತು)

ಕೃಪೆ: thewire.in

Writer - ಸಂಗೀತಾ ಬರೂಹ್

contributor

Editor - ಸಂಗೀತಾ ಬರೂಹ್

contributor

Similar News