ವಿಪಕ್ಷಗಳನ್ನು ವಿಶ್ವಾಸಕ್ಕೆ ಪಡೆದು ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಜಾರಿ: ಸಿಎಂ ಯಡಿಯೂರಪ್ಪ
ಬೆಂಗಳೂರು, ಜೂ. 13: ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕರ್ನಾಟಕ ರಾಜ್ಯ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಸುಗ್ರೀವಾಜ್ಞೆ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ಪ್ರಕಟಿಸಿದ್ದಾರೆ.
ಶನಿವಾರ ರಾಜ್ಯ ಸರಕಾರ ಹಾಗೂ ಬಿಬಿಎಂಪಿ ಆಶ್ರಯದಲ್ಲಿ ಏರ್ಪಡಿಸಿದ್ದ ಸರ್ದಾರ್ ವಲ್ಲಭ ಭಾಯ್ ಅಕಾಡಮಿ ಹಾಗೂ ಸಾವಯವ ಗೊಬ್ಬರ ಘಟಕ ಉದ್ಘಾಟಿಸಿ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಭೂ ಸುಧಾರಣಾ ಕಾಯ್ದೆಯನ್ನು ಬಹುತೇಕ ರಾಜ್ಯಗಳು ಈಗಾಗಲೇ ಜಾರಿ ಮಾಡಿವೆ ಎಂದು ಹೇಳಿದರು.
ಕಾಯ್ದೆ ತಿದ್ದುಪಡಿಯಿಂದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. ಜತೆಗೆ ಕೈಗಾರಿಕೆಗಳು ಸ್ಥಾಪನೆಯಾಗಲು ಸಹಕಾರಿಯಾಗಲಿದೆ. ಇದನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲಿದ್ದೇವೆ. ಇದಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಸಹಕಾರ ನೀಡಬೇಕು ಎಂದು ಯಡಿಯೂರಪ್ಪ ಇದೇ ವೇಳೆ ಮನವಿ ಮಾಡಿದರು.
ವಿಪಕ್ಷಗಳನ್ನು ವಿಶ್ವಾಸಕ್ಕೆ ಪಡೆದು ಈ ಕಾಯ್ದೆಯನ್ನು ನಾವು ಜಾರಿಗೆ ತರುತ್ತೇವೆ. ಸಿದ್ದರಾಮಯ್ಯನವರೊಂದಿಗೆ ಸಮಾಲೋಚನೆ ನಡೆಸುತ್ತೇನೆ. ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವುದನ್ನು ಹಲವು ಕ್ಷೇತ್ರಗಳ ಜನರು ಸ್ವಾಗತಿಸುತ್ತಿದ್ದಾರೆ. ಈ ತಿದ್ದುಪಡಿಯ ಬಗ್ಗೆ ಸಿದ್ದರಾಮಯ್ಯನವರಿಗೂ ಮನವರಿಕೆ ಮಾಡಿಕೊಡಲಾಗುವುದು ಎಂದು ಯಡಿಯೂರಪ್ಪ ಹೇಳಿದರು.