ಆರ್ಥಿಕ ಪುನಶ್ಚೇತನಕ್ಕೆ ಹೆಚ್ಚು ಆದ್ಯತೆ: ಡಿಸಿಎಂ ಅಶ್ವಥ್ ನಾರಾಯಣ

Update: 2020-06-13 16:35 GMT

ಬೆಂಗಳೂರು, ಜೂ.13: ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಕೊರೋನ ಪರಿಸ್ಥಿತಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಲಾಗುತ್ತಿದೆ. ಇದರೊಂದಿಗೆ ಆರ್ಥಿಕ ಪುನಶ್ಚೇತನಕ್ಕೂ ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್ ಅಶ್ವಥ್ ನಾರಾಯಣ ಹೇಳಿದ್ದಾರೆ.

ಮೆಲ್ಬರ್ನ್ ಕನ್ನಡ ಸಂಘ ಶನಿವಾರ ಆಯೋಜಿಸಿದ್ದ ವೀಡಿಯೋ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೊವಿಡ್ ಪರಿಸ್ಥಿತಿಯನ್ನು ರಾಜ್ಯ ಸರಕಾರ ಸಮಪರ್ಕವಾಗಿ ನಿಭಾಯಿಸಿದೆ. ಈ ಬಗ್ಗೆ ಚಿಂತೆ ಬೇಡ ಎಂದು ತಿಳಿಸಿದರು.

ಲಾಕ್‍ಡೌನ್ ಸಡಿಲಿಕೆ ನಂತರ ಅಂತರ್ ರಾಜ್ಯ, ಅಂತರ್ ಜಿಲ್ಲೆಗಳ ನಡುವೆ ಸಂಚಾರ ಮುಕ್ತವಾಗಿರುವುದರಿಂದ ಸೋಂಕಿತರ ಸಂಖ್ಯೆ ಹೆಚ್ಚಿದೆ. ಪ್ರಧಾನಿ ನೇತೃತ್ವದಲ್ಲಿ ಪರಿಸ್ಥಿತಿಯನ್ನು ಅತ್ಯುತ್ತಮವಾಗಿ ನಿಭಾಯಿಸಿದ್ದೇವೆ. ಇನ್ನು ಮುಂದೆ ಆರ್ಥಿಕ ಪುನಶ್ಚೇತನಕ್ಕೆ ಹೆಚ್ಚು ಆದ್ಯತೆ ನೀಡುತ್ತೇವೆ. ಈ ಹಾದಿಯಲ್ಲಿ ಸಾಕಷ್ಟು ಸವಾಲುಗಳಿದ್ದರೂ, ಅದನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ನಮಗಿದೆ. ಕೊರೋನ ಪರಿಸ್ಥಿತಿ ನಿರ್ವಹಣೆ, ಆರ್ಥಿಕ ಪುನಶ್ಚೇತನ ಸೇರಿದಂತೆ ಎಲ್ಲ ವಿಷಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ವಿವರಿಸಿದರು.

ಇತರ ರಾಷ್ಟ್ರಗಳಿಗೆ ಭಾರತ ಪ್ರೇರಣೆ: ಲಾಕ್‍ಡೌನ್ ಸಂದರ್ಭದಲ್ಲಿ ಆರೋಗ್ಯಕ್ಷೇತ್ರದಲ್ಲಿ ಮೂಲಸೌಕರ್ಯ ಕಲ್ಪಿಸಲಾಗಿದೆ. ವೈರಾಣು ಪತ್ತೆ ಪ್ರಯೋಗಾಲಯದ ಸಂಖ್ಯೆ ಹೆಚ್ಚಿಸಲಾಗಿದೆ. ಪಿಪಿಇ ಕಿಟ್, ಎನ್ 95 ಮಾಸ್ಕ್, ವೆಂಟಿಲೇಟರ್ ಗಳ ತಯಾರಿಕೆಯಲ್ಲಿ ಸ್ವಾಲಂಬನೆ ಸಾಧಿಸಿ, ಬೇರೆ ದೇಶಗಳಿಗೆ ರಫ್ತು ಮಾಡುವ ಮಟ್ಟಕ್ಕೆ ಬೆಳೆದಿದ್ದೇವೆ ಎಂದು ಹೇಳಿದರು.

ತಂತ್ರಜ್ಞಾನ ಬಳಸಿಕೊಂಡು ಆರೋಗ್ಯ ಸಿಬ್ಬಂದಿ ಕೊರತೆ ನೀಗಿಸಲಾಗಿದೆ. ಟೆಲಿ ಮೆಡಿಸಿನ್, ಟೆಲಿಕನ್ಸಲ್ಟೇಷನ್ ಮೂಲಕ ವೈದ್ಯಕೀಯ ಸಲಹೆ ನೀಡಲಾಗುತ್ತಿದೆ. ರಿಮೋಟ್ ಐಸಿಯು ವ್ಯವಸ್ಥೆ ಇದೆ. ಜತೆಗೆ ಹೊಸ ಟೆಸ್ಟಿಂಗ್ ವಿಧಾನ, ಹೊಸ ಉಪಕರಣಗಳ ಸಂಶೋಧನೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಮೂಲಸೌಕರ್ಯದ ಕೊರತೆಯನ್ನು ಹಿಮ್ಮೆಟ್ಟಿ ಇಡೀ ವಿಶ್ವದ ಗಮನ ಸೆಳೆದಿರುವ ಭಾರತ, ಇಂದು ಇತರ ರಾಷ್ಟ್ರಗಳಿಗೆ ಪ್ರೇರಣೆ ನೀಡುವಂತಾಗಿದೆ ಎಂದರು.

ವೈದ್ಯ ನಮಸ್ಕಾರ ಥ್ರೂ ಸೂರ್ಯ ನಮಸ್ಕಾರ: ವೈದ್ಯ ನಮಸ್ಕಾರ ಥ್ರೂ ಸೂರ್ಯ ನಮಸ್ಕಾರ ಪರಿಕಲ್ಪನೆಯಲ್ಲಿ ಜೂ.21ರಂದು ಆಸ್ಟ್ರೇಲಿಯಾದಲ್ಲಿ ಆಯೋಜಿಸಿರುವ ವಿಶ್ವಯೋಗ ದಿನಾಚರಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಡಾ. ಅಶ್ವಥ್ ನಾರಾಯಣ, ದೂರದ ದೇಶದಲ್ಲಿ ಕನ್ನಡದ ಕಂಪು ಪಸರಿಸುವ ಜತೆಗೆ ದೇಶದ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸುತ್ತಿರುವ ಕನ್ನಡ ಬಂಧುಗಳ ಸಾಧನೆ ಶ್ಲಾಘನಾರ್ಹ ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News