ಹೊಟೇಲ್, ಮಾಲ್ ಗಳಿಗೆ ಹೊಸ ಮಾರ್ಗಸೂಚಿ ಹೊರಡಿಸಿದ ಬಿಬಿಎಂಪಿ
ಬೆಂಗಳೂರು, ಜೂ.13: ಲಾಕ್‍ಡೌನ್ ಸಡಿಲವಾದ ಹಿನ್ನೆಲೆಯಲ್ಲಿ ಈಗಾಗಲೇ ಆರಂಭವಾಗಿರುವ ಹೊಟೇಲ್ ಹಾಗೂ ಮಾಲ್‍ಗಳಿಗೆ ಬಿಬಿಎಂಪಿ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ.
ಬೆಂಗಳೂರಿನಲ್ಲಿ ಮಾಲ್‍ಗಳು, ಹೊಟೇಲ್ ಹಾಗೂ ರೆಸ್ಟೋರೆಂಟ್‍ಗಳು ಪ್ರಾರಂಭವಾಗಿರುವುದರಿಂದ ಬಿಬಿಎಂಪಿ ಇವುಗಳಿಗೆ ಹೊಸ ಮಾರ್ಗಸೂಚಿಯನ್ನು ಹೊರಡಿಸಿದ್ದು, ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ವ್ಯವಸ್ಥೆ, ಪಾಕಿರ್ಂಗ್ ವ್ಯವಸ್ಥೆ ತಾತ್ಕಾಲಿಕ ನಿಬರ್ಂಧ, ಒಟ್ಟು ವಿಸ್ತೀರ್ಣದಲ್ಲಿ ಅರ್ಧದಷ್ಟು ಜನರಿಗೆ ಮಾತ್ರ ಅವಕಾಶ ನೀಡಬೇಕು ಎಂದು ತಿಳಿಸಲಾಗಿದೆ.
ನಗರದ ಎಲ್ಲ ಭಾಗದಲ್ಲೂ ಕೆಲವು ನಿರ್ಬಂಧ ಹೇರುವ ಮೂಲಕ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗಿದೆಯಾರೂ, ಕಂಟೈನ್ಮೆಂಟ್ ವ್ಯಾಪ್ತಿಯಲ್ಲಿರುವ ಯಾವುದೇ ಹೊಟೇಲ್‍ಗಳು ತೆರೆಯುವುದಕ್ಕೆ ಅವಕಾಶ ನೀಡಿಲ್ಲ. ಅದೇ ರೀತಿ 65 ವರ್ಷಕ್ಕಿಂತ ಮೇಲ್ಪಟ್ಟವರು, ಗರ್ಭಿಣಿಯರು ಹಾಗೂ 10 ವರ್ಷದ ಒಳಗಿನ ಮಕ್ಕಳು ಆರೋಗ್ಯ ಚಿಕಿತ್ಸೆ ಹೊರತುಪಡಿಸಿ ಉಳಿದಂತೆ ಅನವಶ್ಯಕವಾಗಿ ಹೊರಗೆ ಓಡಾಡದಂತೆ ಸರಕಾರ ನಿರ್ದೇಶನ ನೀಡಿದೆ. ಇದನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ನಿರ್ದೇಶನ ನೀಡಲಾಗಿದೆ.
ಹೊಟೇಲ್ ಹಾಗೂ ರೆಸ್ಟೋರೆಂಟ್‍ಗಳಲ್ಲಿ ಹೆಚ್ಚು ಜನ ಸೇರುವುದು, ಸಭೆ ನಡೆಸುವುದನ್ನು ನಿಷೇಧಿಸಲಾಗಿದೆ. ಮಕ್ಕಳು ಆಟವಾಡುವ ಪ್ರದೇಶ ಹಾಗೂ ಮಾಲ್‍ಗಳಲ್ಲಿನ ಸಿನಿಮಾ ಮಂದಿರಗಳನ್ನು ಯಾವುದೇ ಕಾರಣಕ್ಕೂ ಪ್ರಾರಂಭಿಸುವಂತಿಲ್ಲ. ಕನಿಷ್ಠ ಆರು ಅಡಿ ಅಂತರ ಕಾಯ್ದುಕೊಳ್ಳುವುದು ಹಾಗೂ ಎಲ್ಲರೂ ಕಡ್ಡಾಯ ಮಾಸ್ಕ್ ಧರಿಸಬೇಕು. ಮಾಲ್‍ಗಳಲ್ಲಿ ಪಾರ್ಕಿಂಗ್ ಪ್ರದೇಶ, ಶಾಪಿಂಗ್ ಪ್ರದೇಶ ಹಾಗೂ ಪ್ರವೇಶದ್ವಾರ ಸೇರಿದಂತೆ ಎಲ್ಲ ಕಡೆಗಳಲ್ಲೂ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಅಗತ್ಯ ಮುಂಜಾಗ್ರತೆ ವಹಿಸುವಂತೆ ಎಚ್ಚರಿಕೆ ವಹಿಸಬೇಕು. ಹೊಟೇಲ್‍ಗಳಿಗೆ ಬರುವವರು ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಲು ಕಡ್ಡಾಯವಾಗಿ ಸ್ಯಾನಿಟೈಸರ್, ಸಾಬೂನು ವ್ಯವಸ್ಥೆ ಮಾಡಬೇಕು.
ಫುಡ್ ಕೋರ್ಟ್ ಸಿಬ್ಬಂದಿಯೂ ಮೇಲೆ ಹೇಳಿದಂತೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಎಲ್ಲರೂ ಊಟ ಮಾಡುವ ಪ್ರದೇಶದಲ್ಲಿ ಪ್ರದೇಶದಲ್ಲಿ ಒಟ್ಟು ಸಾಮರ್ಥ್ಯದ ಶೇ.50ರಷ್ಟು ಜನರಿಗೆ ಮಾತ್ರ ಅವಕಾಶ ಕೊಡಬೇಕು. ಇಲ್ಲಿ ಈ ಪ್ರಮಾಣಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ ಎಂದು ನಿರ್ಬಂಧ ಹೇರಲಾಗಿದೆ. ನೇರ ನಗದು ಬದಲು ಆನ್‍ಲೈನ್ ಹಣ ಪಾವತಿ ಮಾಡುವುದು ಹಾಗೂ ಊಟವನ್ನು ಆರ್ಡರ್ ಮಾಡಲು ಇ-ತಂತ್ರಾಂಶವನ್ನು ಬಳಸಿಕೊಳ್ಳಲು ಉತ್ತೇಜನ ನೀಡುವುದು. ಗ್ರಾಹಕರು ಟೇಬಲ್ ಖಾಲಿ ಮಾಡಿದ ಮೇಲೆ ಪ್ರತಿ ಬಾರಿಯೂ ಟೇಬಲ್ ಹಾಗೂ ಕುರ್ಚಿಗಳನ್ನು ಸ್ಯಾನಿಟೈಸ್ ಮಾಡುವಂತೆ ಹೇಳಲಾಗಿದೆ.
ಅನುಮಾನ ಬಂದರೆ ಕ್ವಾರಂಟೈನ್
ಹೊಟೇಲ್‍ಗಳಲ್ಲಿ ಯಾರಿಗಾದರೂ ಸೋಂಕು ಇರುವ ಬಗ್ಗೆ ಅನುಮಾನ ವ್ಯಕ್ತವಾದರೆ ಕೂಡಲೇ ಅವರನ್ನು ಕ್ವಾರಂಟೈನ್ ಮಾಡುವುದು. ಹತ್ತಿರದ ಆಸ್ಪತ್ರೆಗೆ ದಾಖಲು ಮಾಡುವುದು. ಯಾರಿಗಾದರೂ ಕೊರೋನ ಸೋಂಕು ದೃಢಪಟ್ಟರೆ ಸೋಂಕು ದೃಢಪಟ್ಟಾಗ ಅನುಸರಿಸುವ ಮಾರ್ಗಸೂಚಿಯನ್ನು ಅನುಸರಿಸುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ನಿರ್ದೇಶನ ನೀಡಿದ್ದಾರೆ.