ಯಡಿಯೂರು ಸಾವಯವ ಗೊಬ್ಬರ ಘಟಕಕ್ಕೆ ಚಾಲನೆ ನೀಡಿದ ಬಿ.ಎಸ್ ಯಡಿಯೂರಪ್ಪ
ಬೆಂಗಳೂರು, ಜೂ.13: ಯಡಿಯೂರು ವಾರ್ಡ್‍ನಲ್ಲಿ ಸಾವಯವ ಗೊಬ್ಬರ ಘಟಕಕ್ಕೆ ಚಾಲನೆ ನೀಡಲಾಗಿದ್ದು, ವಾರ್ಡ್ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಸಾವಯವ ಗೊಬ್ಬರ, ಜೀವಸಾರವನ್ನು ಪಾಲಿಕೆಯ 774 ಉದ್ಯಾನಗಳಿಗೆ ಪೂರೈಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆ ಹಾಗೂ ಬಿಬಿಎಂಪಿ ಅನುದಾನದಡಿ ಯಡಿಯೂರು ಕೆರೆ ಮುಂಭಾಗ ನಿರ್ಮಿಸಲಾಗಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅಕಾಡೆಮಿ ಕಟ್ಟಡ ಹಾಗೂ ಸಾವಯವ ರಸಗೊಬ್ಬರ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
30 ಲಕ್ಷ ರೂಪಾಯಿಗಳಷ್ಟು ಪಾಲಿಕೆಯ ಅನುದಾನದಲ್ಲಿ ಯಡಿಯೂರು ಸಾವಯವ ಗೊಬ್ಬರ ಘಟಕವನ್ನು ನಿರ್ಮಿಸಲಾಗಿದೆ. ಪಾಲಿಕೆಗೆ ಪ್ರತಿ ವರ್ಷ 8 ಕೋಟಿ ರೂ. ಉಳಿತಾಯ ಮಾಡಬಹುದು. ವರ್ಷಕ್ಕೆ 50 ಲಕ್ಷ ರೂ. ವೆಚ್ಚದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲ ಉದ್ಯಾನಗಳಿಗೆ ಈ ಸಾವಯವ ಗೊಬ್ಬರ, ಜೀವಸಾರ ಸರಬರಾಜು ಮಾಡಲಾಗುತ್ತದೆ ಎಂದು ಹೇಳಿದರು.
ಜೈವಿಕ ಅನಿಲ ಘಟಕವನ್ನು ಕಳೆದ 4 ವರ್ಷಗಳಿಂದ ನಿರ್ವಹಣೆ ಮಾಡಲಾಗುತ್ತಿದ್ದು, ಪ್ರತಿನಿತ್ಯ 250 ಕೆವಿ ವಿದ್ಯುತ್ ವಿದ್ಯುಚ್ಛಕ್ತಿ ಉತ್ಪಾದಿಸಲಾಗುತ್ತಿದೆ. ವಾರ್ಡ್ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಸಂಗ್ರಹವಾಗುವ 5 ಟನ್‍ಗಿಂತಲೂ ಹೆಚ್ಚು ಹಸಿ ತ್ಯಾಜ್ಯದಿಂದ 250 ಕೆವಿ ವಿದ್ಯುತ್‍ಚ್ಛಕ್ತಿ ಉತ್ಪಾದಿಸುವುದರ ಜೊತೆಗೆ ಸಾವಯವ ಗೊಬ್ಬರ, ಜೀವಸಾರ ಉತ್ಪಾದಿಸಲಾಗುತ್ತಿದೆ ಎಂದರು.
ಹಸಿ ತ್ಯಾಜ್ಯದಿಂದ ಉತ್ಪತ್ತಿಯಾಗುವ ತ್ಯಾಜ್ಯ ದ್ರಾವಣದಿಂದ ತಿಂಗಳೊಂದಕ್ಕೆ ಸರಾಸರಿ 12 ಲಕ್ಷ ಲೀಟರ್‍ಗಳಷ್ಟು ಬೃಹತ್ ಪ್ರಮಾಣದ ಸಾವಯವ ಗೊಬ್ಬರ, ಜೀವಸಾರ ಉತ್ಪಾದಿಸಲಾಗುತ್ತದೆ. ಈ ತ್ಯಾಜ್ಯ ದ್ರಾವಣವನ್ನು ಐತಿಹಾಸಿಕ ಯಡಿಯೂರು ಕೆರೆಯಲ್ಲಿ ಪಾಲಿಕೆಯ ವತಿಯಿಂದ ನಿರ್ಮಿಸಲಾಗಿರುವ ಸಾವಯವ ಗೊಬ್ಬರ ಘಟಕದಲ್ಲಿ 1 ಲೀಟರ್ ತ್ಯಾಜ್ಯ ದ್ರಾವಣದೊಂದಿಗೆ 10 ಲೀಟರ್ ನೀರನ್ನು ಮಿಶ್ರಣ ಮಾಡಿ ಪಾಲಿಕೆಯು ನಿರ್ವಹಣೆ ಮಾಡುತ್ತಿರುವ ಪಾಲಿಕೆ ವ್ಯಾಪ್ತಿಯ 774 ಉದ್ಯಾನವನಗಳಲ್ಲಿರುವ ಸಸಿಗಳಿಗೆ ರಾಸಾಯನಿಕ ರಸಗೊಬ್ಬರ ಬಳಸಲಾಗುತ್ತಿದ್ದು, ಅದಕ್ಕಾಗಿ ಪ್ರತಿ ತಿಂಗಳು ಸರಾಸರಿ 71 ಲಕ್ಷ ರೂ. ವರ್ಷವಿಡಿ 8.50 ಕೋಟಿ ರೂಪಾಯಿಗಳಷ್ಟು ಬೃಹತ್ ಮೊತ್ತದ ಹಣ ವೆಚ್ಚ ಮಾಡಲಾಗುತ್ತಿದೆ. ಅದೆಲ್ಲವೂ ಉಳಿತಾಯವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್.ಅಶೋಕ, ಸಂಸದ ತೇಜಸ್ವಿ ಸೂರ್ಯ, ಮೇಯರ್ ಗೌತಮ್ ಕುಮಾರ್, ಪಾಲಿಕೆ ಸದಸ್ಯೆ ಪೂರ್ಣಿಮಾ ರಮೇಶ್, ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿ ಘಟಕಾಧ್ಯಕ್ಷ ಎನ್.ಆರ್.ರಮೇಶ್ ಉಪಸ್ಥಿತರಿದ್ದರು.
ಸರ್ದಾರ್ ವಲ್ಲಭಭಾಯಿ ಪಟೇಲ್ ಅಕಾಡೆಮಿ ಉದ್ಘಾಟನೆ
ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲರ ಸ್ಮರಣಾರ್ಥವಾಗಿ ನಿರ್ಮಿಸಿರುವ ಈ ಕಟ್ಟಡದಲ್ಲಿ ಬಡ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಯುಪಿಎಸ್‍ಸಿ ಹಾಗೂ ಕೆಪಿಎಸ್‍ಸಿ ಉಚಿತ ತರಬೇತಿ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಅಭಿವೃದ್ಧಿಗೆ ಮಾದರಿಯಾಗಿರುವ ಯಡಿಯೂರು ವಾರ್ಡ್‍ನಲ್ಲಿ ಮತ್ತೊಂದು ಉಪಯುಕ್ತ ಯೋಜನೆ ಸಾಕಾರಗೊಂಡಿರುವುದು ಸಂತಸದ ವಿಷಯ. ಐಎಎಸ್, ಐಪಿಎಸ್, ಐಎಎಸ್, ಐಆರ್‍ಎಸ್ ಮತ್ತು ಕೆಎಎಸ್ ಆಗಲು ಬಯಸಿರುವ ವಿದ್ಯಾರ್ಥಿಗಳಿಗೆ ಇದೊಂದು ಸದಾವಕಾಶ. ಅಕಾಡೆಮಿಯಲ್ಲಿ ಡಿಜಿಟಲ್ ಗ್ರಂಥಾಲಯ ಕೂಡ ಇದೆ. ಬಹುಶಃ ದೇಶದಲ್ಲಿ ಇಷ್ಟು ದೊಡ್ಡ ಡಿಜಿಟಲ್ ಗ್ರಂಥಾಲಯವಿಲ್ಲ ಎಂದರು.