ಬೆಂಗಳೂರು: ಕೊರೋನ ವರದಿ ಸಲ್ಲಿಸದ 4 ಖಾಸಗಿ ಆಸ್ಪತ್ರೆಗಳ ಪರವಾನಿಗೆ ರದ್ದು
ಬೆಂಗಳೂರು, ಜೂ.13: ಆನ್‍ಲೈನ್ ಪೋರ್ಟಲ್‍ನಲ್ಲಿ ಕೋವಿಡ್-19 ಪ್ರಕರಣಗಳ ವರದಿಯನ್ನು ಸಲ್ಲಿಸದ ಆಸ್ಪತ್ರೆಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಕೆಪಿಎಂಇ ನೋಂದಾಯಿತ ಆರೋಗ್ಯ ಸಂಸ್ಥೆಗಳಿಂದ ಪ್ರಕರಣಗಳ ವರದಿಯನ್ನು ಆನ್‍ಲೈನ್ ಪೋರ್ಟಲ್ ಮೂಲಕ ಸಲ್ಲಿಸಲು ಆದೇಶಿಸಲಾಗಿತ್ತು. ಆದರೆ, ಕೆಲವು ಸಂಸ್ಥೆಗಳು ಇದುವರೆಗೂ ಅದನ್ನು ಮಾಡಿಲ್ಲ. ಇದು ಕಾನೂನು ವಿರುದ್ಧವಾಗಿರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.
ಕೆಪಿಎಂಇ ಕಾಯ್ದೆಯ ಉಲ್ಲಂಘನೆ ಮಾಡಿರುವುದರಿಂದ ತಮ್ಮ ಸಂಸ್ಥೆಯ ಪರವಾನಿಗೆಯನ್ನು ರದ್ದುಗೊಳಿಸುವುದು ಸೇರಿದಂತೆ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿ 17 ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ನೀಡಲಾಗಿತ್ತು. ಅದರಲ್ಲಿ 13 ಸಂಸ್ಥೆಗಳು ಆನ್‍ಲೈನ್ ಪೋರ್ಟಲ್‍ನಲ್ಲಿ ವರದಿ ಸಲ್ಲಿಸಲಾಗದಿದ್ದಕ್ಕೆ ಸೂಕ್ತ ಕಾರಣ ನೀಡಲಾಗಿದ್ದು, ತಪ್ಪೊಪ್ಪಿಗೆಯನ್ನು ನೀಡಲಾಗಿದೆ. ಉಳಿದ 4 ಸಂಸ್ಥೆಗಳು ಯಾವುದೇ ಉತ್ತರ ನೀಡದ ಹಿನ್ನೆಲೆಯಲ್ಲಿ ಕಾಯ್ದೆಯ ಅನ್ವಯ ಕ್ರಮ ಕೈಗೊಂಡು ಪರವಾನಿಗೆಯನ್ನು ರದ್ದು ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.