ಲಾಕ್ ಡೌನ್: ದಿಲ್ಲಿ ಹಿಂಸಾಚಾರ ಸಂತ್ರಸ್ತರು, ವಲಸೆ ಕಾರ್ಮಿಕರಿಗೆ ಬದುಕು ಕಟ್ಟಿಕೊಡುತ್ತಿರುವ ಸನಾ ಖಾನ್

Update: 2020-06-14 07:24 GMT
Photo: livemint.com

ಈಶಾನ್ಯ ದೆಹಲಿಯ ನಿವಾಸಿ ರುಕ್ಸಾನಾ, ಫೆಬ್ರವರಿಯಲ್ಲಿ ನಡೆದ ಹಿಂಸಾಚಾರದ ಬಳಿಕ ಅಸಹಾಯಕರಾಗಿದ್ದರು. ಹಲವು ಸಂಘಟನೆಗಳು ತಕ್ಷಣದ ಪರಿಹಾರವಾಗಿ ಪಡಿತರ ಮತ್ತು ಅಗತ್ಯ ವಸ್ತುಗಳನ್ನು ನೀಡಿದರೂ ಅವರ ಅತಿದೊಡ್ಡ ನಷ್ಟವೆಂದರೆ ಗೌರವಯುತವಾಗಿ, ಸ್ವತಂತ್ರವಾಗಿ ಬದುಕಬೇಕೆಂಬ ಆಸೆಗೆ ಕೊಡಲಿಯೇಟು ಬಿದ್ದಿರುವುದು. ಅವರ ಜೀವನಾಧಾರವಾಗಿದ್ದ ಹೊಲಿಗೆಯಂತ್ರವನ್ನು ಗಲಭೆ ವೇಳೆ ಧ್ವಂಸ ಮಾಡಲಾಗಿದ್ದು, ಹೊಸ ಯಂತ್ರ ಖರೀದಿಗೆ ಅವರ ಬಳಿ ಹಣ ಇರಲಿಲ್ಲ.

ಇದಾದ ಎರಡು ವಾರಗಳಲ್ಲಿ ಅಪ್ಪಳಿಸಿದ ಕೊರೋನ ಹಾಗೂ ಲಾಕ್‍ಡೌನ್ ಈಶಾನ್ಯ ದೆಹಲಿ ನಿವಾಸಿಗಳ ಗಾಯದ ಮೇಲೆ ಬರೆ ಎಳೆದಿದೆ.

“ನಾವು ದಾನಿಗಳ ಜತೆ ಮಾತನಾಡಿ ಹೊಲಿಗೆ ಯಂತ್ರ ತರಿಸಿಕೊಟ್ಟೆವು ಮತ್ತು ಆರಂಭಕ್ಕೆ ಬೇಕಾದ ಹಣ ಒದಗಿಸಿದೆವು. ರುಕ್ಸಾನಾ ಈಗ ಮಾಸ್ಕ್‍ಗಳನ್ನು ಸಿದ್ಧಪಡಿಸುತ್ತಿದ್ದಾರೆ” ಎಂದು 32 ವರ್ಷದ ಸನಾ ಖಾನ್ ಹೇಳುತ್ತಾರೆ. “ನಾವು ತಲಾ 15 ರೂಪಾಯಿಯಂತೆ 1500 ಮಾಸ್ಕ್‍ಗಳನ್ನು ಅವರಿಂದ ಖರೀದಿಸಿದ್ದೇವೆ. ಇದನ್ನು ಕೊರೋನ ಪರಿಹಾರ ಕಿಟ್‍ಗಳಲ್ಲಿ ಹಾಕಿ ವಿತರಿಸುತ್ತಿದ್ದೇವೆ”ಎಂದು ಸನಾ ಖಾನ್ ವಿವರಿಸುತ್ತಾರೆ.

ಸಾಮಾಜಿಕ ಕಾರ್ಯಕರ್ತೆಯಾಗಿರುವ ಸನಾ ಖಾನ್, ಎಲ್ಲ ಪ್ರತಿಕೂಲಗಳ ನಡುವೆಯೂ, ತಕ್ಷಣದ ಅಗತ್ಯತೆಗೆ ಸ್ಪಂದಿಸುತ್ತಿದ್ದಾರೆ. ಕಳೆದ ಕೆಲ ತಿಂಗಳಲ್ಲಿ ಅವರು ಈಶಾನ್ಯ ದೆಹಲಿ ಗಲಭೆ ಸಂತ್ರಸ್ತರು, ಕೋವಿಡ್-19 ಹಾಗೂ ಲಾಕ್‍ಡೌನ್ ಸಂತ್ರಸ್ತರು, ದಿನಗೂಲಿಗಳು, ವಲಸೆ ಕಾರ್ಮಿಕರು, ಅಂಫಾನ್ ಚಂಡಮಾರುತ ಸಂತ್ರಸ್ತರಿಗೆ ಸಹಾಯಹಸ್ತ ಚಾಚಿದ್ದಾರೆ.

ಎಲ್ಲವನ್ನೂ ಸವಾಲಾಗಿಯೇ ಸ್ವೀಕರಿಸಿದ್ದಾರೆ. ಸಿಎಎ ಕಾಯ್ದೆ, ರಾಷ್ಟ್ರವ್ಯಾಪಿ ಎನ್‍ ಆರ್ ಸಿ ಪ್ರತಿಭಟನೆ ಬಳಿಕ ಪರಿಹಾರ ಕಾರ್ಯಕ್ಕೂ ‘ಐಡೆಂಟಿಟಿ ಸಮಸ್ಯೆ’ ಎದುರಾಗಿದೆ. ಮುಸ್ಲಿಮರು ನೀಡುತ್ತಿರುವ ನೆರವು ಎಂದು ತಿಳಿದಾಗ ಕೆಲವರು, ನಮಗೆ ಬೇಕಿಲ್ಲ ಎಂದು ನಿರಾಕರಿಸಿರುವ ನಿದರ್ಶನವೂ ಇದೆ ಎಂದು ಪರಿಸ್ಥಿತಿಯನ್ನು ವಿವರಿಸುತ್ತಾರೆ. ಮುಸ್ಲಿಮರಿಂದ ನೆರವು ಪಡೆಯುವ ಬದಲು ಹಸಿದಾದರೂ ಇರುತ್ತೇವೆ ಎಂಬಷ್ಟರ ಮಟ್ಟಿಗೆ ದ್ವೇಷ ಹರಡಲಾಗಿದೆ; ಇದುವರೆಗೆ ಇಂಥ ಪರಿಸ್ಥಿತಿ ನಮ್ಮ ಅನುಭವಕ್ಕೆ ಬಂದಿರಲಿಲ್ಲ” ಎಂದವರು ಹೇಳುತ್ತಾರೆ.

ದಾನಿಗಳ ಮೂಲಕ ಸನಾ ಖಾನ್ ಮತ್ತವರ ತಂಡ ಈಶಾನ್ಯ ದಿಲ್ಲಿಯಲ್ಲಿರುವ ಸುಮಾರು 20 ಗರ್ಭಿಣಿ ಮಹಿಳೆಯರಿಗೆ ನೆರವಾಗುತ್ತಿದ್ದಾರೆ. ಈ ಮಹಿಳೆಯರು ಪತಿಯಂದಿರು ದಿನಗೂಲಿ ಕಾರ್ಮಿಕರಾಗಿದ್ದು ಲಾಕ್ ಡೌನ್ ನಿಂದಾಗಿ ಕೆಲಸವಿಲ್ಲದೆ ಕಂಗಾಲಾಗಿದ್ದಾರೆ.

ತಾನು ಸಮಾಜಕ್ಕಾಗಿ ಏನನ್ನಾದರೂ ಮಾಡಬೇಕು ಎಂದು ಸನಾ ಖಾನ್ ಗೆ ಅನಿಸಿದ್ದು 2016ರಲ್ಲಿ. ಆಕೆ ಜೆಎನ್ ಯುನಲ್ಲಿದ್ದಾಗ ಆಗಿನ ಜೆಎನ್ ಯು ವಿದ್ಯಾರ್ಥಿ ಯುನಿಯನ್ ಅಧ್ಯಕ್ಷ ಕನ್ಹಯ್ಯ ಕುಮಾರ್ ಮತ್ತು ಇತರ ವಿದ್ಯಾರ್ಥಿ ನಾಯಕರನ್ನು ದೇಶದ್ರೋಹದ ಆರೋಪದಲ್ಲಿ ಬಂಧಿಸಲಾಯಿತು. “2016 ನಮ್ಮಲ್ಲಿ ಹೆಚ್ಚಿನವರಿಗೆ ಟರ್ನಿಂಗ್ ಪಾಯಿಂಟ್ ಆಯಿತು. ನಾವು ಕೇವಲ ಹಾಸ್ಟೆಲ್ ರೂಂಗಳಲ್ಲಿ ಇರಲು ಸಾಧ್ಯವಿಲ್ಲ ಎನ್ನುವುದು ನಮಗೆ ಮನವರಿಕೆಯಾಯಿತು” ಎಂದವರು ಹೇಳುತ್ತಾರೆ.

ರಾಷ್ಟ್ರವ್ಯಾಪಿ ಲಾಕ್ ಡೌನ್ ಘೋಷಣೆಯಾಗಿ ವಲಸೆ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ ಎನ್ನುವುದು ತಿಳಿದ ತಕ್ಷಣ ಸನಾ ಖಾನ್ ಅವರ ಸಹಾಯಕ್ಕೆ ಮುಂದಾದರು. ಸನಾ ಖಾನ್ ಅವರ ತಂಡ 15 ಲಕ್ಷ ರೂ.ಗಳನ್ನು ಸಂಗ್ರಹಿಸಿ 2000 ಕಿಟ್ ವಿತರಿಸಿದ್ದಾರೆ. 10,500 ಊಟ ವಿತರಿಸಿದ್ದು, 200 ಕುಟುಂಬಗಳಿಗೆ ಹಣಕಾಸು ಮತ್ತು ವೈದ್ಯಕೀಯ ನೆರವು ನೀಡಿದೆ.

ಲಾಕ್ ಡೌನ್ ನಿಂದ ಸಂಕಷ್ಟದಲ್ಲಿದ್ದ ಬಿಹಾರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಮತ್ತು ಕಾಶ್ಮೀರದಲ್ಲಿರುವ ಕಾರ್ಮಿಕರಿಗಾಗಿ ಸನಾ ಸಹಾಯಹಸ್ತ ಚಾಚಿದ್ದಾರೆ.

ಕೃಪೆ: livemint.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News