×
Ad

ಕೊರೋನ ವೈರಸ್: ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ 32ಕ್ಕೆ ಏರಿಕೆ

Update: 2020-06-14 20:29 IST

ಬೆಂಗಳೂರು, ಜೂ.14: ನಗರದಲ್ಲಿ ಮಹಾಮಾರಿ ಕೊರೋನದ ಅಟ್ಟಹಾಸ ಮುಂದುವರಿದಿದ್ದು, ರವಿವಾರ 42 ಸೋಂಕಿತರು ಪತ್ತೆಯಾಗಿದ್ದಾರೆ. ಅಲ್ಲದೇ, ಒಂದೇ ದಿನ ಮೂವರು ಬಲಿಯಾಗಿದ್ದು, ನಗರದಲ್ಲಿ ಒಟ್ಟು ಮೃತರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ.

ಇನ್ನು ಆರು ಸೋಂಕಿತರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಿದ್ದು, 28 ಸೋಂಕಿತರು ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಹೋಗಿದ್ದಾರೆ. ನಗರದಲ್ಲಿ ಈವರೆಗೆ ಒಟ್ಟು 690 ಕೊರೋನ ಸೋಂಕಿತರ ಪ್ರಕರಣಗಳು ದಾಖಲಾಗಿವೆ.

ಮೂವರು ಬಲಿ: ಕೊರೋನ ಸೋಂಕಿತ 60 ವರ್ಷದ ಮಹಿಳೆ ಜೂ.13 ರಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ರವಿವಾರ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. 57 ವರ್ಷದ ಸೋಂಕಿತ ಮಹಿಳೆಯನ್ನು ಖಾಸಗಿ ಆಸ್ಪತ್ರೆಯಿಂದ ಜೂ.13 ರಂದು ವಿಕ್ಟೋರಿಯಾಗೆ ರವಾನಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. 50 ವರ್ಷದ ವ್ಯಕ್ತಿಯನ್ನು ಜಯನಗರ ಸರ್ಕಾರಿ ಆಸ್ಪತ್ರೆಯಿಂದ ವರ್ಗಾಯಿಸಿ ವಿಕ್ಟೋರಿಯಾದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಆರೋಗ್ಯಾಧಿಕಾರಿಗಳು ಸೋಂಕಿತರ ಪ್ರಯಾಣದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದು, ಸೋಂಕಿನ ಮೂಲ ತಿಳಿಯಬೇಕಿದೆ.

ಚಿಕ್ಕಪೇಟೆಗೂ ಕೊರೋನ ಹರಡುವ ಭೀತಿ

ಜಯನಗರ ನಿವಾಸಿಯಾಗಿರುವ ವೈದ್ಯರೊಬ್ಬರು ಚಿಕ್ಕಪೇಟೆಯಲ್ಲಿ ಔಷಧ ಮಳಿಗೆ ಇಟ್ಟುಕೊಂಡಿದ್ದರು. ಇವರು ಕೆಲ ದಿನಗಳ ಹಿಂದೆ ಜ್ವರದಿಂದ ಬಳಲುತ್ತಿದ್ದ ರೋಗಿಗೆ ಚಿಕಿತ್ಸೆ ನೀಡಿರುವ ಕಾರಣ ಅವರಿಂದ ಕೊರೋನ ಹರಡಿರುವ ಶಂಕೆ ವ್ಯಕ್ತವಾಗಿದೆ. ಬಿಬಿಎಂಪಿ ಆರೋಗ್ಯಾಧಿಕಾರಿಗಳು ಇವರ ಸಂಪರ್ಕ ಪತ್ತೆ ಹಚ್ಚುತ್ತಿದ್ದಾರೆ. ಇದರ ನಡುವೆ ಚಿಕ್ಕಪೇಟೆ ವೈದ್ಯ ಬೆಂಗಳೂರಿಗೆ ಸೂಪರ್ ಸ್ಪ್ರೆಡರ್ ಆಗುತ್ತಾರಾ ಎಂಬ ಆತಂಕ ಎಲ್ಲೆಡೆ ಸೃಷ್ಟಿಯಾಗಿದೆ. 15ಕ್ಕೂ ಹೆಚ್ಚು ಜನರು ಹಾಗೂ ರೋಗಿಗಳು ಅವರ ಸಂಪರ್ಕದಲ್ಲಿದ್ದರು ಎಂದು ತಿಳಿದುಬಂದಿದೆ. ಪ್ರಾಥಮಿಕ ಸಂಪರ್ಕದ 5, ದ್ವಿತೀಯ ಸಂಪರ್ಕದಲ್ಲಿದ್ದ 15 ಕ್ಕೂ ಹೆಚ್ಚು ಜನರನ್ನು ಕ್ವಾರಂಟೈನ್ ಮಾಡಲಾಗಿದೆ.

ಹೊಸದಾಗಿ 15 ಸೋಂಕಿತರು ಪತ್ತೆ

ರವಿವಾರ ಕಾಣಿಸಿಕೊಂಡ ಸೋಂಕಿತರ ಪೈಕಿ ಇಬ್ಬರು ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. 7 ಜನರಲ್ಲಿ ವಿಷಮಶೀತ ಜ್ವರ ಕಾಣಿಸಿಕೊಂಡಿದೆ. ಇನ್ನು ಹೊಸದಾಗಿ 15 ಜನರಿಗೆ ಸೋಂಕು ಪತ್ತೆಯಾಗಿದ್ದು, ಅವರ ಜತೆ ಸಂಪರ್ಕ ಹೊಂದಿದವರಿಗೂ ಸೋಂಕಿನ ಭೀತಿ ಕಾಡುತ್ತಿದೆ. ಹೀಗಾಗಿ ಅವರ ಜತೆ ಸಂಪರ್ಕ ಹೊಂದಿದವರನ್ನು ಬಿಬಿಎಂಪಿ ಹಾಗೂ ವೈದ್ಯರು ಪತ್ತೆಹಚ್ಚಿ ಕ್ವಾರಂಟೈನ್‍ಗೆ ಒಳಪಡಿಸುತ್ತಿದ್ದಾರೆ.

ಹಾಗೆಯೇ, ಮಹಾರಾಷ್ಟ್ರ ಮತ್ತು ತಮಿಳುನಾಡಿನಿಂದ ಬಂದು ಕ್ವಾರಂಟೈನ್‍ ನಲ್ಲಿದ್ದವರಿಗೂ ಸೋಂಕು ತಗಲಿದೆ. ಇಬ್ಬರು ಅಂತರ್ ಜಿಲ್ಲಾ ಪ್ರವಾಸ ಮಾಡಿದವರಲ್ಲೂ ಸೋಂಕು ಪತ್ತೆಯಾಗಿದ್ದು, ಅವರನ್ನು ನಿಗದಿತ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜತೆಗೆ ಈಗಾಗಲೇ ಸೋಂಕು ತಗಲಿ ಚಿಕಿತ್ಸೆ ಪಡೆಯುತ್ತಿದ್ದವರ 10 ಜನ ಸಂಪರ್ಕಿತರಿಗೂ ಕೊರೋನ ತಗುಲಿದೆ. ಎಲ್ಲರನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿರುವ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News