ಭಾರತೀಯರ ರಕ್ಷಣೆಗೆ ಕೇಂದ್ರ ಸರಕಾರ ಬದ್ಧ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ
ಬೆಂಗಳೂರು, ಜೂ. 14: ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೊರೋನ ವಿರುದ್ಧ ಹೋರಾಟ ಮಾಡುತ್ತಿದ್ದು, 130 ಕೋಟಿ ಭಾರತೀಯರ ರಕ್ಷಣೆಗೆ ಬದ್ಧವಾಗಿದೆ ಎಂದು ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ ತಿಳಿಸಿದ್ದಾರೆ.
ರವಿವಾರ ಹೊಸದಿಲ್ಲಿಯಿಂದ ವಿಡಿಯೋ ಮೂಲಕ 'ಜನಸಂವಾದ ರ‍್ಯಾಲಿ'ಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಲಾಕ್‍ಡೌನ್ ಮಾಡುವ ಮೂಲಕ ಕೊರೋನ ಸೋಂಕು ನಿಯಂತ್ರಣ ಮಾಡಲಾಗಿದೆ. ಒಂದು ಸಾವಿರ ಕೋವಿಡ್ ಆಸ್ಪತ್ರೆಗಳನ್ನು ಆರಂಭಿಸಿದ್ದು, ಪಿಪಿಇ ಕಿಟ್‍ಗಳ ಉತ್ಪಾದನೆ ದಾಖಲೆ ಮಟ್ಟದಲ್ಲಿ ನಡೆದಿದೆ.
800 ಕೊರೋನ ಸೋಂಕಿತರ ಪರೀಕ್ಷಾ ಕೇಂದ್ರಗಳು ಹಾಗೂ 2 ಲಕ್ಷ ಹಾಸಿಗೆಗಳನ್ನು ಸಿದ್ದಪಡಿಸಿದ್ದು, ಮಾರಕ ಕೊರೋನ ವೈರಸ್ ಸೋಂಕು ನಿಯಂತ್ರಣಕ್ಕೆ ಕೇಂದ್ರ ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ ಎಂದ ಅವರು, ಕೋವಿಡ್ ವಿರುದ್ಧ ಶ್ರಮಿಸುತ್ತಿರುವ ಕೊರೋನ ವಾರಿಯರ್ಸ್ ಗಳಿಗೆ ಗೌರವ ಸಲ್ಲಿಸಲು ಪ್ರಧಾನಿ ನೀಡಿದ್ದ ಕರೆಗೆ ದೇಶದ ಜನತೆ ಸ್ಪಂದಿಸಿದ್ದಾರೆ ಎಂದರು.
ಪಕ್ಷದ ಎಲ್ಲ ಕಾರ್ಯಕರ್ತರು ಕೊರೋನ ಸೋಂಕಿನ ಸಂಕಷ್ಟದ ಸಂದರ್ಭದಲ್ಲಿ ಜನರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿದ್ದು ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುವೆ ಎಂದ ಅವರು, ಕರ್ನಾಟಕ ಧಾರ್ಮಿಕ ಭೂಮಿ. ದೇಶಕ್ಕೆ ಹೊಸ ದಿಕ್ಸೂಚಿ ನೀಡಿದ ಭೂಮಿ. ಪಕ್ಷದ ಕಾರ್ಯಕರ್ತರು ಜನರ ಸಮಸ್ಯೆಗಳಿಗೆ ಅಭೂತಪೂರ್ವವಾಗಿ ಸ್ಪಂದಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆರು ದಶಕಗಳಲ್ಲಿ ಆಗದ ಅಭಿವೃದ್ಧಿ ಕೆಲಸಗಳನ್ನು ಮೋದಿ ನೇತೃತ್ವದ ಸರಕಾರ ತನ್ನ ಆಡಳಿತದ ಆರೇ ವರ್ಷಗಳಲ್ಲಿ ಮಾಡಿದೆ. ದೇಶದಲ್ಲಿ ಈ ಹಿಂದೆ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿತ್ತು. ಎಲ್ಲ ದುರಾಡಳಿತಕ್ಕೆ ತಿಲಾಂಜಲಿ ಇಡುವ ಮೂಲಕ ಭಾರತ ವಿಶ್ವಮಟ್ಟದಲ್ಲಿ ಪ್ರಜ್ವಲಿಸುವಂತೆ ಮಾಡಿದೆ ಎಂದು ನಡ್ಡಾ ಶ್ಲಾಘಿಸಿದರು.
ಕೊರೋನ ಸೋಂಕಿನ ವಿರುದ್ಧ ದೇಶ ಸಂಘಟಿತ ಹೋರಾಟ ಮಾಡುತ್ತಿದ್ದು, ಕೊರೋನ ವಾರಿಯರ್ಸ್ ಗಳು ತಮ್ಮ ಜೀವದ ಹಂಗನ್ನು ತೊರೆದು ಕೋವಿಡ್-19 ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಇವರ ಶ್ರಮ ಸ್ಮರಣೀಯ ಎಂದ ಅವರು, ಸರಕಾರದ ಮಾರ್ಗಸೂಚಿಗಳನ್ನು ಎಲ್ಲರೂ ಪಾಲಿಸಬೇಕು ಎಂದು ಸಲಹೆ ಮಾಡಿದರು.
ಮುಖ್ಯಮಂತ್ರಿ ಯಡಿಯೂರಪ್ಪ, ಕೊರೋನ ಸೋಂಕಿನ ವಿರುದ್ಧ ರಾಜ್ಯ ಸರಕಾರ ಕೈಗೊಂಡ ಕ್ರಮಗಳನ್ನು ವಿವರಿಸಿದರು. ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾತನಾಡಿದರು. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಡಾ.ಅಶ್ವಥ್ ನಾರಾಯಣ, ಸಚಿವರಾದ ಆರ್. ಅಶೋಕ್, ಕೆ.ಗೋಪಾಲಯ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು.
ವಿಶ್ವ ರಕ್ತದಾನಿಗಳ ದಿನದಂದು, ಪ್ರತಿಯೊಬ್ಬರೂ ರಕ್ತದಾನದ ಕುರಿತು ಕರ್ತವ್ಯನಿಷ್ಠರಾಗುವ ನಿಟ್ಟಿನಲ್ಲಿ ದೃಢಸಂಕಲ್ಪ ಮಾಡೋಣ, ಮಾನವೀಯತೆಯನ್ನು ಸಂಭ್ರಮಿಸೋಣ. ರಕ್ತದಾನದ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ ಮಾಡೋಣ. ಈ ಪವಿತ್ರ ಕಾಯಕದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪ್ರತಿಯೊಬ್ಬರನ್ನು ಅಭಿನಂದಿಸುತ್ತೇನೆ'
-ಯಡಿಯೂರಪ್ಪ, ಮುಖ್ಯಮಂತ್ರಿ