×
Ad

ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೆ ಸಿಎಂ ಯಡಿಯೂರಪ್ಪ ಚಾಲನೆ

Update: 2020-06-15 13:21 IST

ಶಿವಮೊಗ್ಗ : ಜಿಲ್ಲೆಯ ಜನತೆಯ ಬಹುದಿನಗಳ ಕನಸಾಗಿದ್ದ ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಾಣದಿಂದಾಗಿ ಜಿಲ್ಲೆಯ ಹಾಗೂ ಸುತ್ತಲಿನ ಜಿಲ್ಲೆಗಳ ಪ್ರವಾಸೋದ್ಯಮ ಹಾಗೂ ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ಉತ್ತೇಜನ ದೊರೆಯುವ ನಿರೀಕ್ಷೆ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.

ಅವರು ಸೋಮವಾರ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೆ ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಿಂದ ಆನ್‍ಲೈನ್ ಮೂಲಕ ಚಾಲನೆ ನೀಡಿ ಮಾತನಾಡಿದರು.

ಶಿವಮೊಗ್ಗ ತಾಲೂಕಿನ ಸೋಗಾನೆ ಗ್ರಾಮದಲ್ಲಿ 220 ಕೋಟಿ ರೂ. ವೆಚ್ಚದಲ್ಲಿ 662.38 ಎಕ್ರೆ ಪ್ರದೇಶದಲ್ಲಿ ಸುಸಜ್ಜಿತ ವಿಮಾನ ನಿಲ್ದಾಣ ನಿರ್ಮಿಸಲಾಗುತ್ತಿದೆ. ಕಾಮಗಾರಿಯನ್ನು ಎರಡು ಹಂತಗಳಲ್ಲಿ ಕೈಗೊಳ್ಳಲಾಗುತ್ತಿದ್ದು, ಒಂದು ವರ್ಷದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಗುಣಮಟ್ಟದಲ್ಲಿ ಯಾವುದೇ ರಾಜಿಯಿಲ್ಲದೆ ನಿಗದಿತ ಸಮಯದ ಒಳಗಾಗಿ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಬೇಕು. ಉಡಾನ್ ಯೋಜನೆಯಿಂದಾಗಿ ಜನಸಾಮಾನ್ಯರೂ ವಿಮಾನಯಾನ ಕೈಗೊಳ್ಳಬಹುದಾದ ವಾತಾವರಣವಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ನೀರಾವರಿ ಯೋಜನೆಗಳು, ಶಾಲೆಗಳಲ್ಲಿ ಮೂಲಭೂತ ಸೌಲಭ್ಯ, ಕುಡಿಯುವ ನೀರು, ರಸ್ತೆ ಸಂಪರ್ಕ ಅನುಷ್ಟಾನಗೊಳಿಸಲಾಗುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಗೆ ವೇಗ ದೊರೆತಿದೆ. ಶಿವಮೊಗ್ಗ-ಶಿಕಾರಿಪುರ ರೈಲ್ವೇ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಅವರು ಮಾತನಾಡಿ, ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದ್ದು, ಶಿವಮೊಗ್ಗದಲ್ಲಿ ಮುಖ್ಯ ಇಂಜಿನಿಯರ್ ಕೇಂದ್ರ ವಲಯ ಮತ್ತು ರಾಷ್ಟ್ರೀಯ ಹೆದ್ದಾರಿ ವಿಭಾಗ ಕಚೇರಿಗಳನ್ನು ಆರಂಭಿಸುವ ಮೂಲಕ ಈ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಇನ್ನಷ್ಟು ವೇಗ ದೊರೆಯಲಿದೆ. ಗುಣಮಟ್ಟದ ಕೆಲಸ ಇದರಿಂದ ಸಾಧ್ಯವಾಗಲಿದೆ ಎಂದು ಹೇಳಿದರು.

ಸ್ಥಳೀಯ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ವಿಮಾನ ನಿಲ್ದಾಣದಿಂದಾಗಿ ಜಿಲ್ಲೆಯಲ್ಲಿ ಹೆಚ್ಚಿನ ಕೈಗಾರಿಕೆ ಆರಂಭವಾಗುವ ನಿರೀಕ್ಷೆಯಿದೆ. ಈ ಮೂಲಕ ಯುವ ಜನಾಂಗಕ್ಕೆ ಹೆಚ್ಚಿನ ಉದ್ಯೋಗವಕಾಶ ಸೃಷ್ಟಿಯಾಗಲಿದೆ ಎಂದು ಹೇಳಿದರು.

ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಮಾತನಾಡಿ ಕಳೆದ ಒಂದು ವರ್ಷ ಅವಧಿಯಲ್ಲಿ ಹಲವು ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಿಕೊಂಡು ಇಂದು ವಿಮಾನ ನಿಲ್ದಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಅನುಷ್ಟಾನಗೊಳಿಸಲಾಗುತ್ತಿದೆ ಎಂದರು.

ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ, ಪ್ರಸನ್ನ ಕುಮಾರ್ ಅವರು ಮಾತನಾಡಿದರು. ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಸ್ವಾಗತಿಸಿದರು. ಶಾಸಕರಾದ ಅರಗ ಜ್ಞಾನೇಂದ್ರ, ಅಶೋಕ ನಾಯ್ಕ, ಕುಮಾರ ಬಂಗಾರಪ್ಪ, ಹರತಾಳು ಹಾಲಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಎಸ್ ಕುಮಾರ್, ಮೇಯರ್ ಸುವರ್ಣಾ ಶಂಕರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News