ಪ್ರತ್ಯೇಕ ರಸ್ತೆ ಅಪಘಾತ: ಮಹಿಳೆ ಸೇರಿ ಇಬ್ಬರು ಮೃತ್ಯು
Update: 2020-06-15 16:53 IST
ಬೆಂಗಳೂರು, ಜೂ.15: ನಗರದಲ್ಲಿ ಸಂಭವಿಸಿದ 2 ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಮಹಿಳೆ ಸೇರಿ ಇಬ್ಬರು ಮೃತಪಟ್ಟಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿಯ ಜಂಕ್ಷನ್‍ನಲ್ಲಿ ರವಿವಾರ ತಡರಾತ್ರಿ ಅಪರಿಚಿತ ವಾಹನ ಹರಿದು ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮಹಿಳೆಯು ಸುಮಾರು 50 ವರ್ಷ ವಯಸ್ಸಿನವರಾಗಿದ್ದು, ಅವರ ಹೆಸರು, ವಿಳಾಸ ಪತ್ತೆಯಾಗಿಲ್ಲ. ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಯುವಕ ಸಾವು: ಕೆಆರ್ ಪುರಂನ ಐಟಿಐ ಬಸ್ ನಿಲ್ದಾಣದ ಬಳಿ ವೇಗವಾಗಿ ಹೋಗುತ್ತಿದ್ದ ಬೈಕ್ ಆಯತಪ್ಪಿ ಬಿದ್ದು ಬೈಕ್ ಸವಾರ ಸಂದೀಪ್ ಕುಮಾರ್(31) ಮೃತಪಟ್ಟಿದ್ದಾರೆ.
ನಾಗವಾರ ಪಾಳ್ಯದ ಸಂದೀಪ್ ಕುಮಾರ್, ಕೇಬಲ್ ಆಪರೇಟರ್ ಬಳಿ ಕೆಲಸ ಮಾಡುತ್ತಿದ್ದು, ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ. ಪ್ರಕರಣ ದಾಖಲಿಸಿರುವ ಕೆಆರ್ ಪುರಂ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.