ಬೆಂಗಳೂರಿನಲ್ಲಿ ಕಂಟೈನ್ಮೆಂಟ್ ಝೋನ್ ಗಳ ಸಂಖ್ಯೆ 142ಕ್ಕೆ ಏರಿಕೆ

Update: 2020-06-15 15:33 GMT

ಬೆಂಗಳೂರು, ಜೂ.15: ಕೊರೋನ ಸೋಂಕು ಬೆಂಗಳೂರಿನ ಮೂಲೆ ಮೂಲೆಗಳಿಗೂ ವ್ಯಾಪಿಸುತ್ತಿದ್ದು 198 ವಾರ್ಡ್‍ಗಳಲ್ಲಿ ಈಗಾಗಲೇ 122 ವಾರ್ಡ್‍ಗಳಿಗೆ ಕೊರೋನ ಕಾಲಿಟ್ಟಿರುವುದರಿಂದ 142 ವಲಯಗಳನ್ನು ಕಂಟೈನ್ಮೆಂಟ್ ಝೋನ್ ಗಳನ್ನಾಗಿ ಗುರುತಿಸಲಾಗಿದೆ.

ನಗರಕ್ಕೆ ಮಹಾರಾಷ್ಟ್ರ, ತಮಿಳುನಾಡು ಕಡೆಯಿಂದ ಬಂದಿರುವವರು ಹಾಗೂ ಬೇರೆ ಜಿಲ್ಲೆಗಳಿಂದ ಬಂದಿರುವವರಿಂದ ಸ್ಥಳೀಯರಿಗೆ ಸೋಂಕು ತಗಲುತ್ತಿರುವ ವರದಿಗಳಾಗುತ್ತಿದ್ದು, ಇದರಿಂದಾಗಿ ರವಿವಾರದಿಂದ ಇಲ್ಲಿಯವರೆಗೆ 32 ಹೊಸ ಕಂಟೈನ್ಮೆಂಟ್ ವಲಯಗಳನ್ನು ಗುರುತಿಸಲಾಗಿದ್ದು, ಇದರಿಂದ ಪ್ರತಿ ರಸ್ತೆಯನ್ನೂ ಸೀಲ್‍ಡೌನ್ ಮಾಡಲಾಗುತ್ತಿದೆ.

ಆರಂಭದಲ್ಲಿ ಕೆಲವೇ ವಲಯಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದ ಸೋಂಕು ಈಗ ಎಲ್ಲ ಎಂಟು ವಲಯಗಳಲ್ಲೂ ಸೋಂಕು ಕಾಣಿಸತೊಡಗಿದೆ. ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಕೊರೋನ ಸೋಂಕಿತರ ಸಂಖ್ಯೆ ಮಿತಿ ಮೀರುವ ಸಾಧ್ಯತೆ ಇದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರು ಹೇಳಿದ್ದಾರೆ. ಇದರಿಂದ ಸೋಂಕು ಹರಡುವುದನ್ನು ತಡೆಗಟ್ಟಲು ಬಿಬಿಎಂಪಿ ಅಧಿಕಾರಿಗಳು ಎಷ್ಟೇ ಕ್ರಮ ಕೈಗೊಂಡರೂ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ.

ಪಶ್ಚಿಮ ವಲಯ ಒಂದರಲ್ಲೇ 35 ಕಂಟೈನ್ಮೆಂಟ್ ಪ್ರದೇಶಗಳಿದ್ದು ಅತಿ ಹೆಚ್ಚು ಸೋಂಕಿತರು ಇದೇ ವ್ಯಾಪ್ತಿಯಲ್ಲಿದ್ದಾರೆ. ಇದುವರೆಗೂ ಪಶ್ಚಿಮ ವಲಯದಲ್ಲಿ 142 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 8 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ನಂತರದ ಸ್ಥಾನ ಪೂರ್ವ ವಲಯದ್ದಾಗಿದ್ದು, ಇಲ್ಲಿ 24 ಕಂಟೈನ್ಮೆಂಟ್ ಪ್ರದೇಶಗಳಿದ್ದು, 136 ಮಂದಿಗೆ ಸೋಂಕು ತಗುಲಿದ್ದು, 8 ಮಂದಿ ಮೃತಪಟ್ಟಿದ್ದಾರೆ. ದಕ್ಷಿಣ ವಲಯದಲ್ಲಿ 23 ಕಂಟೈನ್ಮೆಂಟ್ ಪ್ರದೇಶಗಳಿದ್ದು 76 ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, 6 ಮಂದಿ ಬಲಿಯಾಗಿದ್ದಾರೆ. ಬೊಮ್ಮನಹಳ್ಳಿ ವಲಯದಲ್ಲಿ 17 ಕಂಟೈನ್ಮೆಂಟ್ ಪ್ರದೇಶಗಳಿದ್ದು 98 ಜನರಿಗೆ ಸೋಂಕು ತಗುಲಿದೆ. ಮಹದೇವಪುರ ವಲಯದಲ್ಲಿ 15 ಕಂಟೈನ್ಮೆಂಟ್ ಪ್ರದೇಶಗಳಿದ್ದು 36 ಮಂದಿ ಸೋಂಕಿತರಿದ್ದಾರೆ.

ಯಲಹಂಕ ವಲಯದಲ್ಲಿ 6 ವಾರ್ಡ್‍ಗಳನ್ನು ಕಂಟೈನ್ಮೆಂಟ್ ಪ್ರದೇಶ ಎಂದು ಗುರುತಿಸಲಾಗಿದ್ದು ಇದುವರೆಗೂ 11 ಜನರಿಗೆ ಕೊರೋನ ಸೋಂಕು ತಗುಲಿದೆ. ದಾಸರಹಳ್ಳಿ ವಲಯದಲ್ಲಿ 5 ವಾರ್ಡ್‍ಗಳು ಕಂಟೈನ್ಮೆಂಟ್ ಪ್ರದೇಶಗಳಾಗಿದ್ದು 6 ಮಂದಿಗೆ ಸೋಂಕು ತಗುಲಿದರೆ, ಆರ್.ಆರ್.ನಗರದ 2 ವಾರ್ಡ್‍ಗಳು ಕಂಟೈನ್ಮೆಂಟ್ ಪ್ರದೇಶಗಳಾಗಿದ್ದು ಐವರಿಗೆ ಸೋಂಕು ಕಾಣಿಸಿಕೊಂಡಿದ್ದು, ಇವರಲ್ಲಿ ಒಬ್ಬ ಕೊರೋನ ವೈರಸ್‍ಗೆ ಬಲಿಯಾಗಿದ್ದಾನೆ.

ಒಟ್ಟಾರೆ 122 ವಾರ್ಡ್‍ಗಳಿಗೂ ಮಹಾಮಾರಿ ವಕ್ಕರಿಸಿದ್ದು, ಮುಂದಿನ ಎರಡು ತಿಂಗಳೊಳಗೆ ಇಡೀ ನಗರಕ್ಕೇ ಸೋಂಕು ಹರಡುವ ಭೀತಿ ಎದುರಾಗಿದೆ. ಲಾಕ್‍ಡೌನ್ ತೆರವು ನಂತರ ನಾಗರಿಕರು ಸೋಂಕಿನ ಕುರಿತು ಗಂಭೀರವಾಗಿ ಪರಿಗಣಿಸದೇ ಇರುವುದರಿಂದ ಸೋಂಕು ಹರಡುತ್ತಲೇ ಇದೆ. ಇದು ಬಿಬಿಎಂಪಿ ಅಧಿಕಾರಿಗಳಿಗೆ ತಲೆಬಿಸಿಯಾಗುವಂತೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News