×
Ad

ಮೂರು ಸಾವಿರಕ್ಕೂ ಹೆಚ್ಚು ಮರಗಳ ಕಡಿತಕ್ಕೆ ಅನುಮತಿ: ಪರಿಸರವಾದಿಗಳಿಂದ ತೀವ್ರ ವಿರೋಧ

Update: 2020-06-15 22:07 IST

ಬೆಂಗಳೂರು, ಜೂ.15: ಸಿಲಿಕಾನ್ ಸಿಟಿಯಲ್ಲಿ ರಸ್ತೆ ವಿಸ್ತರಣೆಯ ನೆಪದಲ್ಲಿ 3 ಸಾವಿರಕ್ಕೂ ಹೆಚ್ಚು ಮರಗಳನ್ನು ಕಡಿಯಲು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ ಅನುಮತಿ ನೀಡಲಾಗಿದ್ದು, ಪರಿಸರವಾದಿಗಳು ಈ ಕ್ರಮಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ.

ಕಂಚಗಾರನಹಳ್ಳಿಯಿಂದ ಜಿಗಣಿವರೆಗೆ, ಆನೇಕಲ್ ಅತ್ತಿಬೆಲೆ ಸರ್ಜಾಪುರ ಮಾರ್ಗವಾಗಿ ಹೊಸಕೋಟೆವರೆಗೆ, ಹೊಸಕೋಟೆಯಿಂದ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ರಸ್ತೆ ವಿಸ್ತರಿಸಲು ಕಾಮಗಾರಿ ನಡೆಸಬೇಕಿದ್ದು, ಇದಕ್ಕಾಗಿ ಮರಗಳನ್ನು ಕತ್ತರಿಸಲು ಕೆಆರ್‍ಡಿಸಿಎಲ್ ಅರಣ್ಯ ಇಲಾಖೆಯ ಅನುಮತಿ ಕೋರಿತ್ತು.

ಈ ಹಿಂದೆ 1406 ಮರಗಳನ್ನು ಕಡಿಯಲು ಅರಣ್ಯ ಇಲಾಖೆ ಅನುಮತಿ ನೀಡಿತ್ತು. ಈಗ ಮತ್ತೆ ಒಂದೂವರೆ ಸಾವಿರಕ್ಕೂ ಹೆಚ್ಚು ಮರಗಳು ಸೇರಿ ಒಟ್ಟು 3 ಸಾವಿರಕ್ಕೂ ಹೆಚ್ಚು ಮರಗಳನ್ನು ಕಡಿಯಲು ಅರಣ್ಯ ಇಲಾಖೆ ಅನುಮತಿ ನೀಡಿದೆ.

ಅರಣ್ಯ ಇಲಾಖೆಯ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಪರಿಸರವಾದಿಗಳು ಮರಗಳನ್ನು ಕಡಿಯುವ ಬದಲು ಮರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಸಬೇಕು. ಹಾಗೊಂದು ಬಾರಿ ಮರಗಳನ್ನು ಕಡಿಯಲೆಬೇಕೆಂಬ ಪರಿಸ್ಥಿತಿ ಬಂದಾಗ ಆ ಮರಗಳನ್ನು ಬೇರೆ ಕಡೆಗೆ ಸ್ಥಳಾಂತರಿಸುವ ಕೆಲಸವಾಗಬೇಕೆಂದು ಒತ್ತಾಯಿಸಿದ್ದಾರೆ.

ಈ ರೀತಿಯ ರಸ್ತೆ ವಿಸ್ತರಣೆ ಮಾಡುವ ಸಂದರ್ಭದಲ್ಲಿ ಜನರ ಅಹವಾಲು ಆಲಿಸಬೇಕು. ಅವರ ಆಕ್ಷೇಪಣೆಗಳನ್ನು ಕೇಳಬೇಕು ಎನ್ನುವುದು ನಿಯಮ. ಆದರೆ, ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಮನಸೋ ಇಚ್ಛೆ ಮರಗಳನ್ನು ಕಡಿಯಲಾಗುತ್ತಿದೆ ಎಂದು ಪರಿಸರವಾದಿಗಳ ಆರೋಪವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News