ಕಳಪೆ ಗುಣಮಟ್ಟದ ಪಿಪಿಇ ಕಿಟ್ ವಿತರಿಸಿದರೆ ಕಠಿಣ ಕ್ರಮ: ಸಚಿವ ಸುಧಾಕರ್
ಬೆಂಗಳೂರು, ಜೂ.15: ರಾಜ್ಯಾದ್ಯಂತ ಕೊರೋನ ವಿರುದ್ಧ ಅಧಿಕಾರಿಗಳು, ವೈದ್ಯರು ಹಾಗೂ ಕೊರೋನ ವಾರಿಯರ್ಸ್ ಶ್ರಮವಹಿಸಿ ಕೆಲಸ ಮಾಡುತ್ತಿವೆ. ಹೀಗಾಗಿ, ಯಾರಾದರೂ ಕಳಪೆ ಗುಣಮಟ್ಟದ ಪಿಪಿಇ ಕಿಟ್‍ಗಳನ್ನು ವಿತರಿಸಿದರೆ, ಅವರ ವಿರುದ್ಧ ಉಗ್ರ ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಸೋಮವಾರ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಪಿಪಿಇ ಕಿಟ್ ಗಳ ಗುಣಮಟ್ಟದ ಖುದ್ದು ಪರಿಶೀಲನೆ ನಡೆಸಿ, ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಮೂರು-ನಾಲ್ಕು ದಿನಗಳಿಂದ ಉತ್ತರ ಕರ್ನಾಟಕದ ಭಾಗದಲ್ಲಿ ಸುತ್ತಾಡಿಕೊಂಡು ಕೊರೋನ ಸೋಂಕು ನಿವಾರಣೆಗಾಗಿ ಕೈಗೊಂಡಿರುವ ಕ್ರಮಗಳನ್ನು ಪರಿಶೀಲನೆ ನಡೆಸಿದ್ದೇನೆ ಎಂದು ತಿಳಿಸಿದರು.
ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿನ ಹಿರಿಯ ವೈದ್ಯರು ಹಾಗೂ ಸಿಬ್ಬಂದಿಯ ಜತೆ ಮಾತುಕತೆ ನಡೆಸಿದ್ದೇನೆ. ಅಂತರ್ ರಾಷ್ಟ್ರೀಯ ಮಟ್ಟದ ಸಿಇಇ ಸರ್ಟಿಫಿಕೇಷನ್ ಪಡೆದಿರುವ ಆಸ್ಪತ್ರೆಯಾದ ಕಾರಣ ವಿಕ್ಟೋರಿಯಾ ಆಸ್ಪತ್ರೆ ಗುಣಮಟ್ಟವನ್ನು ಕಾಯ್ದುಕೊಂಡಿದೆ. ಇಲ್ಲಿ ಕಳಪೆ ಗುಣಮಟ್ಟದ ಪಿಪಿಇ ಕಿಟ್‍ಗಳನ್ನು ವಿತರಿಸಲು ಸಾಧ್ಯವೇ ಇಲ್ಲ ಎಂದರು.
ಆಸ್ಪತ್ರೆಯಲ್ಲಿ ಕೆಲಸ ಮಾಡಲಾಗದ ಒಂದಿಬ್ಬರು ದುರುದ್ದೇಶಪೂರ್ವಕವಾಗಿ ಸಂಸ್ಥೆ ಹಾಗೂ ಸರಕಾರದ ಮೇಲೆ ಕೆಟ್ಟ ಹೆಸರು ತರಲು ಸಂಘ-ಸಂಸ್ಥೆ ಜತೆ ಸೇರಿಕೊಂಡು ಮಾಧ್ಯಮದ ಮುಂದೆ ತಂದಿದ್ದಾರೆ. ತಾಂತ್ರಿಕ ವಿಷಯಗಳನ್ನು ಬಹಿರಂಗವಾಗಿ ಹೇಳಲಾಗದು, ಅದನ್ನು ತಾಂತ್ರಿಕ ತಜ್ಞರೊಂದಿಗೆ ಮಾಹಿತಿ ಪಡೆದುಕೊಳ್ಳಬೇಕು. ನೈಜತೆಯನ್ನು ಅರಿಯಬೇಕಿದೆ ಎಂದು ತಿಳಿಸಿದರು.
ಕೊರೋನ ಯೋಧರು, ಅಧಿಕಾರಿಗಳು ಹಾಗೂ ಸಿಬ್ಬಂದು ತುಂಬಾ ಕಷ್ಟಪಟ್ಟು ದಿನನಿತ್ಯ ಹಗಲು-ರಾತ್ರಿ ಎನ್ನದೇ ದುಡಿಯುತ್ತಿದ್ದಾರೆ. ಸಾಧ್ಯವಾದರೆ ಅವರಿಗೆ ಸಾಥ್ ನೀಡುವ ಮೂಲಕ ಪ್ರೋತ್ಸಾಹಿಸುವ ಕೆಲಸ ಮಾಡಿ. ಅವರ ಮನೋಸ್ಥೈರ್ಯವನ್ನು ಕುಗ್ಗಿಸುವ ಕೆಲಸ ಮಾಡಬೇಡಿ ಎಂದು ಹೇಳಿದರು.
ರಾಜ್ಯದಲ್ಲಿ ನಾಲ್ಕನೇ ಹಂತದ ಲಾಕ್‍ಡೌನ್ ಬಳಿಕ ಸೋಂಕಿತರ ಸಂಖ್ಯೆಯೂ ಅಧಿಕವಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿಯೂ ದ್ವಿಗುಣವಾಗಿದ್ದು, ಕೊರೋನದಿಂದ ಮೃತಪಡುತ್ತಿರುವವರ ಸಂಖ್ಯೆಯೂ ಅಧಿಕವಾಗಿದೆ. ಇದನ್ನು ನಿಯಂತ್ರಿಸಲು ಸರಕಾರ ಎಲ್ಲ ರೀತಿಯ ಸಿದ್ಧತೆ ಕೈಗೊಂಡಿದೆ. ಐಎಲ್‍ಐ ಹಾಗೂ ಜ್ವರದ ಪ್ರಕರಣಗಳನ್ನು ಗುರುತಿಸಿ ತಕ್ಷಣ ಚಿಕಿತ್ಸೆ ಕೊಡಿಸುವ ಕೆಲಸ ಮಾಡಲಾಗುತ್ತಿದೆ. ನಿಗಾ ವಹಿಸಿ ಕೆಲಸ ಮಾಡಲು ಕಾರ್ಯಪಡೆ ಮಾಡಲಾಗಿದೆ ಎಂದರು.
ರಾಜ್ಯದಲ್ಲಿ ಕೋವಿಡ್ 19 ಪ್ರಕರಣಗಳಷ್ಟೇ ಅಲ್ಲದೆ, ಮತ್ತಿತರೆ ಕಾಯಿಲೆಗಳಿಗೂ ಸರಕಾರಿ ವ್ಯವಸ್ಥೆಯಲ್ಲಿ ಚಿಕಿತ್ಸೆ ಸಿಗಬೇಕಿದೆ. ಹೀಗಾಗಿ, ಮುಂದಿನ ಒಂದೆರಡು ದಿನಗಳಲ್ಲಿ ಕೋವಿಡ್ ಹಾಗೂ ಕೋವಿಡ್‍ರಹಿತ ಪ್ರಕರಣಗಳನ್ನು ಖಾಸಗಿ ಆಸ್ಪತ್ರೆಗಳೊಂದಿಗೆ ಹೊಂದಿಸಿಕೊಂಡು ಕೆಲಸ ಮಾಡುವುದು ಹೇಗೆ ಎಂಬುದನ್ನು ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.