×
Ad

ಬೆಂಗಳೂರು: ನಗರದಲ್ಲಿ 35 ಹೊಸ ಕೊರೋನ ಪ್ರಕರಣಗಳು ದೃಢ

Update: 2020-06-15 22:14 IST

ಬೆಂಗಳೂರು, ಜೂ.15: ನಗರದ ಕಲಾಸಿಪಾಳ್ಯ ಪೊಲೀಸ್ ಠಾಣೆ ಮಹಿಳಾ ಕಾನ್‍ಸ್ಟೇಬಲ್, ರಾಜಾಜಿನಗರ ಇಎಸ್‍ಐ ಆಸ್ಪತ್ರೆ ಸಿಬ್ಬಂದಿ ಸೇರಿದಂತೆ ಸೋಮವಾರ 35 ಜನರಲ್ಲಿ ಕೊರೋನ ಸೋಂಕು ಪತ್ತೆಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ.

ಈವರೆಗೆ ನಗರದಲ್ಲಿ 725 ಕೊರೋನ ಸೋಂಕಿತರು ಪತ್ತೆಯಾಗಿದ್ದು, ಒಟ್ಟು 33 ರೋಗಿಗಳು ಮೃತಪಟ್ಟಿದ್ದಾರೆ. ಅಲ್ಲದೇ 17 ಜನರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಮವಾರ ಇಬ್ಬರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದು, ಇದುವರೆಗೆ 329 ಜನ ಮನೆಗೆ ಹೋಗಿದ್ದಾರೆ. ಇನ್ನು 362 ಕೊರೋನ ಸೋಂಕಿನ ಸಕ್ರಿಯ ಪ್ರಕರಣಗಳಿದ್ದು, ನಗರದ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿಗೆ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶದಿಂದ ಬಂದು ಕ್ವಾರಂಟೈನ್‍ನಲ್ಲಿದ್ದವರಲ್ಲಿ ಹೆಚ್ಚು ಕೊರೋನ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ ಸೋಂಕಿತರ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರಿಗೂ ಕೊರೋನ ತಗುಲಿದೆ. ಇನ್ನು ಕೆಲವರಿಗೆ ವಿಷಮಶೀತ ಜ್ವರ ಕಾಣಿಸಿಕೊಂಡಿದ್ದರಿಂದ(ಐಎಲ್‍ಐ) ಪರೀಕ್ಷೆ ಬಳಿಕ ಅವರಿಗೆ ಸೋಂಕು ದೃಡಪಟ್ಟಿದೆ. ಇನ್ನು ಕೆಲವರಿಗೆ ಹೊಸದಾಗಿ ಸೋಂಕು ತಗುಲಿದ್ದು, ಹೇಗೆ ಬಂತು ಎಂಬುದನ್ನು ವೈದ್ಯರು ಪತ್ತೆಹಚ್ಚುತ್ತಿದ್ದಾರೆ. ಅಲ್ಲದೇ ಅವರ ಜತೆ ಸಂಪರ್ಕ ಹೊಂದಿದವರನ್ನು ಬಿಬಿಎಂಪಿ ಅಧಿಕಾರಿಗಳು ಹಾಗೂ ವೈದ್ಯರು ಪತ್ತೆಹಚ್ಚಿ ಕ್ವಾರಂಟೈನ್ ಮಾಡುತ್ತಿದ್ದಾರೆ.

ಇಬ್ಬರು ಮೃತ

ಕೊರೋನ ಮಹಾಮಾರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಮಹಿಳಾ ಸೋಂಕಿತರು ಮೃತಪಟ್ಟಿದ್ದಾರೆ. ಇಬ್ಬರು ಸೋಂಕಿತರನ್ನು ನಗರದ ಸೆಂಟ್ ಫಿಲೋಮಿನಾ ಆಸ್ಪತ್ರೆಯಿಂದ ವಿಕ್ಟೋರಿಯಾಗೆ ವರ್ಗಾವಣೆ ಮಾಡಲಾಗಿತ್ತು. ಜೂ.13 ರಂದು 75 ವರ್ಷದ ಮಹಿಳಾ ಸೋಂಕಿತೆ ಮತ್ತು ಜೂ.14 ರಂದು 80 ವರ್ಷದ ಮತ್ತೋರ್ವ ಮಹಿಳೆಯನ್ನು ಚಿಕಿತ್ಸೆಗೆ ದಾಖಲಿಸಲಾಗಿತ್ತು. ಸೋಮವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ರಾಜಾಜಿನಗರಕ್ಕೂ ವಕ್ಕರಿಸಿದ ಕೊರೋನ

ರಾಜಾಜಿನಗರದಲ್ಲಿರುವ ಇಎಸ್‍ಐ ಆಸ್ಪತ್ರೆ ಸಿಬ್ಬಂದಿಯೊಬ್ಬರಿಗೆ ಕೊರೋನ ಸೋಂಕು ಕಾಣಿಸಿಕೊಂಡಿರುವುದರಿಂದ ಆಸ್ಪತ್ರೆ ಸುತ್ತಮುತ್ತಲ ಪ್ರದೇಶಗಳಲ್ಲಿ ಆತಂಕ ಎದುರಾಗಿದೆ. ಇಎಸ್‍ಐ ಆಸ್ಪತ್ರೆಯಲ್ಲಿ ಹೌಸ್‍ ಕೀಪಿಂಗ್ ಕೆಲಸ ಮಾಡುತ್ತಿದ್ದ ಮಹಿಳೆಗೆ ಕೊರೋನ ಸೋಂಕು ತಗುಲಿದೆ. ಹೌಸ್‍ಕೀಪಿಂಗ್ ಕೆಲಸ ಮಾಡುತ್ತಿದ್ದ ಮಹಿಳೆಗೆ ಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಆಕೆಯ ಗಂಟಲ ದ್ರವ ಪರೀಕ್ಷೆ ನಡೆಸಿದಾಗ ಕೊರೋನ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಕೂಡಲೇ ಮಹಿಳೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಆಕೆಯ ಜತೆ ಸಂಪರ್ಕ ಇದ್ದವರ ಪತ್ತೆಗೆ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಮಹಿಳಾ ಕಾನ್‍ಸ್ಟೇಬಲ್‍ ಗೂ ಕೊರೋನ

ಕಲಾಸಿಪಾಳ್ಯ ಪೊಲೀಸ್ ಠಾಣೆಯ ಒಳಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಕಾನ್‍ಸ್ಟೇಬಲ್‍ಗೆ ಕೊರೋನ ಸೋಂಕು ತಗಲಿರುವುದಾಗಿ ದೃಡಪಟ್ಟಿದೆ. ದೊಡ್ಡ ಮಾವಳ್ಳಿಯ ಚಾಮರಾಜಪೇಟೆಯಲ್ಲಿರುವ ಪಿಜಿಯೊಂದರಲ್ಲಿ ವಾಸವಾಗಿದ್ದ ಮಹಿಳಾ ಕಾನ್‍ಸ್ಟೇಬಲ್‍ಗೆ ಇತ್ತೀಚೆಗೆ ರ‍್ಯಾಂಡಮ್ ಪರೀಕ್ಷೆ ಮಾಡಲಾಗಿತ್ತು. ಬಳಿಕ ಮೂರು ದಿನಗಳಿಂದ ರಜೆ ಪಡೆದು ಪಿಜಿಯಲ್ಲಿ ಉಳಿದುಕೊಂಡಿದ್ದರು. ಸೋಮವಾರ ಪರೀಕ್ಷೆಯ ವರದಿ ಬಂದಿದ್ದು ಕೊರೋನ ಸೋಂಕು ತಗುಲಿರುವುದು ದೃಡಪಟ್ಟಿದೆ. ಹೀಗಾಗಿ ಠಾಣೆಯನ್ನು ಸೀಲ್‍ಡೌನ್ ಮಾಡಿ, ಸ್ಯಾನಿಟೈಸ್ ಮಾಡಲಾಗಿದೆ. ಅವರ ಜತೆಗೆ ಸಂಪರ್ಕ ಹೊಂದಿದವರನ್ನು ಕ್ವಾರಂಟೈನ್ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News