ಕೃಷಿ ಸಾಲಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ
Update: 2020-06-15 23:27 IST
ಬೆಂಗಳೂರು, ಜೂ.15: ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸುವಂತೆ ರಾಜ್ಯ ಸರಕಾರವನ್ನು ಆಗ್ರಹಿಸಿ ರಾಜ್ಯ-ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಆನಂದ್ ರಾವ್ ವೃತ್ತದ ಮಹಾತ್ಮಗಾಂಧಿ ಪ್ರತಿಮೆ ಮುಂಭಾಗ ಕೊರೋನ ಸೋಂಕು ಹಿನ್ನೆಲೆಯಲ್ಲಿ ಸುರಕ್ಷಿತ ಅಂತರ ಕಾಯ್ದುಕೊಂಡು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಹಾಗೂ ರೈತರು ರೈತರ ಬೇಡಿಕೆಗಳಿಗೆ ಸರಕಾರ ಸ್ಪಂದಿಸದಿದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.
ರೈತರಿಗೆ ಬಡ್ಡಿ ಇಲ್ಲದೆ ಪಹಣಿ ಆಧಾರದ ಮೇಲೆ 3 ಲಕ್ಷ ರೂ. ಕೃಷಿ ಸಾಲ ಹಾಗೂ ಚಿನ್ನದ ಮೇಲಿನ ಸಾಲಸೌಲಭ್ಯವನ್ನು ರದ್ದುಪಡಿಸದೆ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ವಿದ್ಯಾವಂತ ನಿರುದ್ಯೋಗಿಗಳಿಗೆ ಆಯಾ ಭಾಗದಲ್ಲಿ ಸ್ವಯಂ ಉದ್ಯೋಗ ಅವಕಾಶಕಲ್ಪಿಸಿ ಸಾಲ ಸೌಲಭ್ಯ ಒದಗಿಸಬೇಕು. ಸಾವಯವ ಕೃಷಿ ಪದ್ಧತಿಯನ್ನು ಅನುಷ್ಠಾನಗೊಳಿಸಲು ನೆರವು, ಬೆಂಬಲ ಬೆಲೆ ಹೆಚ್ಚಳ, ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ರೈತರು ಆಗ್ರಹಿಸಿದರು.