ಈ ವರ್ಷ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನವಿಲ್ಲ: ಸಚಿವ ನಾರಾಯಣಗೌಡ

Update: 2020-06-15 17:58 GMT

ಬೆಂಗಳೂರು, ಜೂ.15: ಕೊರೋನ ವೈರಸ್‍ನ ಕರಿನೆರಳು ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನದ ಮೇಲೂ ಬಿದ್ದಿದೆ. ತೋಟಗಾರಿಕೆ ಇಲಾಖೆ ಸಚಿವ ನಾರಾಯಣಗೌಡ ಫಲಪುಷ್ಪ ಪ್ರದರ್ಶನ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಲಾಲ್‍ಬಾಗ್‍ನ ಫಲಪುಷ್ಪ ಪ್ರದರ್ಶನಕ್ಕೆ ಶತಮಾನದ ಇತಿಹಾಸವಿದೆ. ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವದಂದು ಪ್ರತಿ ವರ್ಷ ಪ್ರದರ್ಶನ ನಡೆಯುತ್ತದೆ. ಆದರೆ ಈ ಬಾರಿ ಆಗಸ್ಟ್ ನಲ್ಲಿ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ನಡೆಯುತ್ತಿಲ್ಲ.

ವರ್ಷಕ್ಕೆ ಎರಡು ಬಾರಿ ಪ್ರದರ್ಶನ ನಡೆದರೂ ಪ್ರತಿ ಬಾರಿಯೂ ಹೊಸತನದೊಂದಿಗೆ ಲಕ್ಷಾಂತರ ಮಂದಿ ಪುಷ್ಪ ಪ್ರೇಮಿಗಳನ್ನು ಸೆಳೆಯುವುದರ ಜತೆಗೆ ದೇಶ, ವಿದೇಶಗಳ ಜನರನ್ನೂ ಆಕರ್ಷಿಸುವುದು ಇದರ ವಿಶೇಷ. ಇದಕ್ಕಾಗಿ ಎರಡು-ಮೂರು ತಿಂಗಳ ಕಾಲ ಅಧಿಕಾರಿಗಳು, ನೂರಾರು ಸಿಬ್ಬಂದಿ ಹಗಲಿರುಳು ಶ್ರಮವಹಿಸಿ ಕೆಲಸ ಮಾಡುತ್ತಿದ್ದರು. ದೇಶದ ನಾನಾ ಭಾಗಗಳಿಂದ ಜೀವಂತ ಹೂಗಳನ್ನು ತರಿಸುತ್ತಿದ್ದರು. ಸುಮಾರು ಒಂದು ಕೋಟಿ ರೂ.ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದರು.

ಲಾಲ್‍ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಲಕ್ಷಾಂತರ ಮಂದಿ ಆಗಮಿಸುತ್ತಾರೆ. ಕೊರೋನ ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಪ್ರದರ್ಶನ ಆಯೋಜಿಸುವುದು ಕಷ್ಟ. ಹೀಗಾಗಿ ಈ ಬಾರಿ ಪ್ರದರ್ಶನ ನಡೆಸುವುದಿಲ್ಲ ಎಂದು ರಾಜ್ಯ ತೋಟಗಾರಿಕಾ ಸಚಿವ ನಾರಾಯಣಗೌಡ ಸ್ಪಷ್ಟನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News