ಬಳಕೆದಾರರಿಗಾಗಿ ಹೊಸ ವರ್ಚುವಲ್ ಜಗತ್ತು ಸೃಷ್ಟಿಸಿದ Hike

Update: 2020-06-17 09:05 GMT

ಮುಂಬೈ: ಹೈಕ್ ಮೆಸೆಂಜರ್ ಸಂಸ್ಥೆ ಇಂದು ತನ್ನ ಹೊಸ ಇನ್-ಆ್ಯಪ್ ಪ್ಲಾಟ್‍ ಫಾರ್ಮ್ ‘ಹೈಕ್‍ ಲ್ಯಾಂಡ್' ಆರಂಭಿಸುವುದಾಗಿ ಘೋಷಿಸಿದೆ.

ಹೈಕ್‍ ಲ್ಯಾಂಡ್ ಒಂದು ವರ್ಚುವಲ್ ಜಗತ್ತಾಗಿದ್ದು, ಇಲ್ಲಿ ಹೈಕ್ ಖಾತೆಯ ಬಳಕೆದಾರರು ತಮ್ಮದೇ ಆದ ವರ್ಚುವಲ್ ರೂಂ (ಕೋಣೆ)ನಲ್ಲಿ ಸ್ನೇಹಿತರನ್ನು ಆಹ್ವಾನಿಸಿ ಸಂಭಾಷಣೆ ನಡೆಸಬಹುದು. ಜತೆಯಾಗಿ ವೀಡಿಯೋ ವೀಕ್ಷಿಸಬಹುದು ಹಾಗೂ ಹೊಸ ಸ್ನೇಹಿತರನ್ನೂ ಸಂಪಾದಿಸಬಹುದಾಗಿದೆ.

ಹೈಕ್ ಆ್ಯಪ್ ನಲ್ಲಿರುವ  ಗ್ಲೋಬಲ್ ಐಕಾನ್ ಟ್ಯಾಪ್ ಮಾಡುವ ಮೂಲಕ  ಈ ಹೈಕ್‍ ಲ್ಯಾಂಡ್  ಜತೆ ಸಂಪರ್ಕ ಸಾಧಿಸಬಹುದಾಗಿದೆ. ಬಳಕೆದಾರರು ಹೈಕ್ ಸ್ಟಿಕ್ಕರ್ ಚಾಟ್‍ ನ ಲೇಟೆಸ್ಟ್ ವರ್ಷನ್‍ ಗೆ ಅಪ್ಡೇಟ್ ಮಾಡುವುದು ಅಗತ್ಯವಾಗಿದೆ ಹಾಗೂ ಹೈಕ್‍ಲ್ಯಾಂಡ್ ಐಒಎಸ್ ಹಾಗೂ ಆಂಡ್ರಾಯ್ಡ್ ಫೋನ್‍ಗಳಲ್ಲಿಯೂ ಲಭ್ಯವಿದೆ.

ಆರಂಭಿಕವಾಗಿ ಹೈಕ್ ಎರಡು ವರ್ಚುವಲ್ ವಾತಾವರಣ ಒದಗಿಸುತ್ತದೆ-ಹೋಂ ಮತ್ತು ಬಿಗ್ ಸ್ಕ್ರೀನ್.

ಹೋಂ ವರ್ಚುವಲ್ ಜಗತ್ತಿನಲ್ಲಿ ಬಳಕೆದಾರರು ತಮ್ಮ ಸ್ನೇಹಿತರನ್ನೂ ಆಹ್ವಾನಿಸಿ ಜತೆಯಾಗಿ ವೀಡಿಯೋ ವೀಕ್ಷಿಸಬಹುದಾಗಿದೆ. ಸದ್ಯಕ್ಕೆ ಈ ವೀಡಿಯೋಗಳನ್ನು ಯುಟ್ಯೂಬ್‍ಗಳಿಂದ ಪಡೆಯಲಾಗುತ್ತದೆ. ಹೋಂ ವರ್ಚುವಲ್ ವಾತಾವರಣದಲ್ಲಿ ಬಳಕೆದಾರರಿಗೆ ಹೆಚ್ಚು ಖಾಸಗಿತನವಿರುತ್ತದೆ ಹಾಗೂ ಅವರ ಆಹ್ವಾನವಿಲ್ಲದೆ ಇತರರು ಪ್ರವೇಶಿಸುವಂತಿಲ್ಲವಾಗಿದೆ.

ಎರಡನೇ ವರ್ಚುವಲ್ ಜಗತ್ತು - ಬಿಗ್ ಸ್ಕ್ರೀನ್ ಒಂದು ಮಿನಿ ಥಿಯೇಟರ್ ನಂತಿದ್ದು ಇಲ್ಲಿ ಬಳಕೆದಾರರು ಇತರ ಜನರೊಂದಿಗೆ ವೀಡಿಯೋ ವೀಕ್ಷಿಸಬಹುದಾಗಿದೆ. ಆರಂಭಿಕವಾಗಿ ಯುಟ್ಯೂಬ್‍ನಲ್ಲಿರುವ ವಿವಿಧ ವೀಡಿಯೋಗಳು ಬಿಗ್ ಸ್ಕ್ರೀನ್‍ನಲ್ಲಿ ಲಭ್ಯವಾಗಲಿವೆ. ಈ ವೀಡಿಯೋಗಳು ದಿನದ 24 ಗಂಟೆಯೂ ಲಭ್ಯವಿರಲಿದೆ. ಥಿಯೇಟರ್‍ ನಲ್ಲಿರುವ ಇತರರಿಗೆ ಬಳಕೆದಾರ ಪಿಂಗ್ ಮಾಡಬಹುದು. ಒಂದು ಸಂದೇಶದ ನಂತರ ಇನ್ನೊಬ್ಬ ವ್ಯಕ್ತಿ ಪ್ರತಿಕ್ರಿಯಿಸಿದಲ್ಲಿ ಅವರು ಮತ್ತೆ ಪರಸ್ಪರ ಸಂವಹನದಲ್ಲಿ ತೊಡಗಬಹುದು.

ಹೈಕ್‍ ಲ್ಯಾಂಡ್ ಒಂದು ದೇಶೀಯ ಉತ್ಪನ್ನವಾಗಿದ್ದು, ಇದು ಮೊಬೈಲ್ ಫಸ್ಟ್/ಮೊಬೈಲ್ ಓನ್ಲಿ ವೀಕ್ಷಕರನ್ನು ಗುರಿಯಾಗಿಸಿದೆ ಎಂದು ಹೈಕ್ ಸ್ಥಾಪಕ ಹಾಗೂ ಸಿಇಒ ಕವಿನ್ ಭಾರ್ತಿ ಮಿತ್ತಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News