ವಿಧಾನಪರಿಷತ್ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಗಳಾಗಿ ಬಿ.ಕೆ.ಹರಿಪ್ರಸಾದ್, ನಸೀರ್ ಅಹ್ಮದ್ ಆಯ್ಕೆ
Update: 2020-06-17 16:18 IST
ಬೆಂಗಳೂರು, ಜೂ.17: ವಿಧಾನಸಭೆಯಿಂದ ವಿಧಾನಪರಿಷತ್ತಿನ 7 ಸ್ಥಾನಗಳಿಗೆ ಜೂ.29ರಂದು ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾಗಿ ಬಿ.ಕೆ.ಹರಿಪ್ರಸಾದ್ ಹಾಗೂ ನಸೀರ್ ಅಹ್ಮದ್‍ರನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಆಯ್ಕೆ ಮಾಡಿದ್ದಾರೆ.
ಬಿ.ಕೆ.ಹರಿಪ್ರಸಾದ್ ಅವರ ರಾಜ್ಯಸಭೆ ಸದಸ್ಯತ್ವದ ಅವಧಿ ಇತ್ತೀಚೆಗಷ್ಟೆ ಪೂರ್ಣಗೊಂಡಿತ್ತು. ಇದೀಗ ಅವರನ್ನು ವಿಧಾನಪರಿಷತ್ತಿಗೆ ಆಯ್ಕೆ ಮಾಡಲು ಸೋನಿಯಾಗಾಂಧಿ ಹಸಿರು ನಿಶಾನೆ ತೋರಿದ್ದಾರೆ. ಜೊತೆಗೆ, ಮಾಜಿ ಸಚಿವ ಹಾಗೂ ಹಾಲಿ ವಿಧಾನಪರಿಷತ್ತಿನ ಸದಸ್ಯರಾಗಿರುವ ನಸೀರ್ ಅಹ್ಮದ್, ಮತ್ತೊಂದು ಅವಧಿಗೆ ಮುಂದುವರೆಯಲು ಟಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜೂ.18ರಂದು ಬೆಳಗ್ಗೆ 9 ಗಂಟೆಗೆ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಶಾಸಕಾಂಗ ಪಕ್ಷದ ಸಭೆಯನ್ನು ಕರೆದಿದ್ದು, ಆನಂತರ ಕಾಂಗ್ರೆಸ್ ಅಭ್ಯರ್ಥಿಗಳು ವಿಧಾನಸೌಧಕ್ಕೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ.