ಕೃಷಿ ಅಭಿವೃದ್ಧಿಗೆ ಎರೆಹುಳು ಗೊಬ್ಬರ ಪೂರಕ: ಸಚಿವ ಆರ್.ಅಶೋಕ್

Update: 2020-06-17 16:30 GMT

ಬೆಂಗಳೂರು, ಜೂ.17: ಎರೆಹುಳು ಗೊಬ್ಬರವು ಕೃಷಿ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಅಭಿಪ್ರಾಯಪಟ್ಟರು. 

ಪದ್ಮನಾಭನಗರದ ಯಡಿಯೂರು ವಾರ್ಡ್‍ನ ಸೌತ್ ಎಂಡ್ ವೃತ್ತದ ಬಳಿ ಇರುವ ಚಂದವಳ್ಳಿ ತೋಟದಲ್ಲಿ ಎರೆಹುಳು ಘಟಕವನ್ನು ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿದಿನ ಲಭ್ಯವಾಗುವ ಒಣ ಕಸದಿಂದ ಆರಂಭವಾಗಿರುವ ಎರೆಹುಳು ಘಟಕವು ಸ್ಥಳೀಯ ನಾಗರಿಕರಿಗೆ, ರೈತರಿಗೆ ಅನುಕೂಲವಾಗಲಿದೆ. ಮನೆಯ ಮುಂದೆ ಗಿಡಮರಗಳನ್ನು ಹೊಂದಿರುವ ನಾಗರಿಕರು ಮತ್ತು ರೈತರಿಗೆ ಎರೆಹುಳು ಗೊಬ್ಬರವನ್ನು ಕೆಜಿಗೆ ಕೇವಲ 40 ರೂ.ನಂತೆ ನೀಡಲಾಗುವುದು. ಇದರಿಂದ ಕಸದ ಸಮಸ್ಯೆ ಬಗೆಹರಿಯುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೇಯರ್ ಗೌತಮ್ ಕುಮಾರ್ ಮಾತನಾಡಿ, ಎರೆಹುಳು ಘಟಕವನ್ನು ಪ್ರತಿ ವಾರ್ಡ್‍ನಲ್ಲಿ ಆರಂಭಿಸಲಾಗುವುದು, ಇದರಿಂದ ನಗರದ ಸ್ವಚ್ಛತೆ ಹೆಚ್ಚಲಿದೆ. ಜೊತೆಗೆ ಹಸಿ ಕಸಮ ಒಣ ಕಸದಿಂದ ಗೊಬ್ಬರ ತಯಾರಿಕಾ ಘಟಕಗಳನ್ನು 110 ವಾರ್ಡ್‍ಗಳಿಗೆ ವಿಸ್ತರಿಸಲಾಗುವುದು ಎಂದು ಹೇಳಿದರು.

ಎರೆಹುಳುವನ್ನು ರೈತ ಮಿತ್ರ ಎಂದು ಕರೆಯುತ್ತಾರೆ. ರೈತನ ರೀತಿ ಭೂಮಿಯಲ್ಲಿ ಸದಾ ಕ್ರಿಯಾಶೀಲವಾಗಿರುತ್ತದೆ. ರಾಸಾಯನಿಕದಿಂದ ಮುಕ್ತಗೊಳಿಸಿ ಭೂಮಿಯನ್ನು ಫಲವತ್ತುಗೊಳಿಸುತ್ತದೆ ಎಂದರು. 

ಈ ವೇಳೆ ಮಾಜಿ ಪಾಲಿಕೆ ಸದಸ್ಯ ಎನ್.ಆರ್. ರಮೇಶ್, ಸಂಸದ ತೇಜಸ್ವಿ ಸೂರ್ಯ, ಪಾಲಿಕೆ ಆಯುಕ್ತ ಬಿ.ಎಚ್. ಅನಿಲ್ ಕುಮಾರ್, ಬಿಜೆಪಿ ದಕ್ಷಿಣ ಲೋಕಸಭಾ ಅಧ್ಯಕ್ಷ ಎನ್.ಆರ್. ಲಕ್ಷ್ಮೀನಾರಾಯಣ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News