×
Ad

ಅತಿಥಿ ಶಿಕ್ಷಕರು-ಉಪನ್ಯಾಸಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಲು ಎಐಡಿವೈಓ ಒತ್ತಾಯ

Update: 2020-06-17 22:53 IST

ಬೆಂಗಳೂರು, ಜೂ. 17: ಕೊರೋನ ಸೋಂಕಿನ ಸಂಕಷ್ಟದಿಂದ ಅಸಹಾಯಕ ಸ್ಥಿತಿಯಲ್ಲಿರುವ ಅತಿಥಿ ಶಿಕ್ಷಕರು, ಅತಿಥಿ ಉಪನ್ಯಾಸಕರಿಗೆ ಕೂಡಲೇ ರಾಜ್ಯ ಸರಕಾರವು ವಿಶೇಷ ಅನುದಾನ ಘೋಷಿಸಬೇಕು ಹಾಗೂ ಬಾಕಿರುವ ಹಣವನ್ನು ಒಂದೇ ಬಾರಿಗೆ ಪಾವತಿಸಬೇಕು ಎಂದು ಎಐಡಿವೈಓ ಆಗ್ರಹಿಸಿದೆ.

ವಿವಿಧ ಕ್ಷೇತ್ರಗಳಿಗೆ ಸರಕಾರವು ಪರಿಹಾರವನ್ನು ನೀಡಿರುವಂತೆ, ಅತಿಥಿ ಉಪನ್ಯಾಸಕರು ಮತ್ತು ಅತಿಥಿ ಶಿಕ್ಷಕ ವೃಂದದವರಿಗೂ ಕನಿಷ್ಠ ಪಕ್ಷ ಒಂದು ಬಾರಿಯ ಪರಿಹಾರ ಪ್ಯಾಕೇಜ್‍ನ್ನು ಘೋಷಿಸಬೇಕು. ಖಾಲಿ ಇರುವ ಹುದ್ದೆಗಳಿಗೆ ಶಿಕ್ಷಕರು ಮತ್ತು ಉಪನ್ಯಾಸಕರನ್ನು ನೇಮಿಸುವ ಪ್ರಕ್ರಿಯೆಯನ್ನು ಕೂಡಲೆ ನಡೆಸಬೇಕು.

ರಾಜ್ಯದಲ್ಲಿರುವ 413 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 14,564 ಅತಿಥಿ ಉಪನ್ಯಾಸಕರು ದುಡಿಯುತ್ತಿದ್ದಾರೆ. 2019ರ ಜುಲೈನಲ್ಲಿ, 10 ಮತ್ತು 12ನೆ ತರಗತಿಗಳಿಗೆ ಪಾಠ ಮಾಡಲು 22,150 ಅತಿಥಿ ಶಿಕ್ಷಕರ ಅಗತ್ಯವನ್ನು ತೋರಿಸಿ, ನೇಮಕಾತಿ ಮಾಡಿಕೊಳ್ಳಲಾಗಿತ್ತು. ಇನ್ನು ನಿರ್ದಿಷ್ಠವಾಗಿ ವಿವಿಧ ಹಂತಗಳ ಶಿಕ್ಷಣದಲ್ಲಿ ಎಷ್ಟೆಷ್ಟು ಮಂದಿ ಅತಿಥಿ ಶಿಕ್ಷಕರರಾಗಿ ದುಡಿಯುತ್ತಿದ್ದಾರೆಂಬ ನಿಖರ ಮಾಹಿತಿ ಲಭ್ಯವಿಲ್ಲ. ಈಗಂತೂ, ತಮ್ಮ ಕೈಯಿಂದಲೇ ಖರ್ಚನ್ನು ಭರಿಸುತ್ತಾ, ಆನ್‍ಲೈನ್ ತರಗತಿಗಳನ್ನೂ ಅವರು ನಿಭಾಯಿಸುತ್ತಿದ್ದಾರೆ. ಕೆಲವರಂತೂ 20-25ವರ್ಷಗಳಿಂದ ನಿರಂತರವಾಗಿ ಅತಿಥಿಗಳಾಗಿಯೇ ಸೇವೆ ಸಲ್ಲಿಸುತ್ತಿದ್ದಾರೆ. 2019ರ ಜನವರಿಯಲ್ಲಿ ಯುಜಿಸಿ ಸುತ್ತೋಲೆಯೊಂದನ್ನು ಹೊರಡಿಸಿ, ಅತಿಥಿ ಉಪನ್ಯಾಸಕರಿಗೆ ದಿನಕ್ಕೆ 1,500 ರೂ. ಅಥವಾ ಮಾಸಿಕ 50 ಸಾವಿರ ರೂ.ವೇತನವನ್ನು ನಿಗದಿ ಮಾಡಬೇಕು ಎಂದು ನಿರ್ದೇಶನ ನೀಡಿತ್ತು.
ಆದರೆ, ಇಂದಿಗೂ ನಮ್ಮ ರಾಜ್ಯದಲ್ಲಿ ಅತಿಥಿ ಉಪನ್ಯಾಸಕರಿಗೆ ಮಾಸಿಕ 18 ಸಾವಿರ ರೂ. ಮತ್ತು ಅತಿಥಿ ಶಿಕ್ಷಕರಿಗೆ ಮಾಸಿಕ ರೂ 7,500ರೂ.ದೊರಕುತ್ತಿದೆ. ಸರರ್ಕಾರ ಕೊಡುವ ಕಡಿಮೆ `ಗೌರವ ಧನ'ಕ್ಕಾಗಿ ಪ್ರಾಮಾಣಿಕವಾಗಿ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಅವರೆಲ್ಲರ ಬದುಕು ಅತ್ಯಂತ ಅತಂತ್ರವಾಗಿದೆ. ಏಕೆಂದರೆ, 4-5 ತಿಂಗಳುಗಳಿಂದ ಅವರಿಗೆ ವೇತನ ಬಂದಿಲ್ಲ. ಕೆಲವರಿಗಂತೂ 10 ತಿಂಗಳಿನಿಂದ ವೇತನ ದೊರಕಿಲ್ಲ ಎಂದು ಆರೋಪಿಸಲಾಗಿದೆ.

ಕೋವಿಡ್‍ನಿಂದಾಗಿನ ಲಾಕ್‍ಡೌನ್ ಅತಿಥಿ ಉಪನ್ಯಾಸಕರು/ಅತಿಥಿ ಶಿಕ್ಷಕರ ಸಮಸ್ಯೆಗಳನ್ನು ಉಲ್ಬಣಗೊಳಿಸಿತು. ಇವತ್ತಿನ ಬೆಲೆ ಏರಿಕೆಯ ಪರಿಸ್ಥಿತಿಯಲ್ಲಿ ಅವರಿಗೆ ನೀಡಲಾಗುತ್ತಿರುವ ಸಂಬಳವು ಯಾವ ಮೂಲೆಗೂ ಸಾಕಾಗುವುದಿಲ್ಲ. ಹಿಂದಿನಿಂದಲೂ ಸರಕಾರಗಳು ಇವರಿಗೆ ವೇತನದಲ್ಲಿ ತಾರತಮ್ಯ ಮಾಡುತ್ತಾ ಬಂದಿವೆ. ಸಂಬಳವು ಸರಿಯಾದ ಸಮಯಕ್ಕೆ ಬರುವುದಿಲ್ಲ ಎನ್ನುವುದು ಅವರು ಎಲ್ಲ ಕಾಲದಲ್ಲೂ ಸಂಕಷ್ಟದಲ್ಲೆ ಇದ್ದಾರೆ.

ಅತಿಥಿ ಶಿಕ್ಷಕ/ಉಪನ್ಯಾಸಕರಾಗಿಯೇ ಯಾವುದೇ ಜೀವನ ಭದ್ರತೆ ಇಲ್ಲದೇ ಮುಂದಿನ ಭವಿಷ್ಯದ ಬಗ್ಗೆ ಆತಂಕದಲ್ಲಿದ್ದಾರೆ. ಇತ್ತೀಚಿಗೆ, ಒಂದು ತಿಂಗಳಿನಲ್ಲಿ, ಮಂಡ್ಯ ಜಿಲ್ಲೆಯ ಮಳವಳ್ಳಿ ಪದವಿ ಕಾಲೇಜಿನ ಇಬ್ಬರು ಅತಿಥಿ ಉಪನ್ಯಾಸಕರು ಆರ್ಥಿಕ ಮುಗ್ಗಟ್ಟಿನಿಂದ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೀಗಾಗಿ ಕೂಡಲೇ ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಎಐಡಿವೈಓ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News