ಲಡಾಖ್ ಗಡಿಯಲ್ಲಿನ ಉದ್ವಿಘ್ನ ಪರಿಸ್ಥಿತಿಯನ್ನು ತಿಳಿಗೊಳಿಸಬೇಕು: ಸಿಪಿಎಂ

Update: 2020-06-17 17:29 GMT

ಬೆಂಗಳೂರು, ಜೂ.17: ಲಡಾಖ್‍ನಲ್ಲಿನ ವಾಸ್ತವ ಹತೋಟಿ ರೇಖೆಯಲ್ಲಿನ ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಕ್ರಿಯೆಯು ಎರಡೂ ಕಡೆಗಳಿಂದ ನಡೆದಿತ್ತು. ಈ ವೇಳೆಯಲ್ಲಿಯೆ ಗಾಲ್ವಾನ್ ಕಣಿವೆಯಲ್ಲಿ ಒಂದು ಘರ್ಷಣೆ ನಡೆದಿರುವುದು ದುರದೃಷ್ಟಕರ ವಿಚಾರವಾಗಿದೆ ಎಂದು ಸಿಪಿಎಂ ರಾಜ್ಯ ಸಮಿತಿ ಹೇಳಿದೆ.

ಕಳೆದ ಜೂ.6ರಂದು ಇಂತಹ ಘರ್ಷಣೆಯನ್ನು ತಪ್ಪಿಸುವ ಪ್ರಕ್ರಿಯೆಯನ್ನು ಚರ್ಚಿಸಲು ಎರಡೂ ದೇಶಗಳ ಕಡೆಯಿಂದ ಉನ್ನತ ಮಟ್ಟದಲ್ಲಿ ಮಿಲಿಟರಿ ಮಾತುಕತೆಗಳು ಆರಂಭವಾದ ನಂತರ ಈ ದುರ್ಘಟನೆ ನಡೆದಿದೆ. ಎರಡೂ ಕಡೆಗಳಿಂದ ಸಾವು-ನೋವುಗಳು ವರದಿಯಾಗಿವೆ. ಒಬ್ಬ ಭಾರತೀಯ ಅಧಿಕಾರಿ ಮತ್ತು ಹಲವು ಸೈನಿಕರು ಸಾವಿಗೀಡಾಗಿರುವ ಬಗ್ಗೆ ಸಿಪಿಎಂ ರಾಜ್ಯ ಸಮಿತಿ, ಆಳವಾದ ಸಂತಾಪವನ್ನು ವ್ಯಕ್ತಪಡಿಸಿದೆ.

ಈ ಸ್ಥಳದಲ್ಲಿ ಎರಡೂ ಕಡೆಯ ಮಿಲಿಟರಿ ಅಧಿಕಾರಿಗಳು ಪರಿಸ್ಥಿತಿಯನ್ನು ಶಮನ ಮಾಡಲು ಸಭೆ ನಡೆಸುತ್ತಿದ್ದಾರೆ ಎಂಬ ಭಾರತೀಯ ಸೇನೆಯ ಹೇಳಿಕೆ ಶಾಂತಿಯ ಕೈಮೇಲಾಗುತ್ತದೆ ಎಂಬುದನ್ನು ಖಾತ್ರಿ ಪಡಿಸಬೇಕು. ನಿಜವಾಗಿ ಏನು ನಡೆಯಿತು ಎಂಬುದರ ಬಗ್ಗೆ, ಭಾರತ ಸರಕಾರ ಒಂದು ಅಧಿಕೃತ ಹೇಳಿಕೆಯನ್ನು ಪ್ರಕಟಿಸಬೇಕಾಗಿದೆ. ಪರಿಸ್ಥಿತಿಯನ್ನು ತಿಳಿಗೊಳಿಸಲು ಮತ್ತು ಗಡಿಯಲ್ಲಿ ಶಾಂತಿ ಹಾಗೂ ಪ್ರಶಾಂತತೆಯನ್ನು ಕಾಯ್ದುಕೊಳ್ಳುವ ಬಗ್ಗೆ ಒಂದು ಪರಸ್ಪರ ಒಪ್ಪಿಗೆಯಾದ, ತಿಳುವಳಿಕೆಯ ಆಧಾರದಲ್ಲಿ ಘರ್ಷಣೆಯನ್ನು ತಪ್ಪಿಸುವ ಪ್ರಕ್ರಿಯೆಯನ್ನು ಮುಂದುವರೆಸಲು ಎರಡೂ ದೇಶಗಳು ತಕ್ಷಣವೇ ಉನ್ನತ ಮಾತುಕತೆಗಳನ್ನು ಆರಂಭಿಸುವುದು ಅಗತ್ಯವಾಗಿದೆ ಎಂದು ಸಿಪಿಎಂ ರಾಜ್ಯ ಸಮಿತಿ ಪುನರುಚ್ಚರಿಸಿದ್ದು, ಕೇಂದ್ರ ಸರಕಾರ ಈ ಕುರಿತು ಸೂಕ್ತ ಕ್ರಮ ವಹಿಸುವಂತೆ ಆಗ್ರಹಿಸಿದೆ ಎಂದು ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News