ಕೈಗಳು ಮತ್ತು ಪಾದಗಳು ಜುಮುಗುಡುತ್ತವೆಯೇ?: ಈ ಮನೆಮದ್ದುಗಳನ್ನು ಮಾಡಿ ನೋಡಿ

Update: 2020-06-17 18:11 GMT

ನಾವು ಬಹಳ ಹೊತ್ತು ಕುಳಿತುಕೊಂಡೇ ಇದ್ದು ಎದ್ದೇಳುವ ಸಂದರ್ಭದಲ್ಲಿ ಕೆಲವೊಮ್ಮೆ ಪಾದಗಳಲ್ಲಿ ಜುಮುಗುಡುವಿಕೆಯ ಅನುಭವವಾಗುತ್ತದೆ. ಜುಮುಗುಡುವಿಕೆ ಕೈಗಳಲ್ಲಿಯೂ ಉಂಟಾಗುತ್ತದೆ. ಇದು ಸಾಮಾನ್ಯವಾಗಿದ್ದು,ಇದಕ್ಕೆ ವೈದ್ಯಕೀಯ ಭಾಷೆಯಲ್ಲಿ ಪ್ಯಾರಾಸ್ಥೇಸಿಯಾ ಎಂದು ಕರೆಯುತ್ತಾರೆ. ಹೀಗೆ ಜುಮುಗುಡುವಿಕೆಯು ಸಾಮಾನ್ಯ ವಿದ್ಯಮಾನವಾಗಿದ್ದರೂ ವಿಪರೀತವಾಗಿ ಅನುಭವವಾಗುತ್ತಿದ್ದರೆ ಅದು ಬೇರೆ ಯಾವುದೋ ಅನಾರೋಗ್ಯವನ್ನು ಸೂಚಿಸಬಹುದು. ಹೀಗಾಗಿ ಇಂತಹ ಸಂದರ್ಭಗಳಲ್ಲಿ ಶಂಕೆಗಳನ್ನು ನಿವಾರಿಸಿಕೊಳ್ಳಲು ವೈದ್ಯರನ್ನು ಭೇಟಿಯಾಗಬೇಕು. ಸಾಮಾನ್ಯ ಜುಮುಗುಡುವಿಕೆಗೆ ಮನೆಮದ್ದುಗಳನ್ನು ಮಾಡಬಹುದು. ಪಾದಗಳ ಮತ್ತು ಕೈಗಳ ಜುಮುಗುಡುವಿಕೆಯಿಂದ ಮುಕ್ತಿ ನೀಡುವ ಐದು ಪರಿಣಾಮಕಾರಿ ಮನೆಮದ್ದುಗಳ ಬಗ್ಗೆ ಮಾಹಿತಿಯಿಲ್ಲಿದೆ....

* ಲ್ಯಾವೆಂಡರ್ ಸಾರಭೂತ ತೈಲವನ್ನು ಬಳಸಿ

 ಜುಮುಗುಡುವಿಕೆ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಎಸೆನ್ಶಿಯಲ್ ಆಯಿಲ್‌ಗಳು ಅಥವಾ ಸಾರಭೂತ ತೈಲಗಳು ತುಂಬ ಪರಿಣಾಮಕಾರಿಯಾಗಿವೆ. ಪ್ಯಾರಾಸ್ಥೇಸಿಯಾಕ್ಕೆ ಚಿಕಿತ್ಸೆ ನೀಡಲು ಲ್ಯಾವೆಂಡರ್ ತೈಲವು ಅತ್ಯುತ್ತಮ ಆಯ್ಕೆಯಾಗಿದೆ. ಅದು ಉರಿಯೂತ ನಿರೋಧಕ ಮತ್ತು ನೋವು ನಿರೋಧಕ ಗುಣಗಳನ್ನು ಹೊಂದಿದೆ. ಹತ್ತು ಹನಿಗಳಷ್ಟು ಲ್ಯಾವೆಂಡರ್ ತೈಲವನ್ನು ತೆಂಗಿನೆಣ್ಣೆಗೆ ಸೇರಿಸಿ ಅದನ್ನು ಜುಮುಗುಡುತ್ತಿರುವ ಪಾದ ಅಥವಾ ಕೈ ಭಾಗಕ್ಕೆ ಲೇಪಿಸಬೇಕು. ಈ ತೈಲಮಿಶ್ರಣದಿಂದ ಜುಮುಗುಡುತ್ತಿರುವ ಚರ್ಮಕ್ಕೆ ಮಸಾಜ್ ಮಾಡಬಹುದು. ರಾತ್ರಿ ಮಲಗುವ ಮುನ್ನ ಈ ಚಿಕಿತ್ಸೆ ಮಾಡಿದರೆ ಅತ್ಯುತ್ತಮ ಪರಿಣಾಮ ನೀಡುತ್ತದೆ.

* ಎಪ್ಸಮ್ ಸಾಲ್ಟ್

ಎಪ್ಸಮ್ ಸಾಲ್ಟ್‌ನಲ್ಲಿರುವ ಮ್ಯಾಗ್ನೀಷಿಯಂ ಉರಿಯೂತ ನಿರೋಧಕ ಗುಣಗಳನ್ನು ಹೊಂದಿರುವುದರಿಂದ ಜುಮುಗುಡುವಿಕೆಯಿಂದ ಮುಕ್ತಿ ನೀಡುತ್ತದೆ. ಇದಕ್ಕಾಗಿ ಅರ್ಧ ಬಕೆಟ್ ನೀರಿಗೆ ಸ್ವಲ್ಪ ಎಪ್ಸಮ್ ಸಾಲ್ಟ್ ಬೆರೆಸಿ ಜುಮುಗುಡುತ್ತಿರುವ ಕೈ ಅಥವಾ ಪಾದಗಳನ್ನು ಅದರಲ್ಲಿ ಸುಮಾರು 30 ನಿಮಿಷಗಳ ಕಾಲ ಮುಳುಗಿಸಬೇಕು. ಇದನ್ನು ನಿಯಮಿತವಾಗಿ ಮಾಡುತ್ತಿದ್ದರೆ ಸಮಸ್ಯೆಯು ಶಾಶ್ವತವಾಗಿ ಬಗೆಹರಿಯುತ್ತದೆ.

* ಪಾದದ ಮಸಾಜ್

ಜುಮುಗುಡುವಿಕೆಗೆ ಮಸಾಜ್ ಅತ್ಯುತ್ತಮ ಚಿಕಿತ್ಸೆಯಾಗಿದೆ. ಕೈಗಳು ಮತ್ತು ಪಾದಗಳನ್ನು ಮಸಾಜ್ ಮಾಡುವುದರಿಂದ ನಿರಂತರ ಜುಮುಗುಡುವಿಕೆಯ ಅನುಭವ ಕಡಿಮೆಯಾಗುತ್ತದೆ. ಮಸಾಜ್ ನರಗಳನ್ನು ಉತ್ತೇಜಿಸುತ್ತದೆ ಮತ್ತು ಅವುಗಳ ಕಾರ್ಯ ನಿರ್ವಹಣೆಯನ್ನು ಹೆಚ್ಚಿಸುತ್ತದೆ,ಇದರಿಂದ ಜುಮುಗುಡುವಿಕೆ ಕಡಿಮೆಯಾಗುತ್ತದೆ. ಮಸಾಜ್ ರಕ್ತಸಂಚಾರವನ್ನೂ ಹೆಚ್ಚಿಸುತ್ತದೆ ಮತ್ತು ಇದು ಕೂಡ ಜುಮುಗುಡುವಿಕೆಯಿಂದ ಮುಕ್ತಿ ಪಡೆಯಲು ನೆರವಾಗುತ್ತದೆ.

* ದಾಲ್ಚಿನ್ನಿ

 ಆಹಾರಕ್ಕೆ ರುಚಿ ಮತ್ತು ಪರಿಮಳ ನೀಡುವ ಸಂಬಾರ ಪದಾರ್ಥವಾಗಿರುವ ದಾಲ್ಚಿನ್ನಿ ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದ್ದು, ಜುಮುಗುಡುವಿಕೆ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದು. ಅದರಲ್ಲಿರುವ ಪೊಟ್ಯಾಷಿಯಂ ಮತ್ತು ಮ್ಯಾಂಗನೀಸ್ ರಕ್ತಸಂಚಾರವನ್ನು ಹೆಚ್ಚಿಸುತ್ತವೆ ಮತ್ತು ತನ್ಮೂಲಕ ಅತೀವ ಮರಗಟ್ಟುವಿಕೆ ಮತ್ತು ಜುಮುಗುಡುವಿಕೆಯಿಂದ ಮುಕ್ತಿ ನೀಡುತ್ತವೆ. ದಿನಕ್ಕೆರಡು ಬಾರಿ ಒಂದು ಟೀ ಚಮಚ ದಾಲ್ಚಿನ್ನಿ ಹುಡಿಯನ್ನು ಒಂದು ಕಪ್ ಬಿಸಿ ನೀರಿಗೆ ಸೇರಿಸಿಕೊಂಡು ಕುಡಿಯುತ್ತಿದ್ದರೆ ಪ್ಯಾರಾಸ್ಥೇಸಿಯಾ ನಿಯಂತ್ರಣಕ್ಕೆ ನೆರವಾಗುತ್ತದೆ.

* ಮೊಸರು

ಕೈಗಳು ಮತ್ತು ಪಾದಗಳಲ್ಲಿ ಜುಮುಗುಡುವಿಕೆಯಿಂದ ಪಾರಾಗಲು ಮೊಸರು ಉತ್ತಮ ಮನೆಮದ್ದಾಗಿದೆ. ಮ್ಯಾಂಗನೀಸ್ ಸೇರಿದಂತೆ ಅದರಲ್ಲಿರುವ ಹಲವಾರು ಪೋಷಕಾಂಶಗಳು ರಕ್ತ ಸಂಚಯವನ್ನು ಹೆಚ್ಚಿಸುವ ಮೂಲಕ ಅಭಿಧಮನಿಗಳ ಕಾರ್ಯ ನಿರ್ವಹಣೆಯನ್ನು ಹೆಚ್ಚಿಸುತ್ತವೆ ಮತ್ತು ಕೈಗಳು ಹಾಗೂ ಪಾದಗಳಲ್ಲಿಯ ಜುಮುಗುಡುವಿಕೆಯನ್ನು ನಿವಾರಿಸುತ್ತವೆ. ಪ್ರತಿದಿನ ಒಂದು ಕಪ್ ಮೊಸರು ಸೇವನೆಯಿಂದ ಜುಮುಗುಡುವಿಕೆಯನ್ನು ನಿವಾರಿಸಬಹುದು. ಮೊಸರು ಇತರ ಹಲವಾರು ಆರೋಗ್ಯಲಾಭಗಳನ್ನೂ ನೀಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News