ಹೋಮ್ ಕ್ವಾರಂಟೈನ್ ನಿಗಾವಹಿಸಲು ಕಣ್ಗಾವಲು ಪಡೆ ರಚನೆ: ಬಿಬಿಎಂಪಿ ಮೇಯರ್

Update: 2020-06-18 16:53 GMT

ಬೆಂಗಳೂರು, ಜೂ.18: ಹೊರ ರಾಜ್ಯ, ದೇಶಗಳಿಂದ ಬಿಬಿಎಂಪಿ, ಬೆಂಗಳೂರುನಗರ, ಗ್ರಾಮಾಂತರ ಪ್ರದೇಶಕ್ಕೆ ಬಂದವರ ಹೋಮ್ ಕ್ವಾರಂಟೈನ್ ಬಗ್ಗೆ ನಿಗಾವಹಿಸಲು ಕಣ್ಗಾವಲು ಪಡೆಯನ್ನು ರಚಿಸಲಾಗಿದೆ ಎಂದು ಬಿಬಿಎಂಪಿ ಮೇಯರ್ ಗೌತಮ್‍ಕುಮಾರ್ ತಿಳಿಸಿದ್ದಾರೆ.

ಗುರುವಾರ ಬಿಬಿಎಂಪಿಯ ಡಾ.ರಾಜ್‍ಕುಮಾರ್ ಗಾಜಿನಮನೆಯಲ್ಲಿ ಕಣ್ಗಾವಲು ಪಡೆಗೆ ಚಾಲನೆ ನೀಡಿ ಮಾತನಾಡಿದ ಅವರು, ಹೊರ ರಾಜ್ಯ ಹಾಗೂ ಹೊರ ದೇಶದಿಂದ ಬಂದವರು 14ದಿನ ಕಡ್ಡಾಯವಾಗಿ ಗೃಹ ಬಂಧನದಲ್ಲಿರುವುದು ಅವಶ್ಯ. ಇದರಿಂದ ಕೋವಿಡ್-19ನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಹೊರಗಡೆಯಿಂದ ಬಂದವರು ಕೋವಿಡ್-19 ಮಾರ್ಗಸೂಚಿಗಳನ್ನು ಪಾಲಿಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಕಣ್ಗಾವಲು ಪಡೆ ರಚಿಸಲಾಗಿದೆ ಎಂದರು.

ಮಹಾರಾಷ್ಟ್ರ, ದೆಹಲಿ ಹಾಗೂ ತಮಿಳುನಾಡಿನಿಂದ ಬಂದವರನ್ನು ಸಾಂಸ್ಥಿಕ ಗೃಹ ದಿಗ್ಬಂಧನದಲ್ಲಿರಿಸಲಾಗುತ್ತಿದೆ. ಉಳಿದಂತೆ ಹೊರ ರಾಜ್ಯ, ದೇಶಗಳಿಂದ ವಿಮಾನ, ರೈಲು ಮತ್ತು ರಸ್ತೆ ಮಾರ್ಗದಲ್ಲಿ ವಾಹನ ಮೂಲಕ ಬರುವಂತಹವರಿಗೆ ಸ್ಟಾಂಪಿಗ್ ಮಾಡಿ 14ದಿನ ಕಡ್ಡಾಯವಾಗಿ ಗೃಹ ಬಂಧನದಲ್ಲಿರುವಂತೆ ಸೂಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಗೃಹ ಬಂಧನದಲ್ಲಿರುವವರು ನಿಯಮ ಪಾಲಿಸದೆ ಹೊರಗಡೆ ಬರುವಂತಹ ವ್ಯಕ್ತಿಯ ಮೊಬೈಲ್ ಸಂಖ್ಯೆಗೆ ಆರೋಗ್ಯ ಇಲಾಖೆಯಿಂದ ಎಚ್ಚರಿಕೆಯ ಸಂದೇಶ ರವಾನೆಯಾಗಲಿದೆ. ಅದನ್ನು ಮೀರಿ ಹೊರಗಡೆ ಬರುವಂತಹವರನ್ನು ಸಾಂಸ್ಥಿಕ ಗೃಹಬಂಧನದ ಜೊತೆಗೆ ಎಫ್‍ಐಆರ್ ದಾಖಲಿಸಲಾಗುವುದೆಂದು ಅವರು ಎಚ್ಚರಿಕೆ ನೀಡಿದ್ದಾರೆ.

ಈ ವೇಳೆ ಉಪಮೇಯರ್ ರಾಮಮೋಹನ ರಾಜು, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ರಾಜು, ಪಾಲಿಕೆ ಆಯುಕ್ತ ಬಿ.ಎಚ್.ಅನಿಲ್‍ಕುಮಾರ್, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್ ಮತ್ತಿತರರು ಉಪಸ್ಥಿತರಿದ್ದರು.

ಮಣಿವಣ್ಣನ್‍ಗೆ ಜವಾಬ್ದಾರಿ
ಕೋವಿಡ್-19 ಸೋಂಕನ್ನು ನಿಯಂತ್ರಿಸುವ ಸಲುವಾಗಿ ರಾಜ್ಯ ಸರಕಾರವು ಕಣ್ಗಾವಲು ಕಾರ್ಯಪಡೆಯನ್ನು ರಚಿಸಿ, ಅದಕ್ಕೆ ಬಿಬಿಎಂಪಿ ಆಯುಕ್ತರನ್ನು ಮುಖ್ಯಸ್ಥರನ್ನಾಗಿ ನಿಯೋಜಿಸಿದ್ದು, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಕಾರ್ಯದರ್ಶಿ ಮಣಿವಣ್ಣನ್‍ರನ್ನು ಗೃಹಬಂಧನ ವೀಕ್ಷಣೆ ಜವಾಬ್ದಾರಿಯನ್ನು ನೀಡಿದ್ದು, ಹೊರ ದೇಶ, ಹೊರ ರಾಜ್ಯದಿಂದ ಬಂದಂತಹ ಪ್ರಯಾಣಿಕರ ಮೇಲೆ ನಿಗಾವಹಿಸಲು ವಿಧಾನಸಭಾ ಕ್ಷೇತ್ರವಾರು ತಂಡಗಳನ್ನು ರಚನೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News