ಮೀನು ಉಪ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ: ಮುಖ್ಯಮಂತ್ರಿ ಯಡಿಯೂರಪ್ಪ
ಬೆಂಗಳೂರು, ಜೂ. 19: ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದಿಂದ ಮೀನಿನ ಖಾದ್ಯ ಪ್ರಿಯರಿಗಾಗಿ ಇದೇ ಮೊದಲ ಬಾರಿಗೆ ಮೀನಿನ ಚಿಪ್ಸ್, ಮೀನಿನಿಂದ ತಯಾರಿಸಿರುವ ಮಸಾಲೆ ಪದಾರ್ಥಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ಲೋಕಾರ್ಪಣೆ ಮಾಡಿದರು.
ಶುಕ್ರವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಮೀನುಗಾರಿಕೆ ಇಲಾಖೆಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮೀನಿನ ಮೌಲ್ಯವರ್ಧಿತ ಉತ್ಪನ್ನಗಳನ್ನು ಬಿಡುಗಡೆ ಮಾಡಿದ ಅವರು, ಮೀನು ಪ್ರಿಯರ ಬೇಡಿಕೆ ಸಲ್ಲಿಸಿದ ಹಿನ್ನೆಲೆಯಲ್ಲಿ ನಿಗಮದಿಂದ `ಮತ್ಸ್ಯಬಂಧನ' ಸಂಸ್ಥೆಯ ಸಹಭಾಗಿತ್ವದಲ್ಲಿ ಮೀನಿನ ಚಿಪ್ಸ್ ಮತ್ತು ಮಸಾಲೆ ಪದಾರ್ಥಗಳನ್ನು ಸಿದ್ಧಪಡಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿದ್ದ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಜ್ಯದಲ್ಲಿ ಮೀನುಗಾರಿಕೆ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಉದ್ದಿಮೆದಾರರಿಗೆ ಮೀನು ಹಾಗೂ ಮೀನಿನ ಮೌಲ್ಯವರ್ಧಿತ ಉತ್ಪನ್ನಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಅವಶ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಮೀನಿನ ಚಿಪ್ಸ್ ಗಳನ್ನು ತಯಾರಿಸಲಾಗುತ್ತಿದೆ ಎಂದು ಹೇಳಿದರು.
ದೇಶದಲ್ಲಿ ಮೀನುಗಾರಿಕಾ ಕ್ಷೇತ್ರದಲ್ಲಿ ಜಗತ್ತಿನ ಎರಡನೇ ಅತಿ ದೊಡ್ಡ ಮೀನುಗಾರಿಕಾ ಉತ್ಪಾದನಾ ರಾಷ್ಟ್ರವಾಗಿದೆ. ರಾಜ್ಯದಲ್ಲಿಯೂ ಸಹ ಮೀನುಗಾರಿಕೆಗೆ ವಿಫುಲ ಅವಕಾಶ ಇದ್ದು, ರಾಜ್ಯದಲ್ಲಿನ ಜಲ ಸಂಪನ್ಮೂಲಗಳ ಸದ್ಬಳಕೆ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಮುಂದಿನ ದಿನದಲ್ಲಿ ಮೀನಿನ ಹೊಸ ಉತ್ಪನ್ನಗಳನ್ನು ಉತ್ಪಾದಿಸುವ ಚಿಂತನೆ ಇದೆ ಎಂದರು.
ದಕ್ಷಿಣ ಕನ್ನಡ, ಉಡುಪಿ ಮತ್ತು ಕಾರವಾರ ಜಿಲ್ಲೆಗಳಲ್ಲಿ 20ಕ್ಕೂ ಹೆಚ್ಚು ಬಂದರುಗಳಲ್ಲಿ ಮೀನುಗಾರಿಕೆ ನಡೆಯುತ್ತಿದೆ. ಶೇ.75ರಷ್ಟು ರಫ್ತು ಮಾಡಲಾಗುತ್ತಿದೆ. ರಾಜ್ಯದ ಒಟ್ಟು ಮೀನು ಉತ್ಪಾದನೆಯ ಪೈಕಿ 3.89 ಲಕ್ಷ ಮೆಟ್ರಿಕ್ ಟನ್ ಕಡಲ ಮೀನುಗಾರಿಕೆಯಿಂದ ಬರುತ್ತಿದೆ. ಇದರಲ್ಲಿ 1.44 ಲಕ್ಷ ಮೆಟ್ರಿಕ್ ಟನ್ ರಾಜ್ಯದಿಂದ ರಫ್ತು ಮಾಡಲಾಗಿದೆ
-ಕೋಟ ಶ್ರೀನಿವಾಸ ಪೂಜಾರಿ
ಮೀನು ಬಹಳ ಬೇಗ ಕೆಡುತ್ತದೆ. ಹೀಗಾಗಿ ಮೀನುಗಾರರಿಗೆ ನಷ್ಟ ಸಂಭವಿಸುತ್ತದೆ. ಆದುದರಿಂದ ಮೀನುಗಾರಿಕೆಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಮುಂದಿನ ದಿನದಲ್ಲಿ ಮೀನಿನ ಮೌಲ್ಯವರ್ಧನೆ ಪ್ರಮುಖವಾಗಲಿದೆ. ಮೀನಿನ ಚಿಪ್ಸ್ ನಂತಹ ಉತ್ಪನ್ನಗಳನ್ನು ಉತ್ಪಾದಿಸಿ ಹೊಸ ಮಾರುಕಟ್ಟೆ ಕಲ್ಪಿಸುವ ಮೂಲಕ ಮೀನುಗಾರಿಕೆ ಉದ್ಯಮವಾಗಿ ಬೆಳೆಸುವ ಚಿಂತನೆ ಇದೆ'
-ಕೋಟ ಶ್ರೀನಿವಾಸ ಪೂಜಾರಿ