ಬೆಂಗಳೂರು: ಕೊರೋನದಿಂದ ಮೃತಪಟ್ಟವರ ಸಂಖ್ಯೆ 58ಕ್ಕೆ ಹೆಚ್ಚಳ
ಬೆಂಗಳೂರು, ಜೂ.19: ನಗರದಲ್ಲಿ ಶುಕ್ರವಾರ ಏಳು ಮಂದಿ ಕೊರೋನಕ್ಕೆ ಮೃತಪಟ್ಟಿದ್ದು, ಮೃತರ ಸಂಖ್ಯೆ 58ಕ್ಕೆ ಹೆಚ್ಚಳವಾಗಿದೆ. ಹೊಸದಾಗಿ 138 ಕೊರೋನ ಸೋಂಕು ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 982ಕ್ಕೆ ಏರಿಕೆಯಾಗಿದೆ. 531 ಜನರು ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಲ್ಲಿಯವರೆಗೆ 58 ಜನರು ಸೋಂಕಿಗೆ ಬಲಿಯಾಗಿದ್ದು, ಶುಕ್ರವಾರ 8 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 36 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯಲ್ಲಿ ಒಟ್ಟು 14,717 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ.
ಶುಕ್ರವಾರ 138 ಪ್ರಕರಣ ದೃಢಪಟ್ಟಿದ್ದು, ಇದರಲ್ಲಿ ಆಂಧ್ರಪ್ರದೇಶದಿಂದ ಬಂದಿರುವ 53 ವರ್ಷದ ವ್ಯಕ್ತಿ, ತಮಿಳುನಾಡಿನ 33 ವರ್ಷದ ಮಹಿಳೆ, ಮಹಾರಾಷ್ಟ್ರದಿಂದ ಬಂದಿರುವ 7 ಜನರು ಸೇರಿದಂತೆ ಕೋಲ್ಕತ್ತಾದಿಂದ ಬಂದಿರುವ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಇಲ್ಲಿಯವರೆಗೆ ವಿದೇಶ ಹಾಗೂ ಅಂತರ್ ರಾಜ್ಯದಿಂದ ಬಂದಿರುವವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೊರೋನ ಕಾಣಿಸಿಕೊಳ್ಳುತ್ತಿದ್ದ ಸೋಂಕು ಗುರುವಾರ ಅಂತರ್ ಜಿಲ್ಲೆಗಳಾದ ಮಂಡ್ಯ, ಮೈಸೂರು, ಹೊಸದುರ್ಗ, ವಿಜಯಪುರ ಹಾಗೂ ಬೀದರ್ ನಿಂದ ಬೆಂಗಳೂರಿಗೆ ಪ್ರಯಾಣ ಮಾಡಿರುವವರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಇನ್ನು ಪೀಣ್ಯ 2ನೇ ಹಂತದ ಒಂದು ವರ್ಷದ ಮಗು, ಪೀಣ್ಯ 1ನೇ ಹಂತದ 63 ವರ್ಷದ ವ್ಯಕ್ತಿ, ವೀರಸಂದ್ರದ 49 ವರ್ಷದ ವ್ಯಕ್ತಿ, ಮಾರತಹಳ್ಳಿಯ 37 ವ್ಯಕ್ತಿ, ಕನಕಪುರದ 50 ವರ್ಷದ ವೈದ್ಯಕೀಯ ಸಿಬ್ಬಂದಿ, ಯಲಹಂಕದ ಹನುಮಂಯ ಪಾಳ್ಯ ಲೇಔಟ್‍ನ 43 ವರ್ಷದ ವ್ಯಕ್ತಿ, ಬೊಮ್ಮನಹಳ್ಳಿಯ(ಸಾರಿ) ಸಂಪರ್ಕದಿಂದ 39 ವರ್ಷದ ವ್ಯಕ್ತಿ, ಕೆಂಗೇರಿಯ ಕೆಎಚ್‍ಬಿ ಕಾಲೋನಿ ನೇತಾಜಿ ಲೇಔಟ್ 39 ವರ್ಷದ ವ್ಯಕ್ತಿ ಹಾಗೂ 15 ವರ್ಷದ ಯುವತಿಯಲ್ಲಿ ಸೋಂಕು ಪತ್ತೆಯಾಗಿದೆ. ಇವರನ್ನು ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕಿದ್ವಾಯಿಗೂ ಕೊರೋನ ಕಂಟಕ: ಕಿದ್ವಾಯಿ ಸ್ಮಾರಕ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇಬ್ಬರು ಕ್ಯಾನ್ಸರ್ ರೋಗಿಗಳಿಗೆ ಕೊರೋನ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಏಳು ಮಂದಿ ವೈದ್ಯರು ಹಾಗೂ ಏಳು ನರ್ಸ್‍ಗಳನ್ನು ಕ್ವಾರಂಟೈನ್ ಮಾಡಲಾಗಿದೆ. 28 ವರ್ಷದ ಮಹಿಳೆಗೆ ಶಸ್ತ್ರಚಿಕಿತ್ಸೆ ಅಗತ್ಯವಿದ್ದ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಕಿದ್ವಾಯಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಕೊರೋನ ಪರೀಕ್ಷೆ ಮಾಡಲಾಗಿತ್ತು, ಶುಕ್ರವಾರ ಕೊರೋನ ಇರುವುದು ದೃಢಪಟ್ಟಿದೆ. 15 ದಿನಗಳ ಹಿಂದೆ ಕೊರೋನ ಪರೀಕ್ಷೆ ನಡೆಸಿದ್ದಾಗ ಸೋಂಕು ಇರಲಿಲ್ಲ. ಬೆಂಗಳೂರು ಮೂಲದ ಮಹಿಳೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿಲಾಗುತ್ತಿದೆ. ಈ ಮಹಿಳೆ ದಾಖಲಾಗಿದ್ದ ವಾರ್ಡ್ ನಲ್ಲಿದ್ದ ಏಳು ಮಂದಿಯನ್ನು ಕ್ವಾರೆಂಟೈನ್ ಮಾಡಲಾಗಿದೆ.
ಒಂದು ವಾರದಲ್ಲಿ 37 ಮಂದಿ ಕೊರೋನಕ್ಕೆ ಬಲಿ: ಬೆಂಗಳೂರಿನಲ್ಲಿ ಕಳೆದ ಒಂದು ವಾರದಲ್ಲಿ 37 ಮಂದಿ ಕೊರೋನ ಸೋಂಕಿಗೆ ಬಲಿಯಾಗಿದ್ದು, ನಗರದ ಜನರಲ್ಲಿ ಆತಂಕ ಸೃಷ್ಟಿಸಿದೆ. ಲಾಕ್‍ಡೌನ್ ಸಡಿಲಿಕೆ ಹಾಗೂ ಹೊರ ರಾಜ್ಯ ಮತ್ತು ದೇಶದಿಂದ ಆಗುಮಿಸುವವರಿಗೆ ಕ್ವಾರಂಟೈನ್ ನಿಯಮ ಸಡಿಲಿಕೆ ಮಾಡಿದ ಬಳಿಕ ಬೆಂಗಳೂರಿನಲ್ಲಿ ಕೊರೋನ ಸಾವಿನ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಕಳೆದ ಜೂ 12 ರಿಂದ ಜೂ.19 ರ ವರೆಗೆ ಬೆಂಗಳೂರಿನಲ್ಲಿ 37 ಮಂದಿ ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆ. ಹೀಗಾಗಿ, ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ ಏಕಾಏಕಿ 50ರ ಗಡಿ ದಾಟಿದೆ.
ಈವರೆಗೆ ಬೆಂಗಳೂರು ನಗರದಲ್ಲಿ ಪತ್ತೆಯಾದ ಕೊರೋನ ಪ್ರಕರಣಗಳ ಪೈಕಿ ಶೇ.50 ರಷ್ಟು ಪ್ರಕರಣಗಳು ಬೆಂಗಳೂರು ನಗರ ಕೇಂದ್ರ ಭಾಗದ ಮೂರು ವಲಯಗಳಲ್ಲಿ ಪತ್ತೆಯಾಗಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಪೂರ್ವ ವಲಯದಲ್ಲಿ 159, ಪಶ್ಚಿಮ ವಲಯದಲ್ಲಿ 144 ಮತ್ತು ದಕ್ಷಿಣ ವಲಯದಲ್ಲಿ 113 ಒಟ್ಟು 416 ಪ್ರಕರಣ ಈ ಮೂರು ವಲಯದಲ್ಲಿವೆ. ಈವರೆಗೆ ನಗರದಲ್ಲಿ 58 ಮಂದಿ ಕೊರೋನ ಸೋಂಕಿಗೆ ಬಲಿಯಾಗಿದ್ದಾರೆ. ಅದರಲ್ಲಿ ಪೂರ್ವದಲ್ಲಿ ಅತಿ ಹೆಚ್ಚು, ಅಂದರೆ 13 ಮಂದಿ, ಪಶ್ಚಿಮದಲ್ಲಿ 11 ಹಾಗೂ ದಕ್ಷಿಣ ವಲಯದಲ್ಲಿ 8 ಮಂದಿ ಒಟ್ಟು 34 ಮಂದಿ ಈ ಮೂರು ವಲಯದಲ್ಲಿ ಮೃತಪಟ್ಟಿದ್ದಾರೆ. ಸೋಂಕಿತರು ಮತ್ತು ಮೃತರ ಸಂಖ್ಯೆ ಈ ವಲಯದಲ್ಲಿ ಹೆಚ್ಚಿರುವ ಹಿನ್ನೆಲೆಯಲ್ಲಿ ಈ ಮೂರು ವಲಯದಲ್ಲಿಯೇ ಹೆಚ್ಚು ಕಂಟೈನ್ಮೆಂಟ್ ಝೋನ್ ಗಳು ಇವೆ.