ಕೊರೋನ ವೈರಸ್: ಶೌಚಾಲಯ ಬಳಸುವಾಗ ಈ ಮುನ್ನೆಚ್ಚರಿಕೆಯನ್ನು ಪಾಲಿಸಿ

Update: 2020-06-19 17:57 GMT

ಸಂಶೋಧಕರ ಎಚ್ಚರಿಕೆ

 ಕೊರೋನ ವೈರಸ್ ನಮಗೆ ಸ್ವಚ್ಛತೆಯ ಪಾಠವನ್ನು ಕಲಿಸಿದೆ. ಅಸ್ವಚ್ಛತೆಯು ಹೆಚ್ಚಿನ ಸೋಂಕುಗಳು ಮತ್ತು ವೈರಸ್‌ಗಳಿಗೆ ಕಾರಣ ಎನ್ನುವುದನ್ನು ನಾವು ಕಡೆಗಣಿಸಿದ್ದೆವು. ಇಂದು ಕೊರೋನ ಕಾಲದಲ್ಲಿ ಕೈಗಳನ್ನು ಆಗಾಗ್ಗೆ ತೊಳೆದುಕೊಳ್ಳುವ,ನಮ್ಮ ಪರಿಸರವನ್ನು ಸ್ವಚ್ಛವಾಗಿಡುವ,ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವ,ಆರೋಗ್ಯಕರ ಹಾಗೂ ಶುದ್ಧ ಆಹಾರ ಸೇವನೆಯನ್ನು ರೂಢಿಸಿಕೊಳ್ಳುವ ಮೂಲಕ ನಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುತ್ತಿದ್ದೇವೆ. ಈ ಎಚ್ಚರಿಕೆ ಮೊದಲಿನಿಂದಲೇ ಇದ್ದರೆ ಬಹುಶಃ ಇಂತಹ ಮಾರಣಾಂತಿಕ ಸಾಂಕ್ರಾಮಿಕವನ್ನು ನಾವು ಎದುರಿಸಬೇಕಿರಲಿಲ್ಲ. ತಡವಾಗಿಯಾದರೂ ನಮಗೆ ಸ್ವಚ್ಛತೆಯ ಮಹತ್ವ ಗೊತ್ತಾಗಿದೆ,ಅದೇ ದೊಡ್ಡದು.

ಕೋವಿಡ್-19ನಿಂದ ಪಾರಾಗಲು ಎಲ್ಲ ಬಗೆಯ ಮುನ್ನೆಚ್ಚರಿಕೆಗಳನ್ನು ನಾವು ಈವರೆಗೆ ವಹಿಸುತ್ತಲೇ ಬಂದಿದ್ದೇವೆ,ಈಗ ಇವುಗಳ ಪಟ್ಟಿಗೆ ಇನ್ನೊಂದು ಮುನ್ನೆಚ್ಚರಿಕೆ ಸೇರಿಕೊಂಡಿದೆ. ನಾವು ಟಾಯ್ಲೆಟ್‌ಗೆ ಹೋದಾಗ ನಮ್ಮ ಕೆಲಸವಾದ ಬಳಿಕ ಕಮೋಡ್‌ನ್ನು ಫ್ಲಷ್ ಮಾಡುವ ಮುನ್ನ ಅದನ್ನು ಮುಚ್ಚುವುದರಿಂದ ಕೊರೋನ ವೈರಸ್ ಸೋಂಕಿಗೆ ಗುರಿಯಾಗುವ ಅಪಾಯವನ್ನು ತಗ್ಗಿಸಬಹುದು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಇದು ವಿಲಕ್ಷಣ ಎನಿಸಬಹುದು,ಆದರೆ ಒಂದೇ ಟಾಯ್ಲೆಟ್‌ನ್ನು ಹಲವರು ಬಳಸುತ್ತಿದ್ದರೆ ಯಾವುದೇ ವ್ಯಕ್ತಿಯಲ್ಲಿ ಕೊರೋನ ಲಕ್ಷಣಗಳಿದ್ದಾಗ ಕಮೋಡ್‌ನ್ನು ಮುಚ್ಚುವುದು ಸೋಂಕಿನಿಂದ ದೂರವಿರಲು ನೆರವಾಗುತ್ತದೆ.

ಈ ಸಮಯದಲ್ಲಿ ಮುನ್ನೆಚ್ಚರಿಕೆ ಕೊರೋನ ವೈರಸ್‌ಗೆ ಏಕಮಾತ್ರ ಚಿಕಿತ್ಸೆಯಾಗಿದೆ. ಈ ಸಾಂಕ್ರಾಮಿಕವನ್ನು ಗುಣಪಡಿಸುವ ಲಸಿಕೆ ಅಥವಾ ಔಷಧಿಯನ್ನು ಇನ್ನೂ ಕಂಡುಹಿಡಿಯಲಾಗಿಲ್ಲ,ಹೀಗಾಗಿ ಮುನ್ನೆಚ್ಚರಿಕೆ ವಹಿಸುವುದು ಏಕಮಾತ್ರ ಪರಿಹಾರವಾಗಿದೆ. ನಾವು ಏನನ್ನು ಮಾಡುತ್ತವೆಯೋ ಅದನ್ನು ನಮ್ಮ ಕುಟುಂಬದ ಆರೋಗ್ಯವೂ ಅವಲಂಬಿಸಿದೆ. ಒಂದೇ ಟಾಯ್ಲೆಟ್ ಬಳಸುವ ಕುಟುಂಬಗಳಿಗೆ ಅಗತ್ಯ ಮಾಹಿತಿಗಳಿಲ್ಲಿವೆ.

 ಕೋರೋನ ವೈರಸ್ ಸೋಂಕಿತ ವ್ಯಕ್ತಿಯ ಮಲದಲ್ಲಿಯೂ ಕೆಲ ಪ್ರಮಾಣದಲ್ಲಿ ಸೋಂಕು ಇರುವ ಸಾಧ್ಯತೆಗಳಿವೆ ಎಂದು ಇತ್ತೀಚಿನ ಅಧ್ಯಯನ ವರದಿಯೊಂದು ಹೇಳಿದೆ. ಉದಾಹರಣೆಗೆ ಕೋವಿಡ್-19 ಸೋಂಕಿಗೊಳಗಾಗಿ ಗುಣಮುಖನಾಗಿದ್ದ ವ್ಯಕ್ತಿಯೋರ್ವನ ಮಲದಲ್ಲಿ ಒಂದು ತಿಂಗಳ ಬಳಿಕವೂ ಕೊರೋನ ವೈರಸ್‌ನ ಸೋಂಕುಗಳಿದ್ದವು. ಈ ಹಿನ್ನೆಲೆಯಲ್ಲಿ ಒಂದೇ ಟಾಯ್ಲೆಟ್‌ನ್ನು ಹಲವರು ಬಳಸುತ್ತಿರುವಾಗ ಸೋಂಕು ಹರಡುವ ಅಪಾಯವನ್ನು ತಳ್ಳಿಹಾಕಲಾಗದು. ನಾವು ಹೊರಗಡೆಯಿಂದ ಮನೆಗೆ ಮರಳಿದಾಗ ನಮ್ಮ ಶೂಗಳಲ್ಲಿಯೂ ಕೊರೋನ ವೈರಸ್ ಇರಬಹುದು. ಕಮೋಡ್‌ನ್ನು ಫ್ಲಷ್ ಮಾಡಿದಾಗ ಎರೋಸಾಲ್ ಪಾರ್ಟಿಕಲ್ಸ್ ಅಥವಾ ಕೊರೋನ ವೈರಸ್ ಇರುವ ತುಂತುರುಗಳು ವಾಯುವಿನಲ್ಲಿ ಹರಡುತ್ತವೆ. ಇವು ಸುದೀರ್ಘ ಅವಧಿಗೆ ಗಾಳಿಯಲ್ಲಿರುತ್ತವೆ ಮತ್ತು ಬೇರೆ ವ್ಯಕ್ತಿ ಟಾಯ್ಲೆಟ್ ಪ್ರವೇಶಿಸಿದಾಗಿ ಆತ ಇವುಗಳನ್ನು ಉಸಿರಾಡಿಸಬಹುದು. ಫ್ಲಷ್ ಮಾಡುವುದು ಟಾಯ್ಲೆಟ್‌ನ ಬೌಲ್‌ನಲ್ಲಿರುವ ವೈರಸ್‌ನ್ನು ಮೇಲಕ್ಕೆತ್ತುತ್ತದೆ. ಹೀಗಾಗಿ ಕಮೋಡ್‌ನ್ನು ಫ್ಲಷ್ ಮಾಡುವ ಮುನ್ನ ಅದನ್ನು ಸರಿಯಾಗಿ ಮುಚ್ಚಬೇಕು. ಮುಚ್ಚುವ ವ್ಯವಸ್ಥೆಯಿಲ್ಲದಿದ್ದರೆ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು ಎನ್ನುತ್ತಾರೆ ಸಂಶೋಧಕರು.

ಕೆಲವು ಕೊರೋನ ವೈರಸ್ ಸೋಂಕಿತರಿಗೆ ಉಸಿರಾಟದ ತೊಂದರೆಯಿರುವುದಿಲ್ಲ,ಆದರೆ ವಾಂತಿ ಮತ್ತು ಅತಿಸಾರವನ್ನು ಅನುಭವಿಸುತ್ತಿರುತ್ತಾರೆ ಎನ್ನುವುದು ಹೊಟ್ಟೆಯಲ್ಲಿ ವೈರಸ್ ಇದೆ ಎನ್ನುವುದನ್ನು ತೋರಿಸುತ್ತದೆ ಮತ್ತು ಇದು ವೈರಸ್ ಮಲದಲ್ಲಿ ಬಹಳ ಸಮಯ ಇರುತ್ತದೆ ಎನ್ನುವ ಅಭಿಪ್ರಾಯವನ್ನು ಸಮರ್ಥಿಸುತ್ತದೆ.

ಕೊರೋನ ವೈರಸ್ ಪಿಡುಗು ಮೊದಲಿಗೆ ಆರಂಭಗೊಂಡಿದ್ದ ಚೀನಾದ ವುಹಾನ್‌ನ ಆಸ್ಪತ್ರೆಯೊಂದರಿಂದ ಸಂಗ್ರಹಿಸಲಾದ ಏರ್ ಸ್ಯಾಂಪಲ್‌ಗಳು ಐಸೊಲೇಷನ್ ವಾರ್ಡ್‌ನಲ್ಲಿ ವೈರಸ್ ಒಳಗೊಂಡ ಎರೋಸಾಲ್ ಅಥವಾ ವಾಯುದ್ರವ ಕಡಿಮೆಯಿದ್ದರೆ,ಟಾಯ್ಲೆಟ್‌ಗಳಲ್ಲಿ ಅದು ಹೆಚ್ಚಿನ ಪ್ರಮಾಣದಲ್ಲಿತ್ತು ಎನ್ನುವುದನ್ನು ತೋರಿಸಿವೆ.

          ಆದರೆ,ಮಲದಲ್ಲಿರುವ ವೈರಸ್ ಕೋವಿಡ್-19 ಸೋಂಕನ್ನು ಉಂಟು ಮಾಡುವ ಸಾಮರ್ಥ್ಯವನ್ನು ಹೊಂದಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ. ಮಲದ ಮೂಲಕ ವೈರಸ್ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ ಎನ್ನುವುದು ಇನ್ನಷ್ಟೇ ದೃಢಪಡಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News