×
Ad

ಬೆಂಗಳೂರು: ಎಲ್ಲೆಡೆ ಕಂಕಣ ಸೂರ್ಯಗ್ರಹಣ ವೀಕ್ಷಣೆ

Update: 2020-06-21 18:12 IST

ಬೆಂಗಳೂರು, ಜೂ.21: ಮೋಡಗಳ ನಡುವೆಯೂ ದಶಕದಲ್ಲಿ ಒಂದು ಬಾರಿ ಉದ್ಭವಿಸುವ ಕಂಕಣ ಸೂರ್ಯಗ್ರಹಣ ವೀಕ್ಷಣೆಗೆ ಲಾಲ್ ಬಾಗ್ ಬಂಡೆ ಸೇರಿದಂತೆ ಹಲವೆಡೆ ಅವಕಾಶ ಮಾಡಿಕೊಡಲಾಗಿತ್ತು. ಹಲವು ಉತ್ಸಾಹಿಗಳು ಸೋಲಾರ್ ಕನ್ನಡಕ, ವೆಲ್ಡರ್ ಗಳನ್ನು ಬಳಸಿಕೊಂಡು ಗ್ರಹಣ ವೀಕ್ಷಿಸಿದರು.

ಬೆಳಗ್ಗೆಯಿಂದಲೇ ಮೋಡದ ವಾತಾವರಣ ಇತ್ತಾದರೂ ಆಗೊಮ್ಮೆ, ಈಗೊಮ್ಮೆ ಮೋಡಗಳು ಬಂದುಹೋಗುತ್ತಿದ್ದವು. ಮೋಡಗಳಿಲ್ಲದಿದ್ದರೆ ನಿರಂತರವಾಗಿ ಗ್ರಹಣ ವೀಕ್ಷಣೆ ಒಳ್ಳೆಯದಲ್ಲವಾದುದರಿಂದ ವೀಕ್ಷಣೆಗೆ ಯಾವುದೇ ತೊಂದರೆಯಾಗಲಿಲ್ಲ.

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಹಾಗೂ ರಾಜ್ಯ ನಡಿಗೆದಾರರ ಒಕ್ಕೂಟದ ಸಹಯೋಗದೊಂದಿಗೆ ಲಾಲ್‍ಬಾಗ್ ಬಂಡೆ ಮೇಲೆ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿ ಜ್ಞಾನ ವಿಜ್ಞಾನ ಸಮಿತಿ ಮತ್ತು ವಿಜ್ಞಾನ ಪರಿಷತ್ತಿನ ಸದಸ್ಯರು, ಅಧ್ಯಯನಕಾರರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ವೇಳೆ ಮಾಸ್ಕ್ ಧರಿಸಿ, ಸುರಕ್ಷಿತ ಅಂತರ ಕಾಯ್ದುಕೊಂಡು ಗ್ರಹಣ ವೀಕ್ಷಿಸಿದರು.

ಶಿಕ್ಷಣ ತಜ್ಞ ಡಾ. ಎಚ್.ನರಸಿಂಹಯ್ಯ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಅವರಿಗೆ ಪ್ರಿಯವಾದ ಉಪ್ಪಿಟ್ಟು ಮತ್ತು ಮಂಡಕ್ಕಿಯನ್ನು ವ್ಯವಸ್ಥೆ ಮಾಡಲಾಗಿತ್ತು. ಗ್ರಹಣದ ವೇಳೆ ಊಟ, ತಿಂಡಿ ಸೇವನೆ ಒಳ್ಳೆಯದಲ್ಲ ಎನ್ನುತ್ತಾರೆ ಕೆಲವು ಜ್ಯೋತಿಷಿಗಳು. ಆದರೆ ಗ್ರಹಣದ ಸಂದರ್ಭದಲ್ಲಿಯೇ ಉಪಾಹಾರ ಸೇವಿಸಿ, ಜನರಲ್ಲಿ ಗ್ರಹಣದ ಬಗೆಗಿದ್ದ ಮೂಢನಂಬಿಕೆಯನ್ನು ದೂರ ಮಾಡಿದೆವು ಎಂದು ಸದಸ್ಯರು ತಿಳಿಸಿದರು.

ನಗರದ ಜವಾಹರಲಾಲ್ ನೆಹರು ತಾರಾಲಯ ಆವರಣದಲ್ಲಿ ಸಿಲೊಸ್ಟ್ಯಾಟ್ ಉಪಕರಣದ ಮೂಲಕ ಗ್ರಹಣ ಸೆರೆ ಹಿಡಿದು ಅದರ ನೇರ ಪ್ರಸಾರವನ್ನು ತಾರಾಲಯದ ವೆಬ್‍ಸೈಟ್‍ನಲ್ಲಿ ಪ್ರಸಾರ ಮಾಡಲಾಯಿತು. ಇದನ್ನು ಲಕ್ಷಾಂತರ ಮಂದಿ ವೀಕ್ಷಿಸಿದರು. ತಾರಾಲಯದಲ್ಲಿ ನಾಲ್ವರು ವಿದ್ಯಾರ್ಥಿಗಳು ಉಪಕರಣಗಳನ್ನು ನಿರ್ವಹಿಸಿದರು ಎಂದು ಜವಾಹರಲಾಲ್ ನೆಹರು ತಾರಾಲಯದ ವೈಜ್ಞಾನಿಕ ಅಧಿಕಾರಿ ಬಿ.ಆರ್. ಲಕ್ಷ್ಮಿ ತಿಳಿಸಿದರು.

ದೇವಸ್ಥಾನಗಳಲ್ಲಿ ವಿಶೇಷ ಪೂಜೆ: ನಗರದ ಬಹುತೇಕ ದೇವಾಲಯಗಳಲ್ಲಿ ಗ್ರಹಣ ಮುಗಿದ ಬಳಿಕ ದೇವಾಲಯಗಳನ್ನು ಸ್ವಚ್ಛಗೊಳಿಸಿ, ಸಂಜೆ 4ರ ನಂತರ ದೇವರಿಗೆ ಅಭಿಷೇಕ ಮಾಡಿ ವಿಶೇಷ ಪೂಜೆ ನಡೆಸಲಾಯಿತು. ಗ್ರಹಣದಿಂದ ಕೆಲವು ರಾಶಿಯವರಿಗೆ ಕಂಟಕವಿದೆ ಎಂದು ನಂಬಿದ ಭಕ್ತರು ಸಂಜೆ ಹತ್ತಿರದ ದೇವಾಲಯಗಳಿಗೆ ತೆರಳಿ ದೇವರ ದರ್ಶನ ಪಡೆದರು. ಸುರಕ್ಷಿತ ಅಂತರದೊಂದಿಗೆ ಮಾಸ್ಕ್ ಧರಿಸಿ ಆಗಮಿಸಿದ್ದರು.

ಪ್ರಕೃತಿ ಸಹಜ ಕ್ರಿಯೆ ಕಂಕಣ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಇಂದು ಬಹುತೇಕರು ಮನೆಯಿಂದ ಹೊರ ಬರಲಿಲ್ಲ. ಜತೆಗೆ ಕೆಲ ಮೌಢ್ಯಗಳನ್ನ ಆಚರಿಸಿರೋದು ಕೂಡ ನಡೆದಿದೆ. ಆದರೆ, ಮೂಢನಂಬಿಕೆ ವಿರೋಧಿ ಒಕ್ಕೂಟದ ಮುಖಂಡರು ಇವತ್ತು ಗ್ರಹಣದ ವೇಳೆಯೇ ಊಟ ಮಾಡಿಕಂದಾಚಾರಗಳನ್ನ ಮುರಿದರು.

ಗ್ರಹಣದ ವೇಳೆ ಕೆಲ ಆಚರಣೆಗಳನ್ನ ಮಾಡೋದೆ ಮೂಢನಂಬಿಕೆ. ಇದನ್ನು ನಂಬಬಾರದು ಎಂದು ಹೇಳಿದ ಮೂಢನಂಬಿಕೆ ವಿರೋಧಿ ಒಕ್ಕೂಟದ ಮುಖಂಡರು, ವಿಜ್ಞಾನದೆಡೆಗೆ ನಮ್ಮ ನಡಿಗೆ ಎಂಬ ಘೋಷಣೆಯೊಂದಿಗೆ ಮೂಢನಂಬಿಕೆ ವಿರೋಧಿಸಿದರು. ಮೂಢನಂಬಿಕೆ ತೊಲಗಲಿ, ಮೂಢನಂಬಿಕೆಯನ್ನು ನಂಬಿ ಪೇಚಾಟಕ್ಕೆ ಸಿಲುಕದಿರಿ ಎಂದು ಒಕ್ಕೂಟದವರು ಮೌರ್ಯ ಸರ್ಕಲ್ ಬಳಿ ಆಹಾರ ಸೇವನೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News