ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿ ಅಸಂವಿಧಾನಿಕ: ಎಂ. ಶ್ರೀನಿವಾಸ್
ಬೆಂಗಳೂರು, ಜೂ.21: ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿ ಅಸಂವಿಧಾನಿಕವಾಗಿದೆ ಎಂದು ಅಂತರ್‍ರಾಷ್ಟ್ರೀಯ ಡಾ.ಬಿ.ಆರ್.ಅಂಬೇಡ್ಕರ್ ವಿಚಾರ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರದ ಅಧ್ಯಕ್ಷ ಎಂ. ಶ್ರೀನಿವಾಸ್ ತಿಳಿಸಿದ್ದಾರೆ.
ನಾಗಮೋಹನ್ ದಾಸ್ ಆಯೋಗದ ವರದಿ ಅಸಂವಿಧಾನಿಕವಾಗಿದ್ದು, ಪೂನಾ ಒಪ್ಪಂದ 1932ರ ಉಲ್ಲಂಘನೆ ಹಾಗೂ ಕೇಂದ್ರ ಸರಕಾರದ ಕಾಯಿದೆ 1935ರ ಸಂಪೂರ್ಣ ಉಲ್ಲಂಘನೆ ಆಗಿದೆ ಎಂದು ತಿಳಿಸಿದ್ದಾರೆ.
2011ರ ಜನಸಂಖ್ಯಾ ಆಧಾರದ ಮೇಲೆ ಶೇ.20ರಷ್ಟು ರಾಷ್ಟ್ರೀಯ ಮೀಸಲಾತಿ ನೀಡಲು ಆಯೋಗ ಶಿಫಾರಸ್ಸು ಮಾಡಿದೆ. ಪರಿಶಿಷ್ಟ ಪಂಗಡಕ್ಕೆ ಶೇ.15ರಷ್ಟು ಮೀಸಲಾತಿ ನೀಡಲು ವರದಿಯಾಗಿದೆ. ಅದರಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಡಬ್ಲ್ಯೂಎಸ್‍ಗೆ ಶೇ.10ರಷ್ಟು ಮೀಸಲಾತಿ ನೀಡಿ ಜಾರಿ ಮಾಡಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆಯೋಗದ ವರದಿ ಮುಖ್ಯವೋ, ಸಂವಿಧಾನದ ಹಕ್ಕುಗಳು ಮುಖ್ಯವೋ, ಸುಪ್ರೀಂ ಕೋರ್ಟ್ ತೀರ್ಪು ಮುಖ್ಯವೋ ಎಂಬುದು ಚರ್ಚೆಯಾಗಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಅಲ್ಲದೇ ನಿವೃತ್ತ ಪ್ರೊ. ನಜೀನಿ ಬೇಗ್ ಮತ್ತು ದಲಿತ ಸಂಘರ್ಷ ಒಕ್ಕೂಟ ಸಮಿತಿ ಅಧ್ಯಕ್ಷ ಅಣ್ಞಯ್ಯ ಅವರು, ಕಾನೂನು ಉಲ್ಲಂಘನೆ ಮಾಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಅವರ ಮೇಲೆ ಪಿಸಿಆರ್ ಕಾಯಿದೆ 1955ನ್ನು ಜಾರಿಗೊಳಿಸಬೇಕು. ಇಲ್ಲದಿದ್ದರೆ ರಾಷ್ಟ್ರದಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಪ್ರಕಟನೆ ಮೂಲಕ ಎಚ್ಚರಿಕೆ ನೀಡಿದ್ದಾರೆ.