ಬೆಂಗಳೂರು: ಕೊರೋನ ರೋಗಿಗಳ ಆರೈಕೆಯಲ್ಲಿ ವೈದ್ಯರು, ಸಿಬ್ಬಂದಿಯಿಂದ ನಿರ್ಲಕ್ಷ್ಯ; ರೋಗಿಗಳ ಆರೋಪ
ಬೆಂಗಳೂರು, ಜೂ.21: ರಾಜ್ಯದಲ್ಲಿ ಕೋವಿಡ್ 19 ಚಿಕಿತ್ಸೆಗಾಗಿಯೇ ಪ್ರತ್ಯೇಕಿಸಲ್ಪಟ್ಟಿರುವ ಆಸ್ಪತ್ರೆಗಳಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದ್ದು, ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದ್ದಂತೆಯೇ ವೈದ್ಯರು ಹಾಗೂ ಸಿಬ್ಬಂದಿ ಆರೈಕೆ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಆರಂಭದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಕಡಿಮೆಯಿದ್ದವು. ಹೀಗಾಗಿ, ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ವೈದ್ಯರು ಹಾಗೂ ಸಿಬ್ಬಂದಿ ಸಾಕಷ್ಟು ಶ್ರಮವಹಿಸಿದ್ದರು. ಆದರೆ, ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆಯೇ ಕಾಳಜಿ ವಹಿಸಿ ಆರೈಕೆ ಮಾಡುತ್ತಿದ್ದ ಆಸ್ಪತ್ರೆಗಳು ಈಗ ಅವ್ಯವಸ್ಥೆಯ ಅಗರವಾಗಿ ಪರಿವರ್ತನೆಯಾಗಿವೆ ಎಂಬ ಆರೋಪ ಕೇಳಿಬಂದಿದ್ದು, ಆಸ್ಪತ್ರೆಗಳ ಅವ್ಯವಸ್ಥೆ ಕುರಿತು ಹಲವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಲೋಡ್ ಮಾಡಿದ್ದಾರೆ.
ಬೆಂಗಳೂರಿನಲ್ಲಿಯೇ ಸಮಸ್ಯೆ: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿಂದು ಒಂದಿಷ್ಟು ರೋಗಿಗಳನ್ನು ನಗರದ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಅಲ್ಲಿಗೆ ಹೋದ ಮೊದಲ ದಿನವೇ ಊಟಕ್ಕಾಗಿ ಪರದಾಡುವಂತಾಯಿತು. ಶೌಚ ಗೃಹದಲ್ಲಿ ಸ್ವಚ್ಛತೆಯಿಲ್ಲ. ಕೈ ತೊಳೆಯಲು ಸೋಪು ಇಲ್ಲ. ಬಳಸಲು ಪ್ರತ್ಯೇಕ ಬಕೆಟ್ ಹಾಗೂ ಮಗ್‍ಗಳಿಲ್ಲ ಮತ್ತು ಸ್ವಚ್ಛತೆಯಿಲ್ಲ ಎಂದು ರೋಗಿಗಳು ಆರೋಪಿಸಿದ್ದಾರೆ.
ಆಸ್ಪತ್ರೆಯ ಅವ್ಯವಸ್ಥೆಯ ಕುರಿತು ವಿಡಿಯೋ ಮಾಡಿ ಕಳುಹಿಸುವ ಮೂಲಕ ತಮ್ಮ ಅಳಲು ತೋಡಿಕೊಂಡಿದ್ದಾರೆ. ಈ ಅವ್ಯವಸ್ಥೆಯ ಬಗ್ಗೆ ಆರೋಗ್ಯ ಸಚಿವರು ಹಾಗೂ ಮುಖ್ಯಮಂತ್ರಿ ಕೂಡಲೇ ಕ್ರಮ ಕೈಗೊಳ್ಳಬೇಕು ಒತ್ತಾಯಿಸಿದ್ದಾರೆ.
ಪ್ರತಿಕ್ರಿಯೆ: ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಮೊದಲು ಸೋಂಕಿತರಿಗೂ ಚಿಕಿತ್ಸೆ ನೀಡಲಾಗುತ್ತಿತ್ತು. ನಂತರ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರ ಪರೀಕ್ಷೆಗೆ ಐಸೋಲೇಶನ್ ವ್ಯವಸ್ಥೆ ಮಾಡಲಾಗಿತ್ತು. ಆದರೆ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಿದ ಕಾರಣ ಏಕಾಏಕಿ ಕೋವಿಡ್ ಚಿಕಿತ್ಸಾ ಆಸ್ಪತ್ರೆಯಾಗಿ ಪರಿವರ್ತಿಸಲಾಯಿತು. ಹೀಗಾಗಿ, ವ್ಯವಸ್ಥೆ ಕಲ್ಪಿಸಲು ಸಮಸ್ಯೆಯಾಗಿದೆ ಎಂದು ಆಸ್ಪತ್ರೆಗಳ ಮೂಲಗಳು ತಿಳಿಸಿವೆ.