×
Ad

ನೂತನ ಕೈಗಾರಿಕಾ ನೀತಿಯಿಂದ ದೊಡ್ಡ ಮಟ್ಟದ ಉದ್ಯೋಗ ಸೃಷ್ಟಿ: ಸಿಎಂ ಯಡಿಯೂರಪ್ಪ

Update: 2020-06-22 14:19 IST

ಬೆಂಗಳೂರು, ಜೂನ್ 22: ರಾಜ್ಯ ಸರ್ಕಾರ ನೂತನ ಕೈಗಾರಿಕಾ ನೀತಿಯನ್ನು 2019-24ನ್ನು ಜಾರಿಗೆ ತಂದು ದೊಡ್ಡ ಮಟ್ಟದ ಉದ್ಯೋಗ ಸೃಷ್ಟಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಅವರು ಇಂದು ಸಿ.ಐ.ಐ. ಆಯೋಜಿಸಿದ್ದ 12ನೇ ಹೋರಾಸಿಸ್ ಇಂಡಿಯಾ ಸಭೆಯಲ್ಲಿ ಪಾಲ್ಗೊಂಡು ‘ಕೋವಿಡ್ ನಂತರ ಆರ್ಥಿಕ ಅಭಿವೃಧ್ಧಿ’ ಎಂಬ ವಿಷಯ ಕುರಿತು ಮಾತನಾಡುತ್ತಿದ್ದರು.

ಕೈಗಾರಿಕಾ ವಲಯದ ಸದಸ್ಯರನ್ನೊಳಗಿಂಡ ವಿಶೇಷ ಟಾಸ್ಕ್ ಫೋರ್ಸ್ ನ್ನು ರಚಿಸಲಾಗಿದ್ದು, ರಾಜ್ಯಕ್ಕೆ ಹೊಸದಾಗಿ ಹೂಡಿಕೆಗಳನ್ನು ಗುರುತಿಸಿ ತರಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಸ್ಯಾಂಡ್ ಬಾಕ್ಸ್ ನಿಯಂತ್ರಣಕ್ಕಾಗಿ ಸರ್ಕಾರವು ಕರ್ನಾಟಕ ಆವಿಷ್ಕಾರ ಪ್ರಾಧಿಕಾರವನ್ನು ಸ್ಥಾಪಿಸಲು ಕಾಯ್ದೆಯನ್ನು ಅನುಮೋದಿಸಿದೆ ಎಂದರು.

ರಾಜ್ಯವು ಕೋವಿಡ್ - 19 ಸೋಂಕನ್ನು ನಿಯಂತ್ರಿಸಲು 24 ಗಂಟೆಗಳ ಕಾಲವೂ ಕಾರ್ಯನಿರ್ವಹಿಸುತ್ತಿದ್ದು, ಈ ಸವಾಲನ್ನು ಎದುರಿಸಲು ಸಹಕರಿಸುತ್ತಿರುವ ವೈದ್ಯರು, ನಾಗರಿಕ ಸಂಸ್ಥೆಗಳು, ಪೊಲೀಸ್ ಮತ್ತು ಸಾರ್ವಜನಿಕರಿಗೆ ಮುಖ್ಯಮಂತ್ರಿ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಅರ್ಪಿಸಿದರು.

ಲಾಕ್ ಡೌನ್ ನ್ನು ಸಡಿಲಗೊಳಿಸಿ ಕ್ರಮೇಣವಾಗಿ ಆರ್ಥಿಕತೆಯನ್ನು ಪ್ರಾರಂಭಿಸಿದ ಮೊದಲ ರಾಜ್ಯ ಕರ್ನಾಟಕ. ಶಾಲೆಗಳು, ಮನೋರಂಜನಾ ಸೌಲಭ್ಯಗಳು, ಮೆಟ್ರೋ ರೈಲು ಮತ್ತು ಅಂತಾರಾಷ್ಟ್ರೀಯ ವಿಮಾನ ಯಾನವನ್ನು ಹೊರತುಪಡಿಸಿ ಇನ್ನೆಲ್ಲ ಚಟುವಟಿಕೆಗಳು ಪುನರಾರಂಭವಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಶೇ 80 ರಷ್ಟು ಕೈಗಾರಿಕೆಗಳು ಶೇ.60ರ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಇದು ನಿಧಾನವಾಗಿ ಸುಧಾರಿಸುತ್ತಿದೆ. ಎಫ್.ಡಿ.ಐ. ಹೂಡಿಕೆಗಳನ್ನು ಆಕರ್ಷಿಸುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಇರುವುದಾಗಿ ಅವರು ತಿಳಿಸಿದರು.

ಕಳೆದ ವಾರಗಳಲ್ಲಿ ಕಾರ್ಮಿಕರಿಗೆ ಸಂಬಂಧಿಸಿದ ಕಾಯ್ದೆಗಳನ್ನು ಸರಳೀಕೃತಗೊಳಿಸಲಾಗಿದ್ದು, ಹೂಡಿಕೆಗಳನ್ನು ಆಕರ್ಷಿಸಲು ಈ ಉಪಕ್ರಮ ಸಹಕಾರಿಯಾಗಲಿದೆ ಎಂದರು.

ಆರ್ಥಿಕತೆಯ ಎಲ್ಲ ವಲಯಗಳನ್ನು ಜಾಗರೂಕತೆಯಿಂದ ತೆರೆಯಲು ಸರ್ಕಾರ ಆದ್ಯತೆ ನೀಡಿದ್ದು, ಪ್ರವಾಸೋದ್ಯಮಕ್ಕೂ ಹೆಚ್ಚಿನ ಒತ್ತು ನೀಡಿ ಪ್ರವಾಸಿಗರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಂಡು ಉತ್ತೇಜನಾ ಚಟುವಟಿಕೆಗಳನ್ನು ಕೈಗೊಳ್ಳಲಿದೆ ಎಂದು ತಿಳಿಸಿದರು.

ಕೋವಿಡ್-19 ಸೋಂಕಿನ ಆಘಾತದಿಂದ ನಾವು ಹೊರಬರುತ್ತಿದ್ದು, ಕೈಗಾರಿಕಾ ವಲಯದ ಸನ್ನಿವೇಶವು ಶೀಘ್ರದಲ್ಲಿಯೇ ಸಹಜತೆಯತ್ತ ಮರಳಲಿದೆ ಎಂದು ಮುಖ್ಯಮಂತ್ರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News