ಕೋವಿಡ್-19 ಸಮುದಾಯಕ್ಕೆ ಹರಡದಂತೆ ಕ್ರಮ: ಡಿಸಿಎಂ ಅಶ್ವಥ್ ನಾರಾಯಣ

Update: 2020-06-22 12:12 GMT

ಬೆಂಗಳೂರು, ಜೂ.22; ಕೊರೋನ ಸೋಂಕು ಸಮುದಾಯಕ್ಕೆ ಹರಡದಂತೆ ತಡೆಯಲು ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮತ್ತೊಮ್ಮೆ ಲಾಕ್‍ಡೌನ್ ಮಾಡುವ ಅಗತ್ಯವಿಲ್ಲ. ಕೋವಿಡ್-19 ನಿಯಂತ್ರಣ ಸಂಬಂಧ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಜನತೆ ಅನಗತ್ಯವಾಗಿ ಭೀತಿಗೊಳಗಾಗಬೇಕಾದ ಅಗತ್ಯವಿಲ್ಲವೆಂದು ತಿಳಿಸಿದ್ದಾರೆ.

ಹೊರರಾಜ್ಯದಿಂದ ಬಂದವರಿಂದ ಕೊರೋನ ಸೋಂಕು ಹೆಚ್ಚಾಗುತ್ತಿರುವುದು ನಿಜವಾದರೂ ಅದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲಾಗುತ್ತಿದೆ. ಸದ್ಯಕ್ಕೆ ಸೋಂಕು ತಗುಲಿದ ಶೇ.5ರಿಂದ 6ಮಂದಿಗೆ ಮಾತ್ರ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದವರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಕನಕಪುರ ಭಾಗದಲ್ಲಿ ಕೊರೋನ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಅಲ್ಲಿನ ಜನತೆ ಸ್ವಯಂಪ್ರೇರಿತರಾಗಿ ಲಾಕ್‍ಡೌನ್ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಆದರೆ, ಸರಕಾರದಿಂದ ಅಧಿಕೃತವಾಗಿ ಲಾಕ್‍ಡೌನ್ ಘೋಷಣೆಯಾಗಿಲ್ಲವೆಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News