ಗುರು ರಾಘವೇಂದ್ರ ಬ್ಯಾಂಕ್ ಬಹುಕೋಟಿ ಅವ್ಯವಹಾರ ಆರೋಪ: ಸಾಲಗಾರರ ಮನೆ ಮೇಲೆ ಎಸಿಬಿ ದಾಳಿ

Update: 2020-06-22 17:23 GMT

ಬೆಂಗಳೂರು, ಜೂ.22: ಬಸವನಗುಡಿ ಶ್ರೀ ಗುರುರಾಘವೇಂದ್ರ ಸಹಕಾರಿ ಬ್ಯಾಂಕಿನ ಬಹುಕೋಟಿ ಅವ್ಯವಹಾರ ಆರೋಪ ಪ್ರಕರಣ ಸಂಬಂಧ ಕೋಟ್ಯಂತರ ರೂಪಾಯಿ ಸಾಲ ಪಡೆದು ವಾಪಸ್ ನೀಡದ ಮೂವರು ವ್ಯಕ್ತಿಗಳ ಮನೆಗಳ ಮೇಲೆ ಎಸಿಬಿ ತನಿಖಾಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ಮುಂದುವರೆಸಿದ್ದಾರೆ.

ಇಲ್ಲಿನ ಯಶವಂತಪುರ ಓರಿಯಾನ್ ಮಾಲ್ ಬಳಿ ನೆಲೆಸಿರುವ ಉದ್ಯಮಿ ರಘುನಾಥ್, ಎಚ್‍ಆರ್‍ಬಿಆರ್ ಲೇಔಟ್ ನಿವಾಸಿ ಜಸ್ವಂತ್ ರೆಡ್ಡಿ ಹಾಗೂ ರಾಮಂಜನೇಯನಗರದ ರಾಮಕೃಷ್ಣ ಎಂಬವರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

ಕೆಲವು ವ್ಯಕ್ತಿಗಳು ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕಿನಿಂದ ಕೋಟ್ಯಂತರ ರೂ. ಸಾಲವನ್ನು ಬೇರೆ ಬೇರೆ ನಕಲಿ ಖಾತೆಗಳ ಮೂಲಕ ಪಡೆದು ವಾಪಸ್ ಬ್ಯಾಂಕಿಗೆ ಹಿಂತಿರುಗಿಸದೇ ಎನ್‍ಪಿಎ ಮಾಡಿಸಿ ಸಾರ್ವಜನಿಕರ ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ಮಾಹಿತಿ ಎಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಅದೇ ರೀತಿ, ಈ ಮೂವರು ವ್ಯಕ್ತಿಗಳು ಉದ್ಯಮಿಗಳಾಗಿದ್ದು, ಬ್ಯಾಂಕ್‍ನಿಂದ ಕೋಟ್ಯಂತರ ರೂ. ಸಾಲ ಪಡೆದು ಎನ್‍ಪಿಎ ಮಾಡಿಸಿ ಬ್ಯಾಂಕಿಗೆ ವಾಪಸ್ಸು ನೀಡಿಲ್ಲ. ಈ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಲಾಗಿದೆ ಎಂದು ಎಸಿಬಿ ತಿಳಿಸಿದೆ.

ಏನಿದು ಪ್ರಕರಣ?: ಸಾವಿರಾರು ಗ್ರಾಹಕರಿಗೆ ಠೇವಣಿ ಹಿಂತಿರುಗಿಸದೆ ವಂಚಿಸಿರುವ ಆರೋಪಕ್ಕೊಳಗಾಗಿರುವ ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ಪ್ರಕರಣ ಸಂಬಂಧ ಜೂ.18ರಂದು ಎಸಿಬಿ ಎಫ್‍ಐಆರ್ ದಾಖಲಿಸಿಕೊಂಡು, ಬ್ಯಾಂಕ್ ಸೇರಿದಂತೆ ಐದು ಕಡೆಗಳಲ್ಲಿ ದಾಳಿ ನಡೆಸಿತ್ತು.

ಬಹುಕೋಟಿ ಸಾಲ ?

* ರಘುನಾಥ್-153 ಕೋಟಿ ರೂ.

* ಜಸ್ವಂತ್ ರೆಡ್ಡಿ- 139 ಕೋಟಿ ರೂ.

* ರಾಮಕೃಷ್ಣ- 46 ಕೋಟಿ ರೂ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News